ಇಪ್ಪತ್ತು ವರ್ಷಗಳ ಹಿಂದೆ ನಾನು SSLC ಯಲ್ಲಿ ಇರುವಾಗ ನನ್ನ ಹಿರಿಯಣ್ಣ ಒಂದು ಸಣ್ಣ ದೋಣಿ ತಂದಿದ್ರು. ನಾನು, ಅಣ್ಣ ಮತ್ತು ನನ್ನ ಗೆಳೆಯ ಹರೀಶ ಸೇರಿ ದಿನಾಲೂ ಮೀನುಗಾರಿಕೆಗೆ ಹೋಗುತ್ತಿದ್ದೆವು. ಬೆಳಿಗ್ಗೆ ಮೂರಕ್ಕೆ ಹೊರಟು ಒಂಬತ್ತು ಗಂಟೆಗೆ ವಾಪಸಾಗುತ್ತಿದ್ದೆವು. ನನಗೆ ಹತ್ತು ಗಂಟೆಗೆ ಶಾಲೆಗೆ ಮುಟ್ಟಬೇಕಿದ್ದ ಕಾರಣ, ಬೇಗ ಬರುತ್ತಿದ್ದೆವು. ಶಾಲೆಗೆ ರಜೆ ಇರುವ ದಿನ ಮಧ್ಯಾಹ್ನದವರೆಗೆ ಫಿಶಿಂಗ್. ಕೆಲವು ದಿನ ಸಂಜೆ ಹೋದರೆ, ರಾತ್ರಿ ವಾಪಸ್ಸು ಬರುತ್ತಿದ್ದೆವು. ಮಳೆ, ಗಾಳಿ, ಬಿಸಿಲು, ಉಬ್ಬರದ ಅಲೆ ಎಲ್ಲದರ ಅನುಭವ ಈ ಚಿಕ್ಕ ದೋಣಿಯಲ್ಲಿ ಸಿಗುತ್ತಿತ್ತು.
ನನ್ನ ಕಿರಿಯಣ್ಣನ ದೊಡ್ಡ ಮರದ ದೋಣಿಯಿದ್ದರೂ, ನನಗೆ ಪ್ರತಿದಿನ ಅದರಲ್ಲಿ ಹೋಗಲು ಸಾಧ್ಯವಿರಲಿಲ್ಲ. ಮರದ ದೋಣಿಗೆ ಒಂದು ಔಟ್ ಬೋರ್ಡ್ ಎಂಜಿನ್ ಇತ್ತು. ತುಂಬಾ ದೂರದವರೆಗೆ ಹೋಗಿ ಮೀನುಗಾರಿಕೆ ಮಾಡುತ್ತಿದ್ದರು. ಆ ದೋಣಿ ವಾಪಸು ಬರುವಾಗ ಮಧ್ಯಾಹ್ನ ಆಗುತ್ತಿದ್ದ ಕಾರಣ ನಾನು ರಜೆ ಇರುವಾಗ ಮಾತ್ರ ಅದರಲ್ಲಿ ಹೋಗುತ್ತಿದ್ದೆ. ಆದ್ದರಿಂದ ನನಗೆ ಚಿಕ್ಕ ಫೈಬರ್ ದೋಣಿಯೇ ಅನುಕೂಲವಾಗುತ್ತಿತ್ತು. ಪದವಿ ಹಂತದವರೆಗೆ ನನಗೆ ಈ ಚಿಕ್ಕ ದೋಣಿಯಿಂದ ಖರ್ಚಿಗೆ ಬೇಕಾಗುವಷ್ಟು ಅನುಕೂಲವಾಗುತ್ತಿತ್ತು. ಈ ದೋಣಿಯ ವಿಶೇಷವೆಂದರೆ ರಟ್ಟೆಯಲ್ಲಿ ಬಲ ಇದ್ದರೆ ಮಾತ್ರ ಹುಟ್ಟು ಎಳೆದುಕೊಂಡು ಹೋಗಿ ಮೀನುಗಾರಿಕೆ ಮಾಡಬಹುದಿತ್ತು. ಗಾಳಿ ಬಲವಾಗಿ ಬೀಸುತ್ತಿದ್ದರೆ ಗಂಟೆಗಟ್ಟಲೆ ಹುಟ್ಟು ಹಾಕಿದರೂ ದಡ ಮುಟ್ಟಲು ಹರಸಾಹಸ ಪಡಬೇಕಿತ್ತು.

ನಾನು ಬಿ.ಎಡ್. ಮುಗಿಸಿ ಉದ್ಯೋಗಕ್ಕಾಗಿ ಮಂಗಳೂರಿಗೆ ಬಂದಾಗ ಅಣ್ಣ ಅದನ್ನು ನಡೆಸುತ್ತಿದ್ದರು. ಊರಿಗೆ ಹೋದಾಗ ಸಮುದ್ರದಂಡೆಯಲ್ಲಿ ನಿಲ್ಲಿಸಿದ್ದ ಆ ಚಿಕ್ಕ ದೋಣಿ ನೋಡಿದಾಗ ಹಿಂದಿನ ನೆನಪಾಗುತ್ತಿತ್ತು… ಒಂದೆರಡು ದಿನಗಳಿಂದ ತೌಖ್ತೆ ಚಂಡಮಾರುತದಿಂದಾಗಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಎಲ್ಲರಿಗೂ ಗೊತ್ತು. ಹಿಂದೆಂದೂ ಕಂಡು ಕೇಳರಿಯದಷ್ಟು ಮೇಲಕ್ಕೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿವೆ. ಇದಕ್ಕೆ ಕಾರಣ ಹಲವು ಇರಬಹುದು. ಇದರ ಗಡಿಬಿಡಿಯಲ್ಲಿ ದಂಡೆಯಲ್ಲಿ ನಿಲ್ಲಿಸಿದ್ದ ನಮ್ಮ ಈ ದೋಣಿ, ದೊಡ್ಡದೊಂದು ಅಲೆಗೆ ಸಮುದ್ರದ ಒಡಲಿಗೆ ಸೇರಿತು. ಒಂದು ಹಗ್ಗವನ್ನು ದಡದಲ್ಲಿರುವ ತೆಂಗಿನಮರಕ್ಕೆ ಕಟ್ಟಿಹಾಕಿದ್ದರೂ, ಹಗ್ಗ ತುಂಡರಿಸಿಕೊಂಡು ಹೋಗಿದೆಯೆಂದರೆ ಅಲೆಯ ಬಲ ಎಷ್ಟಿರಬಹುದು ಯೋಚಿಸಿ. ಇದಾಗಿ ನಾಲ್ಕೈದು ಗಂಟೆಗಳಲ್ಲಿ ಐನೂರು ಮೀಟರ್ ದೂರದಲ್ಲಿ ಅದರ ಅವಶೇಷಗಳು ಪತ್ತೆಯಾಗಿದೆ. ಪುಡಿಪುಡಿಯಾಗಿ ಹೋದ ಅದರ ಅವಶೇಷ ನೋಡಿ ಮನಸ್ಸಿಗೆ ಬೇಸರವಾಯಿತು. ಸುಮಾರು ಇಪ್ಪತ್ತು ವರ್ಷಗಳ ಅದರೊಂದಿಗಿನ ಬಾಂಧವ್ಯ ನೆನಪಾಗಿ ಉಳಿಯಿತು.
ನಾಗರಾಜ ಖಾರ್ವಿ, ಕಂಚುಗೋಡು










