ಅಂದು ಗೋಪಾಲರಾಯರ ಪಾಲಿಗೆ ವಿಶೇಷ ದಿನವಾಗಿತ್ತು. ಅಂದು ಅವರಿಗೆ 72 ವರ್ಷವಾಗಿತ್ತು. ಬ್ಯಾಂಕಿಗೆ ಓಡೋಡಿ ಹೋಗಿದ್ದರು. ಅಂದು ಅವರ 25 ವರ್ಷದ ಕನಸು ನನಸಾಗುವುದರಲ್ಲಿತ್ತು. ಆ ದಿನಕ್ಕಾಗಿಯೇ ಅವರು 25 ವರ್ಷ ಕಾದಿದ್ದರು. ಸರಕಾರಿ ಶಾಲೆಯೊಂದರಲ್ಲಿ ಅಧ್ಯಾಪಕನಾಗಿ, ನಿವೃತ್ತಿಯ ನಂತರ ಸಮೀಪದ ದೇವಸ್ಥಾನದಲ್ಲಿ ಮೇಲ್ವಿಚಾರಕನಾಗಿ ತಾನು ಸಂಪಾದಿಸಿದ ಹಣದಲ್ಲಿ ಪ್ರತಿ ತಿಂಗಳು ಒಟ್ಟು 25 ವರ್ಷ ಅಂದರೆ 300 ತಿಂಗಳು 4000 ರೂ. ಜಮೆ ಮಾಡಲು ಅದೆಷ್ಟೊ ಕಷ್ಟ ಪಟ್ಟಿದ್ದರು. ಕ್ಷಣಿಕ ಸುಖ ತ್ಯಜಿಸಿದ್ದರು, ತಿಂಗಳು ಮುಗಿಯುತ್ತಿದ್ದಂತೆ ಅದೆಷ್ಟೋ ಬಾರಿ ಬೇಗ ಮನೆಗೆ ಬಂದು ಗಂಜಿ ಕುಡಿದು ಮಲಗಿದ್ದರು (ಮನೆಗೆ ಲೇಟ್ ಆಗಿ ಹೋದರೆ ಅಂಗಡಿ ಅಲ್ಲಿ, ಪೇಟೆಯಲ್ಲಿ ಹಣ ಖರ್ಚಾಗುತಿತ್ತು )
ಹಿಂದಿನ ಕಷ್ಟ ಗಳು ಒಂದು ಕ್ಷಣ ನೆನಪಿಗೆ ಬಂದು ಮರೆಯಾಗಿದ್ದವು. ಇಂದು ಖುಷಿಯಿಂದ ರಾಯರು ಬೆಳಿಗ್ಗೆ 8.30 ಕ್ಕೆ ಬ್ಯಾಂಕಿಗೆ ಬಂದಿದ್ದರು. ಬ್ಯಾಂಕ್ ಏನೋ ತೆರೆದಿತ್ತು. ಮ್ಯಾನೇಜರ್ ಇನ್ನೂ ಬಂದಿರಲಿಲ್ಲ .ಕುರ್ಚಿಯಲ್ಲಿ ಕುಳಿತವರಿಗೆ ಮತ್ತೆ ಹಳೆಯ ನೆನಪು ಕಾಡಲಾರಂಭಿಸಿತು.
ಅಂದು ಆರಂಭದ ದಿನಗಳಲ್ಲಿ ಅವರ 25 ವರ್ಷದ ಯೋಜನೆ ಕೇಳಿ ಮೊದಲು ನಕ್ಕಿದ್ದು ನನ್ನ ಸರೋಜಾ! ನೋಡು ಸರೋಜಾ ಈಗ ನನಗೆ 48 ವರ್ಷ, ಇವತ್ತಿಂದ 25 ವರ್ಷ ನನ್ನ ತಿಂಗಳ ಸಂಬಳ ದಲ್ಲಿ ನನ್ನ ಅಗತ್ಯತೆ ಗಳನ್ನೂ ನಿಲ್ಲಿಸಿ ಪ್ರತಿ ತಿಂಗಳು 4000 ರೂ. ಬ್ಯಾಂಕಿಗೆ ಕಟ್ಟುತ್ತೇನೆ. ಮುಂದಿನ 25 ವರ್ಷ ದಲ್ಲಿ ಅದು 20 ಲಕ್ಷ ದಾಟಿರುತ್ತದೆ, ಅಂದು ಆದು ನಮ್ಮ ಒಬ್ಬನೇ ಮಗ ಪ್ರಮೋದನದ್ದು ಅಷ್ಟು ದೊಡ್ಡ ಹಣ. ಅದು ಅವನು ಕೊನೆಯ ತನಕ ನಮ್ಮ ಜೊತೆಯೇ ಉಳಿಸಿಕೊಳ್ಳುವಲ್ಲಿ ನೆರವಾಗಲಿದೆ. ನಮ್ಮ ಕೊನೆಯ ದಿನಗಳಲ್ಲಿ ಈ ನಿಧಿ ಉಂಟು ಎಂಬ ಕಾರಣಕ್ಕಾದರೂ ಮಗ ಸೊಸೆ ಖಂಡಿತ ನಮ್ಮನ್ನು ಬಿಟ್ಟು ದೂರ ಹೋಗಲಾರರು ಎಂದಾಗ ಸರೋಜಾ ನಕ್ಕಿದ್ದಳು.
25 ವರ್ಷ ನಾವ್ ಇರ್ತೀವಾ ? ಸುಮ್ನೆ ಹುಚ್ಚು ನಿಮಗೆ ! ಮಗ-ಮಗ ಎಂದು ಸುಂದರವಾದ ಇಂದಿನ ದಿನಗಳನ್ನು ಹಾಳು ಮಾಡಿ ಕೊಳ್ಳುತ್ತೀರಿ. ಅದೂ ಅಲ್ಲದೆ ಯಾರಿಗೆ ಗೊತ್ತು….. 25 ವರ್ಷದ ಬಳಿಕ ನಿಮ್ಮ ಮಗನ ಪಾಲಿಗೆ 20 ಲಕ್ಷ ನಗಣ್ಯವಾಗಬಲ್ಲದು ಅಥವಾ ನಿಮ್ಮ ಜೀವನ ಪೂರ್ತಿ ಸಂಗ್ರಹಿಸಿದ್ದು ಅವರ ತಿಂಗಳ ಸಂಬಳ ವಾಗಿರಬಾರದೇಕೆ? ಅಂದಿದ್ದಳು.
ಹೇಳಿದಂತೆ ಕಳೆದ ವರ್ಷ ರಾಯರ ಒಬ್ಬಂಟಿ ಮಾಡಿ ಹೋಗಿಯೇ ಬಿಟ್ಟಿದ್ದರು. ರಾಯರ ಕಣ್ಣಲ್ಲಿ ನೀರಿತ್ತು.
ಆಕೆ ಹೇಳಿದಂತೆ ಆಗಿತ್ತು. ಮೊದ ಮೊದಲು ಪ್ರತಿ ತಿಂಗಳು 4000 ಉಳಿಸುವುದು ಅಷ್ಟೇನು ಗೊತ್ತಾಗುತ್ತಿರಲಿಲ್ಲ, ಆದರೆ ಕೊನೆ ಕೊನೆಗೆ ತುಂಬಾ ಕಷ್ಟವಾಗುತಿತ್ತು, ಅದಕ್ಕಾಗಿ ತಿಂಗಳ ಕೊನೆಯ ವಾರದ ಟೀ, ಪಾರ್ಟಿ, ಪಾರ್ಕ್, ಹೋಟೆಲ್ ಎಲ್ಲವನ್ನು ತ್ಯಾಗ ಮಾಡಿದ್ದರು. 2 ತಿಂಗಳಿಗೊಮ್ಮೆ ಪತ್ನಿಗೆ ಪ್ರೀತಿಯಿಂದ ಕೊಡಿಸುತಿದ್ದ ಸೀರೆ, ಮಲ್ಲಿಗೆ ಹೂವನ್ನು ಕೂಡ ನಿಲ್ಲಿಸಿ ಬಿಟ್ಟಿದ್ದರು. ಒಟ್ಟಾರೆ ತಮ್ಮ ಸಂಪೂರ್ಣ ಜೀವನದ ಸುಖಕರ ಕ್ಷಣವನ್ನು ತ್ಯಾಗ ಮಾಡಿಗಳಿಸಿದ ದುಡ್ಡಾಗಿತ್ತು ಅದು.
ಇಂದು ಆ ನಿಧಿ ಸಿಗುವುದರಲ್ಲಿತ್ತು. ಈ ಕ್ಷಣ ವನ್ನು ಆಸ್ವಾದಿಸಲು ಇವರ ಪ್ರೀತಿಯೇ ಇರಲಿಲ್ಲ ಎಂಬುದು ಮಾತ್ರ ವಿಧಿ ಬರೆದ ಕತೆ ಯಾಗಿತ್ತು. ಅಷ್ಟರಲ್ಲಿ ಮ್ಯಾನೇಜರ್ ಬಂದಿದ್ದರು… ಗೋಪಾಲರು ಆಗ ಹಳೆಯ ನೆನಪಿನಿಂದ ಹೊರಬಂದಿದ್ದರು ಒದ್ದೆಯಾದ ಕಣ್ಣು ಗಳೊಂದಿಗೆ…
ಮ್ಯಾನೇಜರ್ ಕೇಳಿದ್ದರು.. ಏನು ಸರ್ ಕಣ್ಣು ಒದ್ದೆ ಯಾಗಿವೆ? ಭಾಗ್ಯ ಲಕ್ಷ್ಮಿ ನಿಮ್ಮ ಕಣ್ಣನ್ನು ಒದ್ದೆಯಾಗಿಸಿರಬೇಕು ಅಲ್ಲವೇ ? ಎಂದರು.
ಇವರ ಅಸೆಯಂತೆ ಮಗನನ್ನು ನಾಮಿನಿ ಮಾಡಿ ಕಳೆದ ವರ್ಷ 20 ಲಕ್ಷ ವನ್ನು FD ಇಟ್ಟಿದ್ದರು. ಇಂದು 1 ಲಕ್ಷದ 30 ಸಾವಿರದಷ್ಟು ಹಣ ಕೈಸೇರಿತ್ತು. ಬಡ್ಡಿಯ ರೂಪದಲ್ಲಿ ಅದರಲ್ಲಿ ಪ್ರಮೋದನ ಮಕ್ಕಳ ಹೆಸರಲ್ಲಿ 25000 ದ್ದು 2 FD ಮಾಡಿದ್ದರು. ಮತ್ತೆ 50,000 ಈ ವರ್ಷದ ಖರ್ಚಿಗೆ ತಮ್ಮ ಉಳಿತಾಯ ಖಾತೆಯ ಗೆ ವರ್ಗಾಯಿಸಿದ್ದರು. ಮತ್ತೆ 2000 ದ 15 ನೋಟುಗಳೊಂದಿಗೆ ಬೇಕಾದ ಬಟ್ಟೆ ಗಳನ್ನು ಕೊಂಡು ಮನೆಗೆ ಹೋದರು. ಇಂದು ಈ ವಿಷಯವನ್ನು ಈ ಜಾಕ್-ಪಾಟ್ ನ ವಿವರವನ್ನು ಮಗನಿಗೆ ಹೇಳಬೇಕು ಎಂದು ಕೊಂಡು ಲಿವಿಂಗ್ ರೂಮ್ಗೆ ಮಗ ಸೊಸೆ ಮೊಮ್ಮಕ್ಕಳನ್ನು ಕರೆದರು. ಆ ಕ್ಷಣ ಕೂಡಾ ಸರೋಜಾ ಇರಬೇಕಿತ್ತು ಎಂದೆನಿಸಿತ್ತು ಅವರಿಗೆ .
ತನ್ನ ಲೆಕ್ಕಾಚಾರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತೋರಿಸಬೇಕಿತ್ತು ಅವಳಿಗೆ. ಮೊಮಕ್ಕಳನ್ನು ಕರೆದು ಹೊಸ ಬಟ್ಟೆ ಕೊಟ್ಟರು. 2ನೇ ತರಗತಿಯ ಮೊಮ್ಮಗ ಬಣ್ಣ ಚೆಂದ ಇಲ್ಲ ಎಂದು ರಂಪಾಟ ಮಾಡಿದರೆ, 5 ನೇ ತರಗತಿಯ ಮೊಮ್ಮಗಳು ಇದು ಓಲ್ಡ್ ಫ್ಯಾಷನ್ ಎಂದು ಮುಖ ದಪ್ಪ ಮಾಡಿ ಅಜ್ಜ ಕೊಟ್ಟ ಡ್ರೆಸ್ ತೆಗೆದು ಕೊಂಡಳು.
ಮಗನನ್ನು ಕರೆದು 2 ಮಕ್ಕಳ ಹೆಸರಲ್ಲಿ ಇದ್ದ 25000ರೂ ಯ FD ಬಾಂಡ್ ಕೊಟ್ಟ ಮಗ ಥ್ಯಾಂಕ್ಸ್ ಮಾತ್ರ ಅಂದಿದ್ದ ಗೋಪಾಲರಿಗೆ ಗೊತ್ತಾಗಿತ್ತು ತಾನೆಣಿಸಿದಷ್ಟು ದೊಡ್ಡ ನಿಧಿ ಆಗಿರಲಿಲ್ಲ ಅವನ ಪಾಲಿಗೆ. ಸೊಸೆ ಮಾಲಾಳಿಗೆ ತಾನು ತಂದ 5000 ರೂಪಾಯಿಯ ಸೀರೆ ಹಸ್ತಾಂತರಿಸಿದರು. ನಗು ಮುಖದೊಂದಿಗೆ ಥ್ಯಾಂಕ್ಸ್ ಮಾವ ಎಂದಿದ್ದಳು. ಅಲ್ಲೇ ಬದಿಗೆ ಹೋಗಿ ಪ್ಯಾಕೆಟ್ ಹರಿದು ನೋಡಿ ಮೂಗು ಮುರಿದಿದ್ದಳು ಅಷ್ಟೇನು ಖುಷಿ ಯಾಗಿರಲಿಲ್ಲ.
ಆಕೆಯಾದರೂ ಮಕ್ಕಳು ಹೇಳಿದಂತೆ ನೇರ ವಾಗಿ ಹೇಳದೆ ಸುಮ್ಮನಿದ್ದಳು. ಇದೆ 5000 ರೂಪಾಯಿಯ ಸೀರೆಗಾಗಿ ಅದೆಷ್ಟು ತಿಂಗಳು ನನ್ನ ಸರು ಗೆ ಸೀರೆ ತಂದು ಕೊಟ್ಟಿರಲಿಲ್ಲ. ತಾನು 5000 ಬಿಡಿ, 500 ರೂ ಸೀರೆ ತಂದಿದ್ದರೂ ನನ್ನ ಸರುವಿನ ಮುಖ ಇಷ್ಟಗಲ ವಾಗುತಿದ್ದವು.. ಅಂದು ಮತ್ತೆ ಹಳೆಯ ನೆನಪುಗಳು…. ಕಣ್ಣು ಮುಚ್ಚಿ ನುಂಗಿಕೊಂಡರು ಗೋಪಾಲ ರಾಯರು.
ಇನ್ನು 20 ಲಕ್ಷದ ಮುಖ್ಯ ವಿಷಯ ಹೇಳಬೇಕಿತ್ತು ಅಷ್ಟರಲ್ಲಿ ಸೊಸೆ ಮಾಲಾ ಬಾಯಿ ತೆರೆದಿದ್ದಳು. ಮಾವ ಒಂದು ವಿಷಯ ಹೇಳಬೇಕಿತ್ತು ನಿಮಗೆ ಎಂದವಳೇ ಗಂಡನ ಮುಖ ನೋಡುತ್ತಾಳೆ. ಈ ಬಾರಿ ಪ್ರಮೋದನಿಗೆ ಮಾತಾಡಲೇ ಬೇಕಿತ್ತು. ಅಪ್ಪ ನಾವು ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಅಮೇರಿಕಾ ಹೊಗ ಬೇಕೆಂದು ನಿರ್ಧರಿಸಿದ್ದೇವೆ. ಭಾರತದಲ್ಲಿ ನಮ್ಮ ಕೆಲಸ ನೋಡಿದ ನಮ್ಮ ಕಂಪೆನಿಯ ಅಮೇರಿಕಾದ ಬ್ರಾಂಚ್ ಗೆ ನಮಗಿಬ್ಬರಿಗೂ ಪ್ರಮೋಷನ್ ಮಾಡಿದ್ದಾರೆ. ಇಲ್ಲಿಯ ಸಂಬಳದ 10 ಪಟ್ಟು ಜಾಸ್ತಿ ಸಂಬಳ ಇದೆ ಅಲ್ಲಿ, ಬರುವ ವಾರವೇ ಕುಟುಂಬ ಸಮೇತ ಅಮೆರಿಕಾ ಗೆ ಶಿಫ್ಟ್ ಆಗುತಿದ್ದೇವೆ. ಮುಂದೆ 20 ವರ್ಷ ಅಲ್ಲೇ ದುಡಿದು ಮಕ್ಕಳ ಹಾಗು ನಮ್ಮ ಭವಿಷ್ಯ ವನ್ನು ಸೆಕ್ಯೂರ್ ಮಾಡಬೇಕೆಂದು ನಿರ್ಧರಿಸಿದ್ದೇವೆ…. ಎನ್ನುವಾಗ ರಾಯರಿಗೆ ಆಕಾಶವೇ ತಲೆಯ ಮೇಲೆ ಬಿದ್ದ ಅನುಭವ ವಾಗಿತ್ತು.
ತಾವು ತಮ್ಮ 20 ಲಕ್ಷದ ವಿಷಯವನ್ನು ಹೇಳಬೇಕೆಂದು ಕೊಂಡಿದ್ದನ್ನು ಅಲ್ಲೇ ನುಂಗಿದ್ದರು. ಅಂದು ತನ್ನ ಪ್ರೀತಿಯ ಮಡದಿ ಹೇಳಿದ್ದ ಮಾತು ನಿಜವಾಗಿತ್ತು. ಹೊಟ್ಟೆ ಬಾಯಿ ಕಟ್ಟಿ ಅಂದಿನ ಸುಖಗಳನ್ನೆಲ್ಲ ಬದಿಗಿಟ್ಟು ಮಕ್ಕಳಿಗೆಂದು ಕಂಡ ಕನಸು ಇಂದು ನುಚ್ಚು ನೂರಾಗಿತ್ತು.. ಮಕ್ಕಳ ಹೊಸ ಕನಸಿನೆದುರು ರಾಯರ ಕನಸು ನೀರಮೇಲಿನ ಗುಳ್ಳೆ ಯ ತರ ಒಡೆದು ಹೋಗಿತ್ತು… ಅಂದು ಸರೋಜಾ ಹೇಳಿದ್ದ ಮಾತುಗಳೆಲ್ಲವೂ ನಿಜವಾಗಿದ್ದವು. ರಾಯರು ಅಂದುಕೊಂಡ ನಿಧಿ ಮಕ್ಕಳ ಪಾಲಿಗೆ ಸಾಮಾನ್ಯ ಮೊತ್ತವಾಗಿತ್ತು.
ಮತ್ತೆ ಹೆಂಡತಿ ಅಂದು ಹೇಳಿದ್ದು ನೆನಪಾಯಿತು ಕೂಡಲೇ ಸೊಸೆಯನ್ನು ಕರೆದರು.. ಮುಖದ ಮೇಲೆ ನಗು ತಂದುಕೊಂಡು ಕೇಳಿದರು. ಹೇ.. ಅಲ್ಲಿ ನಿಮ್ಮ ಸಂಬಳ ಎಷ್ಟು ಎಂದು .. ಸಮೀಪ ಬಂದ ಸೊಸೆಯ ಕಣ್ಣು ಮುಖ ಇಷ್ಟಗಲ ವಾಗಿತ್ತು. ಮಾವ ನಾವಿಬ್ಬರು 10 ವರ್ಷ ಅನುಭವವಿರುವ ಸಾಫ್ಟವೇರ್ ಇಂಜಿನಿಯರ್ಸ್ ಗಳು ಇಂಡಿಯಾದಲ್ಲಿ ಒಂದೊಂದು ಲಕ್ಷ ಕ್ಕೆ ದುಡಿಯುತ್ತಿದ್ದೇವೆ. ಈಗ ಈ ಪ್ರಪೋಸಲ್ ಒಪ್ಪಿಕೊಂಡರೆ ನಮ್ಮ ಆರಂಭದ ಸಂಬಳವೇ ಇಲ್ಲಿಯ ಸಂಬಳದ 10 ಪಟ್ಟು ಜಾಸ್ತಿ. ಮುಂದೆ ವರ್ಷ ಹೋದಂತೆ ಮತ್ತಷ್ಟು ಹೆಚ್ಚಾಗಲಿದೆ ಎಂದಾಗ ಬಲವಂತದ ನಗು ತಂದುಕೊಂಡರು ಮುಖದಲ್ಲಿ.
ಮತ್ತೆ ಸರು ಅಂದು ಹೇಳಿದ ಮಾತು ನೆನಪಾಗಿತ್ತು.. ನಿಜವಾಗಿಯೂ 20 ಲಕ್ಷ ಗಂಡ ಹೆಂಡತಿಯ ಒಟ್ಟು ಒಂದು ತಿಂಗಳ ಸಂಬಳ ಇವರ ಜೀವಮಾನದ ಒಟ್ಟು ನಿಧಿಯನ್ನು ಮೀರಿಸಿತ್ತು…
ಇಂತಹ ಗೋಪಾಲ ರಾಯರಂತವರು ನಮ್ಮ ನಿಮ್ಮ ಜೊತೆ ನಮ್ಮದೇ ಸಮಾಜದಲ್ಲಿ ಬೇಕಾದಷ್ಟು ಮಂದಿ ಇದ್ದಾರೆ.. ತಮ್ಮ ಜೀವಮಾನ ವಿಡೀ ದುಡಿದು, ಹೊಟ್ಟೆ ಬಾಯಿ ಕಟ್ಟಿ ಮಕ್ಕಳಿಗೋಸ್ಕರ ಲಕ್ಷ ಲಕ್ಷ ಒಟ್ಟು ಮಾಡಿ ಇಡುವ ಮಂದಿ!
ನೆನಪಿಡಿ ಭೂಮಿಯ ಮೇಲೆ ಮನುಷ್ಯ ಜನ್ಮ ಪ್ರತಿ ಬಾರಿ ಬರುವುದಿಲ್ಲ, ಬಂದಾಗ ಅನುಭವಿಸಿ ಆನಂದದಿಂದ ಜೀವಿಸಿ, ನಾಳೆ ಸಾಯುವಾಗ ನಾನು ಜೀವನವನ್ನು ನನ್ನಿಷ್ಟದಂತೆ ಜೀವಿಸಿದೆ ಎಂಬ ಸಂತೃಪ್ತಿ ನಿಮ್ಮಲ್ಲಿರಲಿ, ಆಗ ಮಾತ್ರ ನಿಮ್ಮ ಜನ್ಮ ಸಾರ್ಥಕ ವಾದೀತು.
ಅದುಬಿಟ್ಟು.. ಮಕ್ಕಳಿಗೆ, ಇನ್ನೊಬ್ಬನಿಗೆ ಅವನಿಗೆ, ಇವನಿಗೆ ಮಾಡಿಡುವ ಕನಸು ಕಾಣಬೇಡಿ. ನಾಲ್ಕು ಮಂದಿಗೆ ಉಪಯೋಗ ವಾಗುವ ಹಾಗೆ ಬದುಕಿ ತೋರಿಸಿ. ಮಕ್ಕಳಿಗೆ ವಿದ್ಯೆ ಕೊಡಿ, ಬದುಕುವ ದಾರಿ ತೋರಿಸಿ,ನಾಳೆ ಬದುಕಿನ ಹೆಜ್ಜೆ ಇಡುವಾಗ ಎಡವದಂತೆ ನೋಡಿಕೋಳ್ಳಿ … ಅವರಿಗೆ ಬದುಕು ನಡೆಸುವ ವಿಧಾನ ಕಲಿಸಿ ಕೊಡಿ. ಹುಟ್ಟಿಸಿ ಪಾಲನೆ, ಪೋಷಣೆ ಮಾಡುವುದು ಇದ್ದೆ ಇರುತ್ತದೆ. ಅಷ್ಟು ಸಾಕು…. ಅದು ಬಿಟ್ಟು ಬದುಕು ನಡೆಸಲು ಅಲಸ್ಯೆ ಪಡುವಷ್ಟು ಸಂಪತ್ತು ಮಾಡಿಡಬೇಡಿ.
ಮತ್ತೆ ಹೇಳುತ್ತೇನೆ ನೆನಪಿಡಿ
ಮಕ್ಕಳಿಗೆ ಚಮಚ ಕೊಡಿ ಸಾಕು, ಚಿನ್ನದ ಚಮಚ ಬೇಡ.
✒️ ರಾಘವೇಂದ್ರ ಹಾರ್ಮಣ್
ಇಡೂರು ಕುಂಜ್ಞಾಡಿ