ಪ್ರತಿಭೆ ಅನ್ನೋದು ಯಾರ ಸೊತ್ತೂ ಅಲ್ಲ. ಪ್ರತಿಭೆಗೆ ಬಡವ-ಬಲ್ಲಿದ, ಹೆಣ್ಣು-ಗಂಡು ,ಜಾತಿ-ಧರ್ಮದ ತಾರತಮ್ಯ ಇಲ್ಲ. ಪ್ರತಿಯೊಂದು ಪ್ರತಿಭೆ ಅರಳಲು- ಬೆಳೆಯಲು ಬೇಕಾಗಿರುವುದು ಸ್ವ ಆಸಕ್ತಿ, ಛಲ, ಕಾಯಕ, ಪ್ರೀತಿ ಹಾಗೂ ಬೆಂಬಲ.
ಗಿಡವೊಂದು ಬಲಿತು ಹೆಮ್ಮರವಾಗಿ ಬೆಳೆಯ ಬೇಕಾದರೆ ಅದಕ್ಕೆ ಪ್ರಕೃತಿಯ ಪಂಚಭೂತಗಳು ಎಷ್ಟು ಮುಖ್ಯವೋ, ಒಬ್ಬ ಪ್ರತಿಭಾವಂತನ ಪ್ರತಿಭೆ ಬಾಹ್ಯ ಪ್ರಪಂಚಕ್ಕೆ ಪಸರಿಸಲು ಸಹೃದಯದವರು ಕೂಡ ಅಷ್ಟೇ ಮುಖ್ಯವಾಗುತ್ತಾರೆ. ಅದೆಷ್ಟೋ ಪ್ರತಿಭೆ ಗಳಿಗೆ ಸೂಕ್ತ ವೇದಿಕೆ ಸಿಗದೇ, ಬೇಲಿಯೊಳಗಿನ ಬಿಳಿ ಮಲ್ಲಿಗೆಯಂತೆ ಅರಳಿಯೂ, ಎಲೆಯ ಮರೆಯಲ್ಲಿ ಬಾಡಿ ಹೋಗುವ ಹಾಗೆ ಅವರ ಪ್ರತಿಭೆ ಎಂಬ ಮಲ್ಲಿಗೆ ಮಂಟಪ ಮಣ್ಣಲ್ಲೇ ಮಸಣ ವಾಗಿದ್ದು ಅಸಂಖ್ಯ.
ಆದರೆ ನಾಗರಿಕತೆ ಬೆಳೆದಂತೆ ಜಗತ್ತು ಇಂದು ವಿಜ್ಞಾನ- ತಂತ್ರಜ್ಞಾನ ಮಯವಾಗುತ್ತಿರುವ ಈ ಕಾಲ ಘಟ್ಟದಲ್ಲಿ, ಇಂತಹ ಅನೇಕ ಪ್ರತಿಭೆಗಳಿಗೆ ಪೂರಕವಾದ ವೇದಿಕೆ ಕಲ್ಪಿಸಿರುವುದೇ ಈ “ಸಾಮಾಜಿಕ ಜಾಲತಾಣ”. ಇದೊಂದು ಅಂಗೈಯಲ್ಲಿ ವಿಶ್ವವನ್ನು ಕಾಣಬಲ್ಲ ಪರಿಕರವಾದರೂ, ಅದರ ಸಾಧಕ-ಭಾದಕ ಅರಿತುಕೊಳ್ಳಬೇಕಾದುದು ಪ್ರತಿಯೊಬ್ಬ ವಿವೇಕಿಯ ಆದ್ಯ ಕರ್ತವ್ಯ. ಅಂತೆಯೇ ಸಾಮಾಜಿಕ ಜಾಲತಾಣಗಳನ್ನೇ ವೇದಿಕೆಯಾಗಿ ಬಳಸಿಕೊಂಡು, ತನ್ನ ಆಂತರ್ಯದಲ್ಲಿ ಅಡಗಿರುವ “ಗಾಯನ” ಎಂಬ ಸ್ತುಪ್ತ ಪ್ರತಿಭೆಯೊಂದನ್ನು ಗಾನಲೋಕಕ್ಕೆ ಉಣಬಡಿಸುತ್ತಿರುವ, ಗುರು ಇಲ್ಲದೆ ರಾಗ, ತಾಳ, ಶ್ರುತಿ, ಸಾಹಿತ್ಯ ಗಳನ್ನು ಮೇಳೈಸಿಕೊಂಡು ಸರಾಗವಾಗಿ ಹಾಡುವ ಗಾನ ಪ್ರತಿಭೆ ಮಂಜುನಾಥ್ ಮೊಗವೀರ.
ಕುಂದಾಪುರ ತಾಲೂಕು ಯಾಡಾಡಿ-ಮತ್ಯಾಡಿ ಗ್ರಾಮದ ದಿ. ನರಸಿಂಹ ಮೊಗವೀರ ಹಾಗೂ ಬಾಗಿ ದಂಪತಿಗಳ 7 ಜನ ಮಕ್ಕಳಲ್ಲಿ 4 ನೇ ಮಗನಾಗಿ ಜನಿಸಿರುವ ಮಂಜುನಾಥ್ ಬಡತನ ಹಾಗೂ ಕಷ್ಟದ ಜೀವನದಲ್ಲಿ ಬೆಳೆದವರು. ಸರ್ಕಾರಿ ಪದವಿ ಪೂರ್ವ ಕಾಲೇಜು, ಬಿದ್ಕಲ್ಕಟ್ಟೆ ಇಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ, ಕಾಯಕ ಕ್ಕಾಗಿ ದೂರದ ಬೆಂಗಳೂರು ಕಡೆ ಊರು ಬಿಟ್ಟು ಹೋಗುವ ಅನಿವಾರ್ಯತೆಯನ್ನು ಎದುರಿಸಿದವರು. ಬೆಂಗಳೂರು ಮಹಾನಗರದಲ್ಲಿ ಸಣ್ಣ ಹೋಟೆಲ್ ಉದ್ಯಮ ನಡೆಸಿದಾಗ್ಯೂ ಅದರಲ್ಲಿ ಯಾವುದೇ ಸಫಲತೆ ಕಂಡಿಲ್ಲ. ಕಾಲಚಕ್ರ ತಿರುಗುತ್ತಿದ್ದಂತೆ ತನ್ನ ತಂದೆ, ತಾಯಿ ಮರಣದ ನಂತರ ಮನೆಯ ಜವಾಬ್ದಾರಿ ಇವರ ಹೆಗಲಮೇಲೆ ಬಿದ್ದ ಪರಿಣಾಮ ಬೆಂಗಳೂರನ್ನು ಬಿಟ್ಟು ಹುಟ್ಟೂರ ಕಡೆ ಮುಖ ಮಾಡುವುದು ಅನಿವಾರ್ಯವಾಯಿತು.
ತದನಂತರ ನಂದಿನಿ ಯವರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರಿಗೆ ಮುದ್ದಾದ ಮಗಳು ಹನಿ ಇದ್ದಾಳೆ. ಪ್ರಸ್ತುತ 8 ವರ್ಷಗಳಿಂದ ಕರ್ನಾಟಕದ ಪ್ರಸಿದ್ಧ ದೇವಿ ದೇಗುಲಗಳಲ್ಲಿ ಒಂದಾದ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ, ಶ್ರೀಕ್ಷೇತ್ರ ಕಮಲಶಿಲೆ. ಇಲ್ಲಿ ಭದ್ರತಾ ಸಿಬ್ಬಂದಿ (SECURITY) ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಪಾದನೆಗಿಂತ ದೇವಿ ಕಾಯಕದಲ್ಲೇ ಸಂತೃಪ್ತಿ ಕಾಣುವ ಕಾಯಕ ಯೋಗಿ ಈ ಮಂಜುನಾಥ್ ಮೊಗವೀರ. ದೇವಾಲಯಕ್ಕೆ ಬರುವ ಪ್ರತಿಯೊಬ್ಬ ಭಕ್ತಾಭಿಮಾನಿಗಳಲ್ಲಿ ಮಂದಹಾಸ ದಲ್ಲಿ ಮಾತಾಡಿಸುವ ಮಂಜುನಾಥ್ ನಿಷ್ಕಲ್ಮಶ, ನಿಗರ್ವಿ ಎಂದರೆ ಅತಿಶಯೋಕ್ತಿಯಲ್ಲ. ದೇವಸ್ಥಾನದ ಒಳ- ಹೊರಗೆ ಎಲ್ಲಾ ವಿಭಾಗದಲ್ಲೂ ತನ್ನ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡ ಮಂಜುನಾಥ್ ದೇವಸ್ಥಾನ ಆಡಳಿತ ಮಂಡಳಿಯವರಿಗೆ ಪ್ರೀತಿ ಪಾತ್ರರಾದ, ಪ್ರಾಮಾಣಿಕ ಸಿಬ್ಬಂದಿ. ಆದಾಗ್ಯೂ ತನ್ನ ಕಾಯಕದ ಜೊತೆ ಜೊತೆಗೆ ಇಷ್ಟ ಪಡುವ ಇನ್ನೊಂದು ಹವ್ಯಾಸವೇ ಗಾಯನ. ಮಂಜುನಾಥ್ ಗೆ ಹಾಡುವುದೆಂದರೆ ಪಂಚಪ್ರಾಣ. ಇವರ ಈ ಸ್ವರ ಪ್ರತಿಭೆಗೆ ಸಿಕ್ಕಿದ ಭವ್ಯ ವೇದಿಕೆ “ಸಾಮಾಜಿಕ ಜಾಲತಾಣ” ಸರಿ ಸುಮಾರು ನೂರಕ್ಕೂ ಮಿಕ್ಕಿ ಅಧಿಕ ಹಾಡುಗಳನ್ನು ಹಾಡಿ, ಸಂಗೀತ ಪ್ರಿಯರಿಗೆ ಹಾಡಿನ ರಸದೌತಣ ಉಣಬಡಿಸುತ್ತಿರುವುದು ಅವರ ಪ್ರತಿಭೆಗೆ ಮತ್ತೊಂದು ಪ್ರತ್ಯಕ್ಷ ಸಾಕ್ಷಿ.
ನಿತ್ಯ ಕರ್ತವ್ಯದ ನಡುವೆ ಬಿಡುವಿದ್ದಾಗ, ಒಂಟಿಯಾಗಿ, ಜಂಟಿಯಾಗಿ ಹಾಡುವ ಹವ್ಯಾಸ ಇವರದ್ದಾಗಿದ್ದು, ಇವರ ಸ್ವರವೂ ಕೂಡ ಯಾವುದೇ ಪ್ರಸಿದ್ದ ಹಿನ್ನಲೆ ಗಾಯಕರಿಗೂ ಕಡಿಮೆ ಇಲ್ಲ. ಇತ್ತೀಚಿಗೆ ಸ್ವತಃ ಇವರೇ ರಚಿಸಿ, ಹಾಡಿದ ಕಮಲಶಿಲೆ ದೇವಿ ಭಕ್ತಿಗೀತೆ ತುಂಬಾ ಜನಮನ್ನಣೆ ಗಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಮುಂದಿನ ದಿನಮಾನಗಳಲ್ಲಿ ಇವರ ಸ್ವರ ಸಿಂಚನವು ಎಲ್ಲಾ ಕಡೆ ಪಸರಿಸಲಿ, ಲಿಂಗರೂಪಿಣಿ ಬ್ರಾಹ್ಮೀ ದುರ್ಗೆ ಆಶೀರ್ವಾದ ಸದಾ ಇವರ ಮೇಲೆ ಇರಲಿ, ಇವರ ವೈಯಕ್ತಿಕ ಜೀವನ ಸುಖಕರವಾಗಿರಲಿ ಎಂದು ಆಶಿಸೋಣ 💐💐💐💐💐💐💐💐💐💐💐💐👍👍👍
ಕೆ. ಸುಕುಮಾರ ಶೆಟ್ಟಿ
ಸಹಾಯಕ ಪ್ರಾಧ್ಯಾಪಕರು
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು
ಕುಂದಾಪುರ.