ನಾವು ಮಾನವರಾಗಿ ಧರೆಗಿಳಿದು ಬಂದ ಮೇಲೆ ಮನೆಯವರಿಂದ ಪಡೆದ ನಾಮಕರಣ ಜೊತೆಗೆ ಬಾಲ್ಯ, ಶಿಕ್ಷಣ, ಮದುವೆ, ಜೀವನ ಮಾಡಿಕೊಂಡು ಮರಣವೆಂಬ ಮೂರು ಅಕ್ಷರದಿಂದ ಬದುಕಿನ ಪಯಣ ನಿಲ್ಲಿಸುತ್ತೇವೆ. . ನಾವು ಮನುಷ್ಯರಾಗಿ ಮರಣವೆಂಬ ಮೂರು ಅಕ್ಷರದ ಬಿರುದನ್ನು ಪಡೆಯುವುದಕ್ಕಿಂತ ಮುಂಚಿತವಾಗಿ ನಾವು ಶಿಕ್ಷಣ, ಸಾಹಿತ್ಯ, ಧಾರ್ಮಿಕ, ಸಮಾಜ ಸೇವೆ, ಇನ್ನೂ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು, ನಾವು ಇನ್ನೊಬ್ಬರಿಗೆ ಆದರ್ಶ ವ್ಯಕ್ತಿಯಾಗಿ, ಬಡವರಿಗೆ ಮಾರ್ಗದರ್ಶಕರಾಗಿ ಬದುಕಬೇಕು.
ಸಮಾಜ ಸೇವೆ ಎನ್ನುವ ಪದ ತುಂಬಾ ಮಹತ್ವದ್ದಾಗಿದೆ. ಹಾಗೆಯೇ ಸಮಾಜ ಸೇವಕರಿಗೆ ದೇವರ ಕೃಪೆ ಯಾವಾಗಲೂ ಸದಾಕಾಲವೂ ಇರುತ್ತದೆ. ಆದರೆ ಸಮಾಜ ಸೇವೆಗೆ ನಾವು ಮುಂದಾಗುವಾಗ ಕೆಲವರು ನಮ್ಮ ಕಾಲು ಎಳೆಯಲು ಬಯಸುತ್ತಾರೆ.ಇಂತಹ ವ್ಯಕ್ತಿಗಳ ಬಗ್ಗೆ ಯಾವುದನ್ನೂ ತಮ್ಮ ಕಿವಿಗೊಡದೆ ಸಮಾಜ ಸೇವೆ ಮುಂದಾಗುತ್ತಾರೆ ಸಹ್ರದಯಿ ಸಮಾಜಸೇವಕರು.
ಇಷ್ಟೆಲ್ಲ ವಿಚಾರ ಹೇಳಲು ಕಾರಣವೊಂದಿದೆ ,. ಬನ್ನಿ, ತಿಳಿಸುತ್ತೇನೆ.
ದಾವಣಗೆರೆ ಜಿಲ್ಲೆಯವರಾದ ಕುಮಾರಿ ಬಿಂದುರವರು ತನ್ನ 26 ನೇ ವಯಸ್ಸಿನಲ್ಲೇ ಸಮಾಜ ಸೇವಕಿಯಾಗಿ ಬಡಮಕ್ಕಳಿಗೆ ಉಚಿತ ಪಾಠವನ್ನು ಬೋಧನೆ ಮಾಡಿ, ಹಲವು ರಂಗಗಳಲ್ಲಿ ಸಾಧನೆ ಮಾಡುವುದರ ಜೊತೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದು ಕೊಂಡು ಸಮಾಜ ಸೇವಕಿ ಎಂಬ ಬಿರುದನ್ನು ಪಡೆದಿದ್ದಾರೆ. ಬದುಕಿನಲ್ಲಿ ಆತ್ಮ ವಿಶ್ವಾಸ ಇದ್ದರೆ ಮಾತ್ರ ಮುಂದೆ ಬರಲು ಸಾಧ್ಯವೆಂದು ಅಂದುಕೊಂಡವರು “ಬಿಂದು ಆರ್.ಡಿ. ರಾಂಪೂರ.”

ಇವರ ತಂದೆಯ ಹೆಸರು ದೇವೆಂದ್ರಪ್ಪ, ತಾಯಿ ಶ್ರೀಮತಿ ಲತಾ. ಮೊದಲನೇಯ ಮಗಳಾಗಿ 1994 ರಲ್ಲಿ ದಾವಣಗೆರೆ ಜಿಲ್ಲೆಯ ಗುಡ್ಡಗಾಡು ಪ್ರದೇಶದ ಕೇವಲ 40 ಮನೆಗಳಿರುವ ಪುಟ್ಟ ಕುಗ್ರಾಮ ಹೆಚ್ ರಾಂಪುರ (ಮಾಯಕೊಂಡ ಹೋಬಳಿ) ಯಲ್ಲಿ ಇವರು ಜನಿಸಿದರು. ಇಂದಿಗೂ ಸಹ ಯಾವುದೇ ರಸ್ತೆ -ಬಸ್ ಸಂಪರ್ಕ ವ್ಯವಸ್ಥೆ ಈ ಗ್ರಾಮಕ್ಕೆ ಸರಿಯಾಗಿ ಇಲ್ಲ. ನಂತರ, ತಮ್ಮ ಪ್ರಾಥಮಿಕ ಶಾಲೆಯನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆಯ ಶಿವಪುರ ಗ್ರಾಮದಲ್ಲಿ ಕಲಿತ ಬಳಿಕ ತಮ್ಮ ಪ್ರೌಢಶಾಲೆಯನ್ನು ಶ್ರೀ ನುಲಿಯ ಚಂದ್ರಯ್ಯ ಪ್ರೌಢ ಶಾಲೆ ಶಿವಪುರದಲ್ಲಿ ವಿದ್ಯಾಭ್ಯಾಸ ನಡೆಸಿದರು.
ಮುಂದಿನ ಶಿಕ್ಷಣವನ್ನು ಬಿ ಎಲ್ ಆರ್ ಪಿಯು ಕಾಲೇಜು ಸಿರಿಗೆರೆ, ಎಂ ಬಿ ಆರ್ ಡಿಗ್ರಿ ಕಾಲೇಜು ಸಿರಿಗೆರೆಯಲ್ಲಿ ಪದವಿ ಮುಗಿದ ನಂತರ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ ಮಲ್ಲಾಡಿಹಳ್ಳಿಯಲ್ಲಿ ಬಿಇಡಿ ಮುಗಿಸಿದರು. ಅರ್ಥಶಾಸ್ತ್ರ ಪದವಿಯನ್ನು ದಾವಣಗೆರೆಯ ವಿಶ್ವವಿದ್ಯಾಲಯ, ತೋಳುಹುಣಸೆಯಲ್ಲಿ, ಮತ್ತು ರಾಜ್ಯಶಾಸ್ತ್ರ ವಿಷಯದಲ್ಲಿ ಎಂ ಎ ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರುನಿಂದ ಪಡೆದು, ಆನಂತರ ಅತಿಥಿ ಶಿಕ್ಷಕಿಯಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹಚ್ಚೂಳ್ಳಿ ಶಿರಗೊಪ್ಪ ತಾಲ್ಲೂಕು ಬಳ್ಳಾರಿ ಜಿಲ್ಲೆಯಲ್ಲಿ ಕೆಲಸವನ್ನು ನಿರ್ವಹಿಸಿರುತ್ತಾರೆ.
ಇವರು ಪ್ರಾಥಮಿಕ ಶಾಲೆಯನ್ನು ಕಲಿಯುವಾಗಲೆ ಸಾಹಿತ್ಯದ ಬಗ್ಗೆ ತುಂಬಾ ಆಸಕ್ತಿ ತೋರಿಸಿ ಕಥೆ, ಕವನ ಹಾಗೂ ಬರವಣಿಗೆಯ ಜೊತೆಗೆ ಬಡ ಮಕ್ಕಳಿಗೆ ಉಚಿತವಾಗಿ ಪಾಠವನ್ನು ಮಾಡುತ್ತಿದ್ದಾರೆ. ತಮ್ಮ ಊರಿನ ರಸ್ತೆಗಾಗಿ ಮೋದಿಜಿವರೆಗೂ ಪತ್ರ ಬರೆದು ತಮ್ಮ ಊರಿಗೆ ಡಾಂಬರು ರಸ್ತೆಯ ನಿರ್ಮಾಣಕ್ಕೆ, ಮತ್ತು ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಹಲವಾರು ಸಮಾಜ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಊರ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ . ಇವರ ಸಮಾಜ ಸೇವೆಯನ್ನು ನೋಡಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಫಲಕವನ್ನು ನೀಡಿ ಸನ್ಮಾನಿಸಿ ಗೌರವಿಸಿದೆ.
ಇವರ ಸಾಧನೆಯನ್ನು ನೋಡಿ ಊರಿನ ಗುರು, ಹಿರಿಯರಿಗೆ ಮೆಚ್ಚುಗೆ ಪಾತ್ರರಾಗಿದ್ದಾರೆ. ಇವರ ಸಾಧನೆ ಹಾಗೂ ಸಮಾಜ ಸೇವೆ ನಿರಂತರವಾಗಿರಲಿ ಎಂದು ಶುಭಹಾರೈಸುವೆ.

ಲೇಖಕರುಬಸವರಾಜ ಎಸ್. ಬಾಗೇವಾಡಿಮಠ.
ರಾಣೆಬೇನ್ನೂರು. ಜಿಲ್ಲಾ: ಹಾವೇರಿ.










