ವಾಸ್ತವದ ಪರಿಸ್ಥಿತಿಯನ್ನು ಒಮ್ಮೆ ಗಮನಿಸಿದಾಗ ನನಗೆ ನೆನಪಿಗೆ ಬರುವುದು “ಮಾಡಿದ್ದುಣ್ಣೋ ಮಹಾರಾಯ” ಎಂಬ ಮಾತು. ನಮ್ಮ ದೇಶದಲ್ಲಿ ಪರಿಸರ ಕಾಳಜಿ ಬಗ್ಗೆ ಮಕ್ಕಳಿಗೆ ಒಂದನೇ ತರಗತಿಯಿಂದಲೇ ಬೋಧಿಸುವ ನಮ್ಮ ಶಿಕ್ಷಣ ವ್ಯವಸ್ಥೆ ಭಾಗಶಃ ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆಯೆನೋ ಎಂದೆನಿಸುತ್ತಿದೆ.
ಎತ್ತ ನೋಡಿದರೂ ಹಸಿರು ಗಿಡಮರಗಳನ್ನು ಕಿತ್ತೆಸೆದು, ಜಲಮಾಲಿನ್ಯ, ವಾಯುಮಾಲಿನ್ಯ ಮಾಡಿ ಮನುಷ್ಯ ಅಹಂಕಾರದಲ್ಲಿ ಮೆರೆದ!. ಹಾಗಾಗಿ ಅದೇ ಪ್ರಕ್ರತಿ ಇಂದು ಮುನಿಸಿಕೊಂಡು ನಾವು ಆಕ್ಸಿಜನ್ ಗಾಗಿ ಪರದಾಡುವ ಸ್ಥಿತಿಯನ್ನು ತಂದೊಡ್ಡಿದೆ. ಮನುಷ್ಯ ಅಭಿವೃದ್ಧಿ ಹೊಂದಬೇಕು ನಿಜ ಆದರೆ ತನ್ನ ಅವನತಿಯನ್ನು ತಾನೇ ಸ್ರಷ್ಟಿಮಾಡಿಕೊಳ್ಳುವಷ್ಟಲ್ಲ.
ಇದು ಮೊಬೈಲ್ ಪ್ರಪಂಚ, ಮನುಷ್ಯನಿಗೆ ಮೊಬೈಲ್ ಬಿಟ್ಟರೆ ಬೇರಾವುದರ ಯೋಚನೆಯು ಇಲ್ಲ. ವಿಶ್ವ ಪರಿಸರ ದಿನ, ವನ್ಯಜೀವಿ ದಿನ, ಹವಾಮಾನ ದಿನ, ಜಲದಿನ, ವ್ಯೆದ್ಯರ ದಿನ, ಶಿಕ್ಷಕರ ದಿನ ಇತ್ಯಾದಿ ಇವೆಲ್ಲವೂ ಕೂಡ ವಾಟ್ಸಾಪ್ ಸ್ಟೇಟಸ್ ಗಳಿಗೆ ಮಾತ್ರ ಸೀಮಿತವಾದಂತಿದೆ. ಆದರೆ ವಾಸ್ತವ ಜೀವನದಲ್ಲಿ ಅಳವಡಿಸಿಕೊಳ್ಳದಿರುವುದು ವಿಪರ್ಯಾಸ. ಕೊರೋನಾ ನಮಗೆ ತಿಳಿಸಿದೆ ನಮ್ಮ ಬದುಕು ನಶ್ವರ ಎಂದು. ಇನ್ನೂ ನಾವು ಅಹಂಕಾರದಲ್ಲಿ ಮೆರೆದರೆ ನಮ್ಮ ಅವನತಿ ಕಟ್ಟಿಟ್ಟ ಬುತ್ತಿ. ಬೇರೆಯವರು ಬದಲಾಗಲಿ ಎಂದು ಕಾಯುವ ಬದಲು ಬದಲಾವಣೆ ನಮ್ಮಿಂದಲೇ ಪ್ರಾರಂಭವಾಗಲಿ. ನಾವು ಮಾಡುವ ಸಣ್ಣ ಸಣ್ಣ ಸಾಮಾಜಿಕ ಸೇವೆಯು ಇಡೀ ಜೀವಿ ಸಂಕುಲಕ್ಕೆ ಮಾಡಿದ ಅಳಿಲು ಸೇವೆಯಂತಿದ್ದರೆ ಸಾಕು.
ಜೀವನದ ಪ್ರತಿಯೊಂದು ವಿಶೇಷ ದಿನವನ್ನು ಕೇಕ್ ಕತ್ತರಿಸಿ ಆಚರಿಸಿಕೊಳ್ಳುವುದರ ಜೊತೆಗೆ, ಪ್ರತಿಯೊಬ್ಬರೂ ಗಿಡವನ್ನು ನೆಟ್ಟರೆ, ಪರಿಸರವನ್ನು ಮತ್ತೆ ಸಾಧ್ಯವಾದಷ್ಟು ಮೊದಲಿನಂತೆ ಹಚ್ಚ ಹಸುರಾಗಿ ನಮಗೆ ಉಸಿರು ನೀಡುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಬದುಕಿನ ಪಯಣದಲಿ ಪರಿಸರವನ್ನು ಮರೆಯದಿರೋಣ.
ಸುಮಂಗಲಾ ದೇವಾಡಿಗ ಉಪ್ಪುಂದ
ಉಪನ್ಯಾಸಕಿ