ಅದೇನೋ ಹತಾಶೆ. ಯಾವುದೂ ಸರಿ ಇಲ್ಲ ಎನ್ನುವ ಭಾವ. ಮರಳಿ ಪ್ರಯತ್ನಿಸಲೂ ಅದೇನೋ ಭಯ .ಪದೇ ಪದೇ ಅದೇ ಕನಸು ಹಳ್ಳ ಹಿಡಿಯುತ್ತಿರುವುದನ್ನು ನೋಡಿ ಕುಸಿದು ಹೋಗಿದ್ದೆ.
ಋಣಾತ್ಮಕ ಚಿಂತನೆ ತಲೆ ತುಂಬಾ ತುಂಬಿಕೊಂಡು ಬಿಟ್ಟಿದ್ದವು.ವಿಫಲವಾದ ಯೋಜನೆಯ ನೆನೆದು ಅತ್ತು ಅತ್ತು ಮಂಕಾಗಿಯೇ ಬಿಡುತ್ತಿದ್ದೆ.
ಹೊರ ಬರುವ ದಾರಿಯ ಹುಡುಕಾಟ ಮರಳಿ ನನ್ನ ಋಣಾತ್ಮಕ ಚಿಂತನೆಗೆ ದೂಡಿ ಹಾಕುತ್ತಿತ್ತು.
ಬದಲಾಗೋ ಆಸೆ ಅಲ್ಲ.ಕಳೆದುಕೊಂಡ ನನ್ನನ್ನು ಹುಡುಕಾಡೋ ಪ್ರಯತ್ನ ಅದಾಗಿತ್ತು.
ಒಂದು ಸಣ್ಣ ವಿರಾಮ ತೆಗೆದುಕೊಂಡೆ.ಆ ವಿರಾಮದಲ್ಲಿ ಯೋಚಿಸುವುದನ್ನು ಬಿಟ್ಟೆ.ಸುಮ್ಮನೆ ಕೂತಾಗಲೆಲ್ಲಾ ಎನೂ ಯೋಚಿಸದೇ ಕಣ್ಣು ಮುಚ್ಚಿ ಉಸಿರಾಟದ ಮೇಲೆ ಗಮನ ಕೊಡುತ್ತಾ ಧ್ಯಾನ ಮಾಡುತ್ತಿದ್ದೆ. ಅತ್ತು ಅತ್ತು ಮಂಕಾಗಿದ್ದ ಸಮಯವನ್ನು ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡೆ.ಆದಷ್ಟು ಬ್ಯೂಸಿ ಆಗಿಬಿಡುತ್ತಿದ್ದೆ.ಸುಖಾಸುಮ್ಮನೆ ಇಲ್ಲದ ಕೆಲಸ,ಒಲ್ಲದ ಕೆಲಸವನ್ನು ಹುಡುಕಾಡಿ ಮಾಡುತ್ತಿದ್ದೆ.ತಿರುಗಾಟ ಎಂದರೆ ದೇವಸ್ಥಾನ ಸುತ್ತುವುದು, ಪುಸ್ತಕ ಓದುವುದು,ಹಾಡು ಕೇಳುವುದು ಅಭ್ಯಾಸವೇ ಆಗಿಹೋಗಿತ್ತು.ಇದರಿಂದ ಇನ್ನೂ ತಿಳಿದುಕೊಳ್ಳೊ ಆಸಕ್ತಿಯಲ್ಲಿ ಪುಸ್ತಕ ಪ್ರೇಮಿಯಾಗಿದ್ದಂತೂ ಸತ್ಯ . ಕೆಲವೊಂದು ಅನಾಹುತಗಳಿಂದ ಅದ್ಭುತಗಳು ಸ್ರಷ್ಠಿಯಾಗುವುದುಂಟು! ಆ ಸಣ್ಣ ವಿರಾಮ ಬದುಕುವ ದಾರಿ ತೋರಿಸಿತ್ತು.
ಅದೃಷ್ಟ ಅಲ್ಲ! ಆಶಾವಾದಿಯಾಗಿರಿಬೇಕು.ಕಾರಣ ಅದೃಷ್ಟ ಅಪರೂಪ.ಆಶಾವಾದಿಗಳು ಯಾವಾಗಲೂ ಧನಾತ್ಮಕ ಚಿಂತನೆಯನ್ನೇ ಮಾಡುತ್ತಾರೆ.
ಏಳು ಬೀಳು ಸಹಜ. ಮುಂದೆ ನಡೆಯೋನೇ ಮನುಜ. “ಸೋಲು ಸಹಜವಾದದ್ದು ,ಸೋತಾಗ ಹಿಂದೆ ಬೀಳದೇ ಮುಂದೆ ಬೀಳಬೇಕು (you can win)” ಎಂಬ ಮಾತಿದೆ.ಇದರ ಅರ್ಥ ಹಿಂದೆ ಬೀಳುವುದೆಂದರೆ ಗತಿಸಿದ್ದನ್ನೇ ಕೊರಗುವುದು. ಮುಂದೆ ಬೀಳುವುದೆಂದರೆ,ಆಗಿರುವ ಸೋಲು ಮರುಕಳಿಸದೇ ಆದ ತಪ್ಪು ತಿದ್ದಿಕೊಂಡು ಮುಂದೆ ಸಾಗುವುದು. ಕೆಲವೊಮ್ಮೆ ಇನ್ನೊಬ್ಬರ ತಪ್ಪುಗಳಿಗೆ ನಾವು ಬಲಿಯಾಗುವುದುಂಟು.ಈ ಪರಿಯ ಅನುಭವಕೆ ಸೇಡು ತೀರಿಸಿಕೊಳ್ಳುವುದು ಸೂಕ್ತವಲ್ಲ. ಖಂಡಿತ ಈ ಸೋಲು ನಮ್ಮದೇ.
ಸೇಡಿನ ಕಾಲಹರಣದ ಬದಲು ಸೋತಿದ್ದ ಕಡೆಯಿಂದಲೇ ಗೆಲುವಿನ ಪಯಣ ಬೆಳೆಸೋಣ. ಅವರ ಉತ್ತರ ಅವರೇ ಕಂಡುಕೊಳ್ಳಲಿ.ಹಂತ ಹಂತವಾಗಿ ಉತ್ತಮ (better) ರಾಗೋಣ .ಅಲ್ಲಿಂದ ಕೆಳಗೆ ಬಿದ್ದರೂ,ಪ್ರಯತ್ನ ಮರಳಿಸಿ ಮತ್ತೆ ಪಯಣ ಬೆಳೆಸೋಣ.ಸೋಲೊಂದು ಸವಾಲಾಗಲಿ..
ದಾರಿ ದೂರವಾದರೂ ನಮ್ಮತನ,
ಸ್ವಾಭಿಮಾನದಿಂದಲೇ ಗುರಿ ಸೇರೋಣ…
“ಅದೃಷ್ಟವಂತರಲ್ಲ,ಆಶಾವಾದಿಯಾಗೋಣ”
Hope for best …
-ಅರ್ಚನಾ .ಆರ್. ಕುಂದಾಪುರ