ಕಣ್ಣಿಗೆ ಕಾಣದ ಒಂದು ಸಣ್ಣ ವೈರಾಣು ಇಡೀ ಪ್ರಪಂಚದ ಮೂಲೆಮೂಲೆಗಳಲ್ಲಿ ಸಂಚರಿಸಿ ಜನರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದೆ. ಕೆಲವೆ ಕೆಲವೇ ದಿನಗಳಲ್ಲಿ ಕರೋನ ಎನ್ನುವ ಹೆಮ್ಮಾರಿ ಹಲವಾರು ಸಾವು ನೋವುಗಳಿಗೆ ಕಾರಣವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ತನ್ನ ಕಬಂಧಬಾಹುವನ್ನು ಭಾರತದಾದ್ಯಂತ ಅವರಿಸುವುದರ ಜೊತೆಗೆ ರಾಜ್ಯದ ಮೂಲೆ ಮೂಲೆಗೆ ಸಂಚಾರ ಮುಂದುವರಿಸಿ ಹಲವಾರು ಜನರ ಜೀವನದ ದಾರಿಯನ್ನು ಮುಚ್ಚಿದೆ.
ಈ ಕರೋನ ಎನ್ನುವ ರೋಗದಿಂದಾಗಿ ನಮ್ಮ ಬದುಕು ಕಬ್ಬಿಣದ ಕಡಲೆಯಂತೆಯಾಗಿದೆ. ದುಡಿದು ಬದುಕುವುದಕ್ಕೆ ಕೆಲಸ ಇಲ್ಲ ,ಕುಳಿತ್ತು ತಿನ್ನುದಕ್ಕೆ ಗಳಿಸಿ ಕೂಡಿಟ್ಟ ಸಂಪತ್ತು ಇಲ್ಲ, ಇರುವುದಕ್ಕೆ ಸ್ವಂತ ಸೂರು ಇಲ್ಲ, ಇರುವ ಮನೆಯ ಬಾಡಿಗೆ ಕಟ್ಟವುದಕ್ಕೆ ದುಡಿಮೆ ಇಲ್ಲ. ಹಲವರ ಜೀವನ ಹರಿದ ಕಾಗದ ಚುರುಗಳಂತೆ ಚಿದ್ರ ಚಿದ್ರವಾಗಿದೆ. ಹೊಟ್ಟೆಪಾಡಿಗಾಗಿ ರಟ್ಟೆಯನ್ನೇ ನಂಬಿ ತನ್ನ ಸಂಸಾರದೊಂದಿಗೆ ದೂರದ ಊರುಗಳಿಗೆ ಬಂದು ಬದುಕುವವರ ಜೀವನದ ಬವಣೆ ಯಾವ ಹಿತಶತ್ರುಗಳಿಗೂ ಬೇಡವಾಗಿದೆ.
ರೋಗದ ವಿರೋಧ ಹೋರಾಟ ಮಾಡುವುದು ಒಂದು ಕಡೆಯಾದರೆ ,ನಮ್ಮ ಊರಿನಲ್ಲಿ ಇರುವ ತಂದೆ -ತಾಯಿ, ನಮ್ಮನ್ನು ನಂಬಿ ಬಂದ ಹೆಂಡತಿ ಮಕ್ಕಳ ಬಗ್ಗೆ ಯೋಚಿಸಿದರೆ ಬದುಕಿನ ಭಯ ಕಾಡತೊಡಗುತ್ತಿದೆ.
ಹೊತ್ತಿನ ಚೀಲ ತುಂಬಿಸುವ ಕೆಲಸದ ಬಗ್ಗೆ ಯೋಚಿಸುವುದರ ಜೊತೆಗೆ, ನಮ್ಮಂತಹ ಹತ್ತಾರು ಜನರಿಗೆ ಹೋಟೆಲ್, ಬಾರ್ ,ಬೇಕರಿ ಇತ್ಯಾದಿ ಕೆಲಸ ನೀಡಿರುವ ಮಾಲೀಕರ ಬಗ್ಗೆ ಯೋಚಿಸಿದರೆ ಭವಿಷ್ಯತ್ತಿನ ಅಂಧಕಾರದ ಕಾರ್ಮೋಡ ತಲೆಯ ಮೇಲೆರಗಿದಂತಿದೆ.
ಆದರೇನು ಮಾಡೋವುದು .ಬದುಕಿನ ಭಯ ಕಾಡತೋಡಗಿದರೂ ನಮ್ಮ ಇಂದಿನ ಬದುಕನ್ನು ಸರಿಪಡಿಸಿಕೊಳ್ಳ ಬೇಕಾಗಿರುವುದು ನಮ್ಮ ಕರ್ತವ್ಯ. ನಾವು ಈಗಿನ ದಿನದಲ್ಲಿ ನಮ್ಮನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ನಮ್ಮವರನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯ. ಅದಕ್ಕಾಗಿ ಕರೋನದಿಂದ ಎಲ್ಲರೂ ಜಾಗೃತಿಯಿಂದ ಇರುವುದರೊಂದಿಗೆ ನಮ್ಮ ಕುಟುಂಬ ಸದಸ್ಯರುಗಳ ರಕ್ಷಣೆ ಸಹ ನಮ್ಮಮೇಲೆ ಇದೆ .ಇರುವ ಭಾಗ್ಯವ ನೆನದು ಭವಿಷ್ಯದ ಸವಾಲುಗಳನ್ನು ಎದುರಿಸೋಣ.ಅನಗತ್ಯ ಸಂಚಾರಕ್ಕೆ ಕಡಿವಾಣ ಹಾಕೋಣ. ಸರ್ಕಾರದ ಕೋವಿಡ್ ನಿಯಮಗಳನ್ನು ಮುಂಜಾಗ್ರತಾ ಕ್ರಮವನ್ನು ಪಾಲಿಸೋಣ.
ಎ ಎಸ್ ಪೂಜಾರಿ
ಕಾಡಿನಕಲ್ಲು
ಇಡೂರು -ಕುಂಜ್ಞಾಡಿ