ಅಂದು ಆ ಶಾಲೆಯಲ್ಲೊಂದು ಸಂಭ್ರಮದ ವಾತಾವರಣ. ಎಲ್ಲರೂ ಸಡಗರದಿಂದ ಸಮಾರಂಭಕ್ಕಾಗಿ ತಯಾರಿ ನಡೆಸುವ ತರಾತುರಿಯಲ್ಲಿದ್ದರು. ಎಲ್ಲವೂ ಸಜ್ಜಾಗುವ ವೇಳೆಯಲ್ಲಿ ಗಣ್ಯರೂ ಆಗಮಿಸಲಾರಂಭಿಸಿದ್ದರು. ಕೆಲ ಕ್ಷಣದಲ್ಲೇ ಸಮಾರಂಭದ ಕೇಂದ್ರ ಬಿಂದುವಾದ “ದಿಶಾ ತ್ರಿವೇಣಿ” ತನ್ನ ಜೀವನದ ಅವಿಭಾಜ್ಯ ಅಂಗವಾದ ತಾಯಿಯೊಂದಿಗೆ ಸಮಾರಂಭದ ಸ್ಥಳಕ್ಕೆ ಆಗಮಿಸಿ ತನ್ನೆಲ್ಲಾ ಗುರುವೃಂದರನ್ನು ಮಾತನಾಡಿಸಿ ಆಶೀರ್ವಾದ ಪಡೆದಿದ್ದಳು. ಕೊಂಚ ಸಮಯದಲ್ಲೇ ಸಮಾರಂಭ ಆರಂಭವಾಗಿತ್ತು. ವೇದಿಕೆಯ ಮೇಲೆ ಗಣ್ಯಾತೀಗಣ್ಯರ ನಡುವೆ ತನ್ನ ಮಗಳನ್ನು ಕಂಡ ತ್ರಿವೇಣಿಯವರ ಕಣ್ಣಲ್ಲಿ ಆನಂದಬಾಷ್ಪ.
ಮುಖ್ಯೋಪಾಧ್ಯಾಯರು ಅಂದಿನ ಸಭೆಯ ಕುರಿತು ಮಾತನಾರಂಭಿಸಿ “ಇಂದು ನಿಮ್ಮೆಲ್ಲರ ಎದುರು ಕುಳಿತಿರುವ ವ್ಯಕ್ತಿಯ ಮುಖ ಪರಿಚಯದ ಜೊತೆಗೆ ಅವರ ಸಾಧನೆಯೂ ನಿಮಗೆ ತಿಳಿದಿದೆಯಾದರೂ ಚುಟುಕಾಗಿ ಒಮ್ಮೆ ಹೇಳಲಿಚ್ಛಿಸುವೆ. ಈ ಬಾರಿಯ ಯು.ಪಿ.ಎಸ್.ಸಿ ಫಲಿತಾಂಶದಲ್ಲಿ ನಮ್ಮ ಹೆಮ್ಮೆಯ ಹಳೆ ವಿದ್ಯಾರ್ಥಿನಿ “ದಿಶಾ ತ್ರಿವೇಣಿ” ಇಪ್ಪತ್ತನೇಯ ಶ್ರೇಣಿ ಪಡೆದಿರುವುದು ನಮಗೆಲ್ಲರಿಗೂ ಅತೀವ ಸಂತಸ ತಂದಿರುವ ವಿಚಾರ. ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿರುವ ಇವರನ್ನು ಸನ್ಮಾನಿಸಿ ಗೌರವಿಸಿ ಇವರಿಂದ ಇನ್ನಷ್ಟು ಮಕ್ಕಳ ಬದುಕಿಗೆ ಸ್ಫೂರ್ತಿ ತುಂಬುವ ಕಾರ್ಯ ನಮ್ಮಿಂದಾಗಬಹುದೆಂದು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅದಕ್ಕಾಗಿಯೇ ಸಮಯ ವ್ಯಯಿಸದೇ ಮಾತುಗಳಿಗಾಗಿ ಅವರನ್ನೇ ಕರೆಯಲಿಚ್ಛಿಸುವೆ” ಎಂದವರ ಮಾತಿಗೆ ನಗುತ್ತಲೇ ಮೈಕ್ ಹಿಡಿದು ವೇದಿಕೆಯ ಕೆಳಗಿಳಿದು ಬಂದಿದ್ದಳು ದಿಶಾ.
ತನ್ನ ಮಾತನಾರಂಭಿಸುವ ಮುನ್ನ ತಾಯಿಯನ್ನೊಮ್ಮೆ ನೋಡಿದವಳಿಗೆ ಮನದೊಳಗೆ ಹೊಸ ಉತ್ಸಾಹ ಮೂಡತೊಡಗಿತ್ತು. “ಕ್ಷಮಿಸಿ ವೇದಿಕೆಯ ಕೆಳಗಿಳಿದು ಬಂದಿರುವುದಕ್ಕೆ ಕಾರಣವಿಷ್ಟೆ, ನನ್ನ ಬದುಕಿಗೆ ಸ್ಫೂರ್ತಿಯಾದ ತಾಯಿ ಎದುರಿಗಿರುವಾಗಷ್ಟೇ ನನಗೆ ನಿರರ್ಗಳವಾಗಿ ಮಾತನಾಡುವ ಹುಮ್ಮಸ್ಸು ಬರುವುದು. ಇನ್ನೊಂದು ಕಾರಣ ನೆರೆದಿರುವ ಎಲ್ಲಾ ಮಕ್ಕಳ ಜೊತೆಯಲ್ಲಿ ಪೋಷಕರಿಗೆ ಒಂದೆರಡು ಸಲಹೆ ನೀಡಬೇಕೆಂಬ ಸಣ್ಣ ಬಯಕೆಯಷ್ಟೆ”.
“ಬಹುಶಃ ನಾನು ಓದಿ ಅಭ್ಯಸಿಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಕುರಿತು ವಿವರಿಸುವುದಕ್ಕಿಂದ ಅದರ ತಳಪಾಯದ ಬಗ್ಗೆ ಒಂದು ಸಣ್ಣ ಚಿತ್ರಣ ನೀಡುವುದು ಒಳಿತೆಂದು ಬಯಸುತ್ತೇನೆ. ಅದಕ್ಕಿಂತ ಮೊದಲು ಈ ಸಣ್ಣ ಕಥೆ ಕೇಳಿ. ಇದು ಬರೊಬ್ಬರಿ ಇಪ್ಪತ್ತೈದು- ಮೂವತ್ತು ವರ್ಷಗಳ ಹಿಂದಿನ ಮಾತು. ಆಗಿನ್ನೂ ಹದಿನೈದರ ವಯಸ್ಸು. ಓದಬೇಕೆಂಬ ಅದಮ್ಯ ಬಯಕೆಯಿದ್ದರೂ ಊರಿನಲ್ಲಿ ವ್ಯವಸ್ಥೆ ಇರಲಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಆ ಅವಕಾಶವೇ ಇರಲಿಲ್ಲ. ಐದನೇ ತರಗತಿಗೆ ಓದನ್ನು ನಿಲ್ಲಿಸಬೇಕಾದಾಗ ಮನೆಯಲ್ಲೇ ಇರಲಾರದೆ ಚಿಕ್ಕ ವಯಸ್ಸಿನಲ್ಲೇ ಹೊಲಿಗೆ ತರಬೇತಿ ಪಡೆದು ಅದನ್ನೇ ವೃತ್ತಿಯಾಗಿಸಿಕೊಂಡಿದ್ದಳವಳು. ಅದೇ ಸಮಯದಲ್ಲಿ ಮನೆಯಲ್ಲಿ ಮದುವೆಯ ಪ್ರಸ್ತಾಪವಾಗಿತ್ತು. ಬಾಲ್ಯವಿವಾಹದ ವಿರುದ್ಧ ಸಿಡಿದೇಳಬೇಕೆನಿಸಿದರೂ ತನ್ನಿಂದ ತಂಗಿ ತಮ್ಮನ ಬದುಕು ಹಾಳಾಗುವುದೆಂದು ಎಚ್ಚರಿಕೆ ನೀಡಿದ ಮನೆಯವರ ಮಾತಿಗೆ ಒಲ್ಲದ ಮನದಿಂದಲೇ ಹನ್ನೆರಡು ವರ್ಷಗಳ ಅಂತರವಿರುವ ವ್ಯಕ್ತಿಯೊಂದಿಗೆ ಹಸೆಮಣೆ ಏರಿದ್ದಳು”.
”ಸೊಸೆಯಾಗಿ ಹೋದ ಮನೆಯಲ್ಲಂತೂ ಹೆಣ್ಣು ಮಕ್ಕಳು ಅಡುಗೆ ಮನೆ ಬಿಟ್ಟು ಹೊರಬರುವಂತಿರಲಿಲ್ಲ. ಹೊರಗಿನವರೆದುರು ಮುಖ ತೋರಿ ಮಾತನಾಡುವಂತಿರಲಿಲ್ಲ. ಉಸಿರುಗಟ್ಟುವ ವಾತಾವರಣದ ನಡುವಲ್ಲಿ ಬದುಕು ಸಾಗಿಸುವುದೇ ಅತೀ ದೊಡ್ಡ ಸವಾಲಾಗಿತ್ತು. ಮೂರು ಹೊತ್ತು ದುಡಿಯುವ ಯಂತ್ರವಾಗಿತ್ತು ಬದುಕು. ಒಂದೆರಡು ವರ್ಷವಾದರೂ ಮಕ್ಕಳಾಗದಿದ್ದಾಗ ಮನೆಯವರ ಹೀಯಾಳಿಕೆ ಆರಂಭವಾಗಿತ್ತು. ಕೊನೆಗೆ ದೇವರಿಗೂ ಕರುಣೆ ಉಕ್ಕಿ ಮಡಿಲು ತುಂಬಿತ್ತು. ಆದರೆ ಆ ಖುಷಿಯೂ ಹೆಚ್ಚು ದಿನ ಉಳಿದಿರಲಿಲ್ಲ. ಮೂರನೇ ತಿಂಗಳಲ್ಲೇ ಮನೆಯಲ್ಲಿನ ಕೆಲಸದ ತರಾತುರಿಯ ನಡುವೆ ಕಾಲು ಜಾರಿ ಬಿದ್ದು ಹೊಟ್ಟೆಯಲ್ಲಿದ್ದ ಜೀವ ತನ್ನುಸಿರು ನಿಲ್ಲಿಸಿತ್ತು. ಮತ್ತೆಂದೂ ಮಕ್ಕಳಾಗದೆನ್ನುವ ವಿಚಾರ ತಿಳಿದಾಗ ಗಂಡನ ಮನೆಯವರು ನಿಷ್ಕರುಣಿಗಳಾಗಿ ಮನೆಯಿಂದ ಹೊರದಬ್ಬಿದ್ದರು.
ಎಲ್ಲವನ್ನೂ ಕಳೆದುಕೊಂಡು ನಡುಬೀದಿಯಲ್ಲಿ ನಿಂತರೂ ಸಾಯುವ ಮನಸ್ಸು ಬಂದಿರಲಿಲ್ಲ. ತಾಯಿ ಒಂಭತ್ತು ತಿಂಗಳು ಕಾದು ಜೀವ ಒತ್ತೆ ಇಟ್ಟು ಜನ್ಮ ನೀಡಿರುವ ಈ ಬದುಕು ತನ್ನ ಕೈಯಾರೆ ಹೋಗಬಾರದೆಂದು ಆ ಕ್ಷಣದಲ್ಲಿ ಸಹಾಯ ಮಾಡುವವರ ಕುರಿತು ಯೋಚಿಸಿದಾಗ ತನ್ನ ಬಾಲ್ಯದ ಗೆಳತಿಯ ನೆನಪಾಗಿತ್ತು. ಅವರ ಸಹಾಯದಿಂದ ಕೆಲ ದಿನಗಳ ಮಟ್ಟಿಗೆ ಆಶ್ರಮವೊಂದನ್ನು ಸೇರಿ ಬದುಕನ್ನು ರೂಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಳು. ಹೊಲಿಗೆ ಕಲಿತದ್ದನ್ನೇ ಬದುಕಿಗೆ ಆಸರೆಯಾಗಿಸಿಕೊಂಡು ಕೆಲ ದಿನಗಳಲ್ಲೇ ಚಿಕ್ಕ ಬಾಡಿಗೆ ಮನೆಯೊಂದಕ್ಕೆ ವಾಸ್ತವ್ಯ ಬದಲಿಸಿದ್ದಳು.
ಅಂದೊಮ್ಮೆ ಸಂಜೆ ದೇವಸ್ಥಾನಕ್ಕೆ ಹೋಗಿದ್ದಾಗ ಮೂರ್ನಾಲ್ಕು ವರ್ಷದ ಮಗುವೊಂದು ಅಲ್ಲೇ ಕೂತು ಜೋರಾಗಿ ಅಳುತ್ತಿದ್ದನ್ನು ಕಂಡವಳಿಗೆ ಸಂಕಟವಾಗಿ ಆ ಮಗುವಿನ ಮನೆಯವರಿಗಾಗಿ ಎಷ್ಟೇ ಹುಡುಕಿದರೂ ಪ್ರಯೋಜನವಾಗಿರಲಿಲ್ಲ. ಕತ್ತಲಾಗುತ್ತಿದ್ದರಿಂದ ಅರ್ಚಕರ ಆಣತಿಯಂತೆ ಮಗುವೊಂದಿಗೆ ಮನೆಗೆ ಮರಳಿದ್ದರು. ಪೊಲೀಸರಿಗೆ ದೂರು ಕೊಟ್ಟ ಕೆಲ ದಿನಗಳ ಬಳಿಕ ಆ ಮಗುವಿನ ತಂದೆ ತಾಯಿ ಇಬ್ಬರೂ ಸಾಲದ ಬಾಧೆಯಿಂದಾಗಿ ಜೀವ ಕಳೆದುಕೊಂಡಿರುವರೆಂಬ ವಿಚಾರ ತಿಳಿದಾಗ ನೋವಾದರೂ ಆ ಮಗುವನ್ನು ಯಾರೊಂದಿಗೂ ಕಳುಹಿಸಿಕೊಡಲಿಚ್ಛಿಸದೆ ಪೊಲೀಸರ ಸಹಾಯದಿಂದಲೇ ಕಾನೂನಿನ ನಿಯಮದಂತೆ ದತ್ತು ತೆಗೆದುಕೊಂಡಿದ್ದರು. ಅದಾದ ನಂತರ ಅವರ ಜಗತ್ತೇ ಆದಳು ಅವರ ಮುದ್ದು ಮಗಳು ಎಂದು ಕ್ಷಣ ಕಾಲ ಮಾತು ನಿಲ್ಲಿಸಿದ ದಿಶಾಳ ಕಣ್ಣಂಚು ತೇವವಾಗಿತ್ತು.
”ಇದೆಲ್ಲಾ ನಾನ್ಯಾಕೆ ಹೇಳುತ್ತಿರುವೆ ಎಂದು ಯೋಚಿಸುತ್ತಿರಬಹುದಲ್ಲವೆ?. ಇದು ಕಾಲ್ಪನಿಕ ಕಥೆಯಲ್ಲ. ನನ್ನದೇ ಬದುಕಿನ ನೈಜ ಚಿತ್ರಣ. ನನ್ನ ಹೆತ್ತವರು ಬದುಕಿಗೆ ಹೆದರಿ ನನ್ನನ್ನು ಒಂಟಿಯಾಗಿಸಿ ಬಿಟ್ಟು ಹೋದಾಗ ನನ್ನ ಪಾಲಿನ ಸಂಜೀವಿನಿಯಾದವರು ನನ್ನಮ್ಮ ತ್ರಿವೇಣಿ. ಅದೆಷ್ಟೋ ದಿನ ಅಳುತ್ತಾ ಕೂತಾಗ ಒಮ್ಮೆಯೂ ಗದರದೇ ನನಗೆ ಬದುಕಿನ ಬಗೆಗೆ ಹೊಸ ಭರವಸೆ ಮೂಡಿಸಿದ್ದರು. ತಂದೆ ತಾಯಿಗಾಗಿ ಹಂಬಲಿಸುವಾಗ ಅವರ ಮಡಿಲಲ್ಲಿ ಬೆಚ್ಚಗಿನ ಆಸರೆ ನೀಡಿದರು. ಒಂದೊಳ್ಳೆ ಶಾಲೆಗೆ ಸೇರಿಸಿ ನನಗಾಗಿ ಹಗಲು ರಾತ್ರಿ ದುಡಿಯುತ್ತಲೇ ಶ್ರಮಿಸತೊಡಗಿದ್ದರು. ಶಾಲೆಯಲ್ಲಿ ಯಾರೋ ಒಮ್ಮೆ ಚುಡಾಯಿಸಿದರೆಂದು ಮೂಲೆಯಲ್ಲಿ ಅತ್ತು ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದಾಗ ಎಲ್ಲವನ್ನೂ ಎದುರಿಸಿ ನಿಲ್ಲುವ ಬಗೆ ವಿವರಿಸಿದ್ದರಲ್ಲದೆ ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಸುವ ವ್ಯವಸ್ಥೆ ಮಾಡಿದ್ದರು. ಚಿಕ್ಕಂದಿನಲ್ಲಿ ಓದುವ ಬಯಕೆಯಿದ್ದಾಗ ಅದು ಸಾಧ್ಯವಾಗದೆ ಅವರ ಬದುಕು ತರಗೆಲೆಯಾದಂತಾದರೂ ನನ್ನ ಬದುಕಿಗೆ ಸಿಂಚನವಾದರು ನನ್ನಮ್ಮ.
ಫ್ರೌಢ ಶಾಲೆಗೆ ಬರುವ ತನಕ ನನಗೆ ಅಮ್ಮನ ಬದುಕಿನ ಕುರಿತು ಕೊಂಚವೂ ತಿಳಿದಿರಲಿಲ್ಲ. ಒಂದೊಮ್ಮೆ ಅಮ್ಮನ ಅದೇ ಬಾಲ್ಯ ಸ್ನೇಹಿತೆಯಲ್ಲಿ ಪರಿ ಪರಿಯಾಗಿ ಕೇಳಿಕೊಂಡಾಗ ಅವರು ಬಿಚ್ಚಿಟ್ಟ ಸತ್ಯ ಕೇಳಿ ನನಗೆ ಅಪಾರ ನೋವು ನೀಡಿತ್ತು. ಅಷ್ಟೆಲ್ಲಾ ಕಷ್ಟ ಕಂಡರೂ ನಗುತ್ತಲೇ ಎಲ್ಲರನ್ನೂ ಸಂತೈಸುವ ರೀತಿ ನಿಜಕ್ಕೂ ಬಹಳ ಸ್ಫೂರ್ತಿದಾಯಕ. ಹೊಲಿಗೆ ತರಬೇತಿ ನೀಡುತ್ತಲೇ ಬದುಕಲ್ಲಿ ನೊಂದ ಅದೆಷ್ಟೋ ಹೆಣ್ಣು ಮಕ್ಕಳಿಗೆ ಬದುಕಿಗೆ ಆಶಾ ಭಾವನೆ ಮೂಡಿಸಲು ಅವರೊಂದಿಗೆ ಸಮಾಲೋಚನೆ ನಡೆಸುವ ರೀತಿ ಬಹಳ ಖುಷಿ ಕೊಡುತ್ತದೆ.
ಅಮ್ಮನ ಕನಸಿನಂತೆ ಪದವಿ ಓದುವಾಗಲೇ ನಾನು ಮುಂದಿನ ಯು.ಪಿ.ಎಸ್.ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದೆ. ಸತತ ಮೂರು ಬಾರಿ ಪರೀಕ್ಷೆ ಬರೆದರೂ ನನ್ನ ಶ್ರಮಕ್ಕೆ ತಕ್ಕ ಫಲ ಸಿಕ್ಕಿರಲಿಲ್ಲ. ಮತ್ತೊಮ್ಮೆ ಬದುಕಲ್ಲಿ ನಿರಾಶಳಾಗಿ ಕೂತವಳಿಗೆ ಅಮ್ಮನೇ ಸವಾಲು ಹಾಕಿದ್ದರು. ಆಗ ಮತ್ತೆ ಪುಸ್ತಕ ಹಿಡಿದೆ, ಫಲಿತಾಂಶವಾಗಿ ನಿಮ್ಮೆದುರು ನಿಂತಿರುವೆ” ಎಂದವಳ ಮಾತು ಮುಂದುವರೆಸುವ ಮುನ್ನವೇ ನಿಮಿಷಗಳ ಕಾಲ ಚಪ್ಪಾಳೆಗಳೇ ಸದ್ದು ಮಾಡುತ್ತಿದ್ದವು.
ಮತ್ತೆ ಮಾತನಾರಂಭಿಸಿದ ದಿಶಾ, “ಇಲ್ಲಿ ದೇಶದ ನಾಳಿನ ಭವಿಷ್ಯವಾದ ವಿದ್ಯಾರ್ಥಿಗಳ ಜೊತೆಯಲ್ಲಿ ಅವರ ಹೆತ್ತವರು ಉಪಸ್ಥಿತರಿದ್ದಿರಿ. ನಾನಿಂದು ಈ ಮಾತು ಹೇಳಿದ್ದಕ್ಕೆ ಕಾರಣವಿಷ್ಟೆ, ನಿಮ್ಮ ಮಕ್ಕಳ ಬದುಕಿಗೆ ಗುರಿ ತೋರುವವರು ನೀವಾಗಿ, ಗುರಿಯೆಡೆಗೆ ಕೊಂಡೊಯ್ಯುವಲ್ಲಿ ಗುರುಗಳ ಜೊತೆಯಲ್ಲಿ ಅವರೂ ಶ್ರಮ ವಹಿಸಲಿ. ಒಬ್ಬ ಶಿಲ್ಪಿ ಒಂದು ಕಲ್ಲನ್ನೇ ಸುಂದರ ಮೂರ್ತಿಯಾಗಿಸಿದಾಗ ಅವರ ಪರಿಶ್ರಮದ ಫಲವಾಗಿ ಆ ಕಲ್ಲು ದೇವರೆಂದೇ ಪೂಜೆಗೆ ಪಾತ್ರವಾಗುತ್ತದೆ. ಹಾಗೆಯೇ ನಿಮ್ಮ ಮಕ್ಕಳ ಭವಿಷ್ಯಕ್ಕೇ ಈಗಿನಿಂದಲೇ ಸುಂದರ ತಳಪಾಯ ಹಾಕುವ ಪ್ರಯತ್ನ ಮಾಡಿ. ಡಾಕ್ಟರ್ ಇಂಜಿನೀಯರ್ ಆಗಲೇಬೇಕೆಂದು ಪಟ್ಟು ಹಿಡಿದು ಒತ್ತಾಯಕ್ಕೆ ಓದಿಸಬೇಡಿ. ಅವರ ಕನಸನ್ನು ಅರಿಯುವ ಪ್ರಯತ್ನ ಮಾಡಿ ಅದಕ್ಕೆ ಬೇಕಿರುವ ಬೆಂಬಲ ನೀಡಿ. ಒಂದಂತೂ ನಿಜ ಸಾಧನೆಗೆ ಅಸಾಧ್ಯವಾಗಿರುವುದು ಯಾವುದೂ ಇಲ್ಲ ಸಾಧಿಸುವೆನೆಂಬ ಛಲ ಬೇಕಷ್ಟೆ. ಇರಲು ನೆಲೆ ಕೊಟ್ಟ ಮಣ್ಣಿನ ಋಣ ತೀರಿಸಲು ನಮ್ಮಿಂದಾಗುವಷ್ಟು ಶ್ರಮಿಸೋಣ. ಕೊನೆಯದಾಗಿ ಒಂದೇ ಕೋರಿಕೆ ಇಂದು ನನಗೆ ಮಾಡಬೇಕಿರುವ ಸನ್ಮಾನ ಸಲ್ಲಬೇಕಿರುವುದು ಬದುಕಲ್ಲಿ ದಿಟ್ಟೆಯಾಗಿ ಯಾವ ಕಷ್ಟಕ್ಕೂ ಅಂಜದೆ, ಸ್ವಾವಲಂಭಿಯಾಗಿ ಬದುಕಿ ಹಲವರ ಬದುಕಿಗೆ ಆದರ್ಶವೆನಿಸಿದ ನನ್ನ ಬಾಳ ಸಾರಥಿಗೆ. ಆ ಜಾಗದಲ್ಲಿ ಕೂರಿಸಿ ಅವರನ್ನೇ ಸನ್ಮಾನಿಸಿ ಎಂದು ಕೇಳಿಕೊಳ್ಳುತ್ತಿರುವೆ” ಎಂದು ತನ್ನ ಮಾತು ಮುಗಿಸಿದಾಗ ನೆರೆದವರೆಲ್ಲರೂ ಕರತಾಳದಿಂದಲೇ ಪ್ರಶಂಸಿದ್ದರು.
ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ತ್ರಿವೇಣಿಯವರಿಗೆ ಸನ್ಮಾಸಿದ್ದಲ್ಲದೆ ಅವರ ಕೈಯಾರೆ ಮಗಳಿಗೆ ಶಾಲು ಹೊದೆಸಲು ಹೇಳಿದಾಗ ಆನಂದ ಭಾಷ್ಪದಿಂದ ಮಗಳನ್ನು ಸನ್ಮಾನಿಸಿದ್ದರು ತಾಯಿ ತ್ರಿವೇಣಿ. ಅವಳ ಬದುಕಿನ ಹೊಸ ತಿರುವುಗಳಿಗೆ ಸಾರಥಿಯಾಗಿ ಜೊತೆಯಾಗುವ ಕ್ಷಣ ನೆನಪಿಸಿಕೊಂಡಾಗ ಹರ್ಷಿಸಿತ್ತು ತಾಯಿ ಹೃದಯ.
🖋 ಶಾಲಿನಿ ಶೆಟ್ಟಿ