ಕತ್ತಲು ಆಗಷ್ಟೇ ಕಳಚಿ, ಭೂಮಿ ಬೆಳಕಿಗೆ ಮೈಯೊಡ್ಡುವುದರಲ್ಲಿತ್ತು. ನೆರೆ ಮನೆಯ ಬಚ್ಚಲಿನ ಚಿಮುಣಿ ಚಟ ಚಟ ಸದ್ದಿನೊಂದಿಗೆ ಕರ್ರನೆಯ ಹೊಗೆಯನ್ನು ಸೂಸುತ್ತಾ, ಊರಿಗೆಲ್ಲ ಮಂಜಿನಂತ ಮಬ್ಬನ್ನು ಕವಿಯುವಂತೆ ಮಾಡಿತ್ತು. ವಾರವಿಡೀ ದುಡಿದು ದಣಿದ ಮಂದಿಗೆಲ್ಲ ಮೈಮುರಿಯಲೆಂದೆ ಅಂದು ಭಾನುವಾರ ಬೇರೆ!!! ಅವರೆಲ್ಲ ಮಗ್ಗಲು ಮಗಚಿ, ಮೈ ಮುರಿಯುವ ಹೊತ್ತು ದೂರವೇ ಇತ್ತು. ಮಂದಿ ಕಣ್ಣರಳಿಸುವ ಮುನ್ನವೆ ಅಲ್ಲೊಂದು ಜೀವ ಕಣ್ಮುಚ್ಚಿ , ಬದುಕಿನ ಓಟಕ್ಕೆ ವಿರಾಮವಿಟ್ಟಿತ್ತು. ಮುಂಜಾವಿನ ಮೌನಕ್ಕೆ ಸೆಡ್ಡು ಹೊಡೆದು ಆಕ್ರಂದನ ಮುಗಿಲು ಮುಟ್ಟಿತ್ತು.
ಅಮ್ಮನವರ ದೇವಸ್ಥಾನದಲ್ಲಿ ಊಟ ಮಾಡುತ್ತಲೆ, ಮತ್ತೆ ನೆನಪಿಸಿದ್ದೆ, ‘ನಂಗೆ ರಟ್ಟಿನ ಎಕ್ಸಾಂ ಪ್ಯಾಡೇ ಬೇಕ್’ ಎಂದು. ಅವಳೊ, ‘ಸರಿ, ಹ್ವಾಪತಿಗ್ ತಕಂಡ್ರ್ ಸೈ’ ಎಂದು ಇನ್ನೊಂದು ತುತ್ತು ಉಂಡಳು. ಕೈತೊಳೆದು, ಪಾರ್ಕಿಂಗ್ ಹತ್ತಿರ ಇರುವ ಅಂಗಡಿಗೆ ತೆರಳಿ 25 ರೂ ಕೊಟ್ಟು ಒಂದು ರಟ್ಟಿನ ಎಕ್ಸಾಂ ಪ್ಯಾಡ್ ಕೊಂಡುಕೊಂಡ ಮೇಲಷ್ಟೇ ಮುಖ ಅರಳಿದ್ದು. ಅವಳು ಕೈಗಿಟ್ಟವಳೆ, ‘ಇವತ್ತಿನಿಂದ ಲಾಯ್ಕ್ ಮಾಡಿ ಓದ್ಕಣ್ಕ್, ಚಂದಮಾಡಿ ಪರೀಕ್ಷೆ ಬರಿಕ್’ ಎಂದಳು .ನಾನು ಎಕ್ಸಾಂ ಪ್ಯಾಡನ್ನು ಎದೆಗೊತ್ತುತ್ತಲೆ, ಕಣ್ಣು ಬಿಡಲಾಗದೆ, ಹನಿ ಒರೆಸುತ್ತಾ ‘ ನಾನ್ ಓದಿ ದೊಡ್ಡನ್ ಆರ್ಮೆಲೆ, ನಿನ್ನ್ ರಟ್ಟಿನ್ ದುಡ್ಡಿನ್ ಜೊತಿಗೆ, ನಿಂಗ್ ಎಲ್ಲ ದುಡ್ಡೂ ವಾಪಾಸ್ ಕೊಡ್ಡ್ತಿ, ನಿಮ್ಮನ್ನೆಲ್ಲ ಲಾಯ್ಕ್ ಮಾಡಿ ಕಂಡ್ಕಂತಿ’ ಎಂದು ಮನಸ್ಸಿನಲ್ಲೇ ಪ್ರತಿಜ್ಞೆ ಗಯ್ಯುತ್ತಾ ಮೂಗು ಒರೆಸಿಕೊಂಡೆ. ಕಣ್ಣೀರು ಮಾತ್ರ ನಿಂತಿರಲಿಲ್ಲ.
ಅಮ್ಮ ದೂರವಾದ ಮೇಲೆ, ಅವಳ ಮಗುವಿನ ಜವಾಬ್ದಾರಿ ಇವರೆಲ್ಲರ ಹೆಗಲೇರಿತ್ತು. ಅಜ್ಜ ಅಜ್ಜಿ ಕೊಂಗಾಟದಲ್ಲೆ ಅರಳಿಸಿದ ಕೂಸಾದರು, ಉಸಿರು ಉಳಿಸಲು ಕಾದಾಡಿದ ಯುದ್ಧ ಸಾಮಾನ್ಯವಾದುದಲ್ಲ. ಅಜ್ಜನ ಇಳಿ ವಯಸ್ಸು ಮೊಮ್ಮಗನ ಆಸ್ಪತ್ರೆಯ ಗೊಡೆಯ ನಡುವೆಯೂ, ತನ್ನ ಅನಾರೋಗ್ಯದ ತಿಣುಕಾಟದಲ್ಲೂ ಸದ್ದಿಲ್ಲದೆ ಆಹುತಿಯಾಗಿತ್ತು. ಅಜ್ಜಿ ಬೆನ್ನು ಬಾಗಿ, ನೆಲ ನೀಕುವ ವರೆಗು, ಮೊಮ್ಮಗ ಸೆರಗೊಳಗಿನ ಗೆಂಟೇ ಆಗಿದ್ದನು. ಅಕ್ಕನ ಮಗುವೆಂಬ ಅಕ್ಕರೆ, ಅಮ್ಮನಿರದ ಕೂಸೆಂಬ ಕಾಳಜಿ ಅಮ್ಮನ ತಂಗಿ ತಮ್ಮಂದಿರಿಗೆ. ಎಲ್ಲರೂ ಎತ್ತಿ ಮುದ್ದಾಡಿಸಿ, ಕೇಳಿದ್ದು ಕೊಟ್ಟೆ ಬೆಳೆಸಿದ್ದರು. ಲಕ್ಷ್ಮಿಯ ದ್ದು ಚೂರು ಹೆಚ್ಚೆ.
ಪ್ರತೀ ವರ್ಷದ ಚೌತಿಗು, ಕೇಳದೆಯೇ ನನಗೊಂದು ಬಣ್ಣದ ಅಂಗಿ ಸಿದ್ದವಾಗಿರುತ್ತಿತ್ತು. ಫ್ಯಾಕ್ಟರಿಯಲ್ಲಿ ನೀಡುವ ಅಲ್ಪ ಸ್ವಲ್ಪ ಬೊನಸ್ಸಿನಲ್ಲೆ ಅಕ್ಕ ತಂಗಿಗೆ ಸೀರೆ, ಚೂಡಿದಾರ, ಅಮ್ಮನಿಗೊಂದು ಸೀರೆ. ಇನ್ನೂ ದುಡ್ಡು ಮಿಕ್ಕಿದರೆ ತನಗೊಂದು ಚೂಡಿದಾರದ ಬಟ್ಟೆ. ಶಾಲೆಗೆ ಹೊಗುವಾಗೆಲ್ಲ ಪುಟ್ಟಣ್ಣ ನೆನಪಾಗಿ, ಐಸ್ ಕ್ಯಾಂಡಿ ಬೇಕೆನಿಸಿದರೆ ಅವಳ ಬಳಿಯೇ ಕೈ ಚಾಚುತ್ತಿದ್ದೆ. ಹೊಲಿಗೆ ಮಷೀನಿನ ಡ್ರಾಯರ್ ನಾ ಒಳಗಿರುತ್ತಿದ್ದ ಐವತ್ತು ಪೈಸೆ, ರೂಪಾಯಿಯ ನಾಣ್ಯವನ್ನು ಕೈಗಿಟ್ಟು ಕಳುಹಿಸುತ್ತಿದ್ದಳು. ಶಾಲೆಯ ರಜೆಯಲ್ಲಿ, ಸೊಲಿಯುತ್ತಿದ್ದ ಹತ್ತಿಪ್ಪತ್ತು ಗೇರು ಬೀಜ ಗಳಿಗೂ ಎರಡು ರೂಪಾಯಿ ಕೇಳುತ್ತಿದ್ದೆ. ಕೊಡುತ್ತಿದ್ದಳು.
ಶಾಲೆಯ ಪೋಕರಿತನವನ್ನೂ, ನನ್ನ ಮುಂದಿನ ಕನಸುಗಳನ್ನು ಅವಳೆದುರು ಹೇಳಿಬಿಡುತ್ತಿದ್ದೆ. ಗೇರು ಬೀಜ ಸುಲಿಯುತ್ತಲೆ, ಕೆಲವೊಂದಕ್ಕೆ ತಲೆಯಾಡಿಸುತ್ತಿದ್ದಳು. ಅಕ್ಕ, ತಂಗಿಯ ಕೈಗಳಿಗೊಂದು ವಾಚು ಕಟ್ಟಿಸಿ ಹಿಗ್ಗಿದ್ದಳು. ಅಣ್ಣನ ಕನಸಿನ ಅಂಗಡಿ ಕೋಣೆಗೂ ಇವಳದ್ದೇ ಕಾಸು. ಮೂವರ ಮೂಗು, ಕಿವಿ, ಕತ್ತು, ಕೈ ಬೆರಳುಗಳು ಲಕ್ಷ್ಮಿ ಇರದ್ದಿದ್ದರೆ ಇಂದಿಗೂ ಖಾಲಿಯೇ ಕೂರುತಿದ್ದವೋ ಏನೋ. ಚಿಕ್ಕ ಅಕ್ಕನಿಗೊಂದು ಗಂಡು ಹುಡುಕಿ ಮದುವೆ ಮಾಡಲೆಂದು ಅದೆಷ್ಟು ಕಾದಿದ್ದಳು. ಕೊಂಕಣಿ ರಾಮಣ್ಣನ ಕ್ಯಾಮೆರಾ ರೀಲುಗಳಲೆಲ್ಲ ಅಕ್ಕನ ನೆಗೆಟಿವ್ಗಳೇ ತುಂಬಿರುವಷ್ಟು!!!. ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವಂತೆ ಮಾಡಿ ಮನಸ್ಸುಗಳನ್ನು ಕಟ್ಟಿದ್ದಳು. ಪ್ರತೀ ಭಾನುವಾರ ವಿಶೇಷ ಅಡುಗೆಯೋ, ಕರಿದ ತಿಂಡಿಯೊ ತಯಾರಿಸಿ ನಾನಂತು ಭಾನುವಾರಕ್ಕೆ ಕಾಯುವಂತೆ ಮಾಡಿದ್ದಳು.
ಮನೆಯ ಗಂಡಸರಿಗಿಂತಲೂ ಜವಾಬ್ದಾರಿಯುತವಾಗಿ ಮನೆಯನ್ನ ನಡೆಸಿದ್ದವಳು. ಮಿತವಾದ ಮಾತು. ಅಲ್ಲೊಂದು ತಣ್ಣನೆಯ ನಗು. ಗೇರು ಬೀಜದ ಚೀಲವನ್ನು ಸೊಂಟವೇರಿಸಿ, ಫ್ಯಾಕ್ಟರಿಯ ಹಾದಿ ಹಿಡಿದು ಹೊದರೆ, ಬೆಳಗ್ಗಿನ ಹತ್ತರ ವರೆಗೂ ಖಾಲಿ ಹೊಟ್ಟೆಯೆ. ಆದರೆ ಮನೆಯವರಿಗೆಂದೂ ಕಷ್ಟ ಹೇಳಿಕೊಂಡವಳಲ್ಲ. ಎದೆಯ ಸಂದಿನಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದ ನೋವನ್ನೂ ಹಂಚಿ ಕೊಳ್ಳಲಿಲ್ಲ. ಅಕ್ಕ, ತಂಗಿಯ ಮದುವೆಗೊ, ಮನೆಯ ಏಳಿಗೆಗೊ ಕೂಡಿಟ್ಟ ಹಣ ಬ್ಯಾಂಕಿನ ಖಾತೆಯಲ್ಲಿದ್ದದ್ದು ಅವಳು ಅಳಿದ ಮೇಲೆಯೇ ತಿಳಿದಿದ್ದು.
ಮೊನ್ನೆ ಮತ್ತದೇ ಭಾನುವಾರ. ಬರಿ ಮೈಯಲ್ಲಿ ಕುಳಿತ್ತಿದ್ದಾಗ ಕತ್ತಿನಲ್ಲಿ ನೇತು ಬಿದ್ದಿದ್ದ ಚಿನ್ನದ ಸರ ಮತ್ತೆ ಲಕ್ಷ್ಮೀಯನ್ನು ನೆನಪಿಸಿತ್ತು. ನಾಮಕರಣಕ್ಕೆ ಅಜ್ಜ ಮಾಡಿಸಿದ್ದ ಚಿಕ್ಕ ಸರವನ್ನು ಐದಾರನೆಯ ತರಗತಿಯವರೆಗೂ ಧರಿಸಿದ್ದೆ. ಮತ್ತೆ ಅವಳೇ ಪೇಟೆಗೆ ತೆರಳಿ ನರೇಂದ್ರಣ್ಣನಲ್ಲಿ ಕೊಟ್ಟು ಉದ್ದ ಮಾಡಿಸಿದ್ದಳು. ಅಲ್ಯಾರೊ ಹೇಳಿದರು, ‘ ಈ ಸಲ, ಕುತ್ತಿಗೆಗ್ ಇದ್ದದ್ದ್ ಹಾಕಿ ಒಂದ್ ಗಟ್ಟ್ ಮುಟ್ಟ್ ಸರ ಮಾಡ್ಸ್’. ಗಂಟಲು ಕಟ್ಟಿಕೊಳ್ಳುತ್ತಲೆ, ‘ ಅದನ್ನ್ ಅಳ್ಸುದಿಲ್ಲ, ಏಗಳಿಕ್ಕೂ!!!’ ಎಂದೆ. ಮೌನ ಆವರಿಸಿತ್ತು. ಹಳೆಯ ಬಳೆಗಳನ್ನೆಲ್ಲಾ ಒಟ್ಟು ಮಾಡಿ ಮಗು ಆಟವಾಡುವಾಗ ಅಲ್ಲೊಂದು ವಾಚು ಗಮನ ಸೆಳೆಯಿತು. ಅದೇ ಲಕ್ಷ್ಮಿ ತೊಟ್ಟಿದ್ದಳಲ್ಲ ಅದೇ!!!. ಕಣ್ಣೀರು ಹೆಚ್ಚು ಹೊತ್ತು ಅಂಚಿನಲ್ಲಿ ನಿಲ್ಲಲೇ ಇಲ್ಲ. ಅವಳು ತುಳಿಯುತ್ತಿದ್ದ ಹೊಲಿಗೆ ಮಷೀನಿನ ಸದ್ದು ಇನ್ನೂ ಕಿವಿಯಲ್ಲಿದೆ! ನಾ ಮಲಗುವ ಕೊಣೆಯೂ ಅವಳದ್ದೆ. ಹಗಲಲ್ಲಿ ಮಲಗಿದ್ದರೂ ಮುಲಾಜಿಲ್ಲದೆ ಕನಸಿನಲ್ಲಿ ಬರುತ್ತಾಳೆ.
ಈಗ ದೊಡ್ಡವನಾಗಿದ್ದೇನೆ. ಲಕ್ಷ್ಮಿ ನನಗಾಗಿ ಕೊಡಿಸಿದ್ದ ರಟ್ಟಿನ ಎಕ್ಸಾಂ ಪ್ಯಾಡ್ನಲ್ಲೇ ಪರೀಕ್ಷೆ ಬರೆದು, ಶಾಲೆ ಮುಗಿಸಿ, ಪದವಿ ಮುಗಿಸಿ ನೌಕರಿಗಳಿಸಿದ್ದೇನೆ. ಅವಳ ರಟ್ಟಿನ ಎಕ್ಸಾಂ ಪ್ಯಾಡಿನ ಬಾಬ್ತು ವಾಪಾಸ್ಸು ಕೊಡ ಬೇಕಿದೆ. ನನ್ನ ಸಂಬಳದಲ್ಲೆ, ಅವಳಿಗಾಗಿ ಚೆಂದದ ಸೀರೆಯನ್ನು ತಂದು ಕೊಟ್ಟು, ಉಟ್ಟು ಬಂದ ಮೇಲೆ ಮಿಂಚಿನ ಸೆಲ್ಫಿಯೊಂದನ್ನು ತೆಗೆಯ ಬೇಕಿದೆ. ಅವಳ ಕೈಗಳಿಗೆ ಹೊಳೆಯುವ ಬಂಗಾರದ ಬಳೆಗಳನ್ನು ತೊಡಿಸಿ ಖುಷಿಪಡಬೇಕಿದೆ. ಎಲ್ಲಕ್ಕಿಂತಲೂ ಮೇಲಾಗಿ ಅವಳ ಎದುರು ನಿಂತು ‘ ನೀನೆಕೆ ಇಷ್ಟು ಬೇಗ ತೆರಳುವ ನಿರ್ಧಾರ ಮಾಡಿದೆ? ‘ ಎಂದು ಕೇಳ ಬೇಕಿದೆ!!!
ಶಿವಪ್ರಸಾದ ವಕ್ವಾಡಿ.
ಶಿವಪ್ರಸಾದ್ ಅವರೇ ನೀವು ಬರೆದ ಲೇಖನದಲ್ಲಿ ನೀವು ರೂಪಿಸಿರುವ ಪಾತ್ರ ಬಹುಶಃ ಇಂದು ಅದೆಷ್ಟೋ ಮನೆಯಲ್ಲಿ ಜೀವಂತವಾಗಿ ಇರಬಹುದು…. ನೀವು ಬರೆದ ಸಾಲುಗಳು ಅದ್ಬುತವಾಗಿದೆ… ಧನ್ಯವಾದಗಳು 🙏🏻