ಬಹಳ ವರ್ಷದ ಹಿಂದೆ ಆ ಪುಟ್ಟ ಹಳ್ಳಿಯ ಎಲ್ಲ ಮನೆಯಲ್ಲೂ ಬಡತನವು ತಾಂಡವ ನರ್ತನ ವಾಡುತ್ತಿತ್ತು. ವಸಂತಗಳು ಕಳೆಯುತ್ತಾ ಹೋದಂತೆ ಆ ಹಳ್ಳಿಯಲ್ಲಿ ಹಲವಾರು ಸುಧಾರಣೆ ಕಾಣ ತೊಡಗಿದವು. ಇದರ ಪರಿಣಾಮ ಊರಿನ ಜನತೆ ಬೇರೆ ಬೇರೆ ಊರುಗಳಿಗೆ ತೆರಳಿ ಸ್ವಂತ ಉದ್ಯಮ ಪ್ರಾರಂಭಿಸಿ ತಕ್ಕಮಟ್ಟಿಗೆ ಬದುಕನ್ನು ಸುಧಾರಿಸಿಕೊಂಡಿದ್ದರು. ಸಾಲ ಕಡ ಮಾಡಿ ಅಕ್ಕ ತಂಗಿಯರ ಮದುವೆ ಮತ್ತು ಮನೆ ಕಟ್ಟಿಕೊಂಡು ಮಾಡಿದ ಸಾಲ ತೀರಿಸಿ ಎಲ್ಲವೂ ಒಂದು ಹಂತಕ್ಕೆ ಬಂದಿತ್ತು.
ಆದರೇನು ಮಾಡುವುದು, ಊರಲ್ಲಿ ನಡೆಯುವ ದೈವಸ್ಥಾನಗಳ ಗೆಂಡ, ಹಬ್ಬ, ಕೊಲ, ಯಕ್ಷಗಾನ, ನಾಗಮಂಡಲ, ನಾಟಕ, ಕಂಬಳ, ಕೋಳಿ ಪಡೆ, ಕ್ರಿಕೆಟ್, ಕಬಡ್ಡಿ, ವಾಲಿಬಾಲ್, ಇಂತಹ ದೈವಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಿಗೆ ದೇಣಿಗೆ ನೀಡುತ್ತಿದ್ದ ಕೈಗಳು ಇಂದು ಬರಿಗೈಯಲ್ಲಿ ದಿಕ್ಕು ತೋಚದೆ ಕುಳಿತಿವೆ….
ಕಳೆದ ಬಾರಿಯ ಕರೋನ ಲಾಕ್ ಡೌನ್ ನಲ್ಲಿ ಸಂಪಾದನೆ ಮಾಡಿದ ಅಲ್ಪಸ್ವಲ್ಪ ಹಣಕಾಸು ಇದ್ದಿತು. ಆಗ ಸಮಸ್ಯೆ ಇರಲಿಲ್ಲ..
ಈಗ ಇರುವುದು ನೈಜತೆ..
ಕಳೆದ ಬಾರಿಯ ಲಾಕ್ ಡೌನ್ ನಲ್ಲಿ ಪರೂರಿನಿಂದ ಓಡೋಡಿ ಬಂದು ತಿಂಗಳಾನುಗಟ್ಟಲೆ ಊರಲ್ಲಿ ಇದ್ದು ನಂತರ ಸ್ವಲ್ಪ ಸುಧಾರಿಸಿದ ಮೇಲೆ ಮತ್ತೆ ಗಂಟುಮೂಟೆ ಜೊತೆಗೆ ಕುಟುಂಬವನ್ನು ಕಟ್ಟಿಕೊಂಡು ಕರ್ಮ ಭೂಮಿಯತ್ತ ಪ್ರಯಾಣ ನಡೆಸಿ ಅಲ್ಲಯಾದರು ಮುಂದೆ ದೇವರು ದಾರಿ ತೊರಿಸುತ್ತಾನೆ ಎಂದು ನಂಬಿದ ದೇವರ ಮೇಲೆ ಭಾರಹಾಕಿದೆವು. ತಮ್ಮ ಹಳೆಯ ಉದ್ಯಮದತ್ತ ಮುಖ ಮಾಡಿದೆವು. ಅಲ್ಲಿ ಅಡ್ವಾನ್ಸ್ ಗೆ ಬಾಡಿಗೆ ಸರಿ ಆಯಿತು ಅನ್ನೋ ಮನೆ ಮತ್ತು ಅಂಗಡಿ ಮಾಲಿಕರ ಮಾತು ಕಿವಿಗೆ ಅಪ್ಪಳಿಸಿದಾಗ ಬದುಕು ಇನ್ನೂ ಇದೆ ಎಂದು ತನಗೆ ತಾನೇ ಧೈರ್ಯ ತಂದುಕೊಂಡು ಇರುವ ಚಿನ್ನ ಬಣ್ಣವನ್ನು ಅಡವಿಟ್ಟು ಹೊಸದಾಗಿ ಉದ್ಯಮ ಮಾಡಿ ನಾಲ್ಕಾರು ತಿಂಗಳಲ್ಲಿ ವ್ಯವಹಾರ ಕೈ ಹಿಡಿಯುವ ಹಂತದಲ್ಲಿತ್ತು. ಅಷ್ಟರಲ್ಲೇ ಕರೋನಾ ಎರಡನೆ ಅಲೆಯ ಅಬ್ಬರಕ್ಕೆ ಸರ್ಕಾರದಿಂದ ಮತ್ತೊಂದು ಲಾಕ್ ಡೌನ್ ಘೋಷಣೆ.
ಈ ಪರಿಸ್ಥಿತಿಯಲ್ಲಿ ಯಾರನ್ನೂ ಟೀಕಿಸಲು ನಮ್ಮಿಂದ ಸಾಧ್ಯವಿಲ್ಲ .
ಊರಿಗೆ ಬರಲು ಮನಸ್ಸಿದ್ದರು “ಕೈಯಲ್ಲಿ ಮನಿ ಇಲ್ಲ”
ಮನೆ… ಮನ…. ಮನಿ ….. ಮತ್ತೆ ಮತ್ತೆ ಕಾಡುತ್ತಿದೆ.. ಆದರೇನು ಮಾಡುವುದು?…..
ನಮ್ಮ ಬದುಕು ಚಕ್ರ ಇಲ್ಲದ ಬಂಡಿಯಂತೆ..

✒️ ರಾಘವೇಂದ್ರ ಹಾರ್ಮಣ್
ಇಡೂರು ಕುಂಜ್ಞಾಡಿ










