ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾ, ಮಿತ್ರ ಬಳಗವನ್ನು ಬೆಳೆಸುತ್ತಾ, ತಮ್ಮ ಬದುಕಿನ ಇತಿಮಿತಿಯ ಒಳಗೆ ಉತ್ತಮ ಕೆಲಸ ಮಾಡುವುದರೊಂದಿಗೆ ಹ್ರದಯ ವೈಶಾಲ್ಯತೆಯನ್ನು ತೋರುವ ಒಬ್ಬ ಯುವಕನ ಬಗ್ಗೆ ನಿಮಗೆ ಹೇಳಲೇ ಬೇಕು.
ಅವರೇ ಸರಳ ಸ್ವಭಾವದ ಸೇವಾ ಜೀವಿ,ಯುವ ಸಾಹಿತಿ ಉಪ್ಪುಂದ ಮೇಲ್ಮನೆ ಜಗದೀಶ್ ದೇವಾಡಿಗ. ಗೆಳೆಯರು ಇವರನ್ನು ಪ್ರೀತಿಯಿಂದ” ಜಗ್ಗು” ಎಂದು ಕರೆಯುತ್ತಾರೆ. ಶ್ರೀಯುತರು 1985ರ ಮಾರ್ಚ್ ,7 ರಂದು ಭದ್ರ ದೇವಾಡಿಗ & ಚಂದು ದೇವಾಡಿಗರ ಎರಡನೆಯ ಮಗನಾಗಿ ಉಪ್ಪುಂದದ ಮೇಲ್ಮನೆಯಲ್ಲಿ ಜನಿಸಿದರು.ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಥಬೀದಿ, ಉಪ್ಪುಂದ ಹಾಗೂ ಪ್ರೌಢ ಶಿಕ್ಷಣವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪುಂದ ಹಾಗೂ ಭಟ್ಕಳದ ಅಂಜುಮಾನ್ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆದರು.
ವಿದ್ಯಾರ್ಥಿ ದೆಸೆಯಲ್ಲಿಯೇ ಇವರಿಗೆ ಸಾಹಿತ್ಯ, ಕಲೆ ಸಮಾಜ ಸೇವೆಯಲ್ಲಿ ಆಸಕ್ತಿ . ತಾವು ಬಡವರಾದಾರು ತಮಗಿಂತ ಬಡಜನತೆಯನ್ನು ಕಂಡರೆ ಅನುಕಂಪ ಹೆಚ್ಚು. ತನ್ನ ಕೈಲಾದಷ್ಟು ಇತರರಿಗೆ ಸಹಾಯ ಮಾಡಬೇಕೆನ್ನುವ ಇವರ ಸೇವಾ ಮನೋಭಾವದ ಫಲವಾಗಿಯೇ ಕೊಂಕಣ್ ರೈಲ್ವೆಯಲ್ಲಿ ಉದ್ಯೋಗ ಅರಸಿ ಬರುತ್ತದೆ.ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ‘ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸ್ವಚ್ಚತೆಯ ಕುರಿತಾದ ಬೀದಿ ನಾಟಕಗಳನ್ನು ಕೊಂಕಣ್ ರೈಲ್ವೆ ಹಾದು ಹೋಗುವ ಹಲವಾರು ರೈಲ್ವೆ ಸ್ಟೇಷನ್ ಗಳಲ್ಲಿ ಹಮ್ಮಿಕೊಂಡಿದ್ದಾರೆ.
ಇವರು ತಮ್ಮ ಸಂಪಾದನೆಯ ಒಂದಿಷ್ಟು ಮೊತ್ತವನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ” ದೇವಾಡಿಗ ಅಕ್ಷಯ ಕಿರಣದ “. ಸೇವಾದಾರರಾಗಿದ್ದಾರೆ. ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಸೇವಾ ಹಾಗೂ ಸ್ನೇಹ ಜೀವಿ.
ಇವರ ಇನ್ನೊಂದು ವಿಶೇಷತೆಯೆಂದರೆ ಸಾಹಿತ್ಯ ಕೃಷಿಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು.
ಇವರೊಬ್ಬ ಕವಿಯು ಹೌದು. ಅನೇಕ ಕವನ, ಹನಿಗವನವನ್ನು ರಚಿಸಿದ್ದಾರೆ.
ಇದುವರೆಗೆ ಸುಮಾರು 350 ರಿಂದ 400 ಹನಿಗವನ, ಕವನಗಳನ್ನು ರಚನೆ ಮಾಡಿರುತ್ತಾರೆ. ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದ & ಕೇಂದ್ರ ಸಾಹಿತ್ಯ ಮಟ್ಟದ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ತಮ್ಮ ಸ್ವರಚಿತ ಕವನಗನ್ನು ವಾಚಿಸಿರುತ್ತಾರೆ. ಶ್ರೀ ದುರ್ಗಾಫ್ರೆಂಡ್ಸ್ ರಥಬೀದಿ (ರಿ.) ಉಪ್ಪುಂದ ಇವರ ವತಿಯಿಂದ “ಯುವ ಕವಿ” ಸನ್ಮಾನ,
ಜೇಸಿಐ ಉಪ್ಪುಂದದ 15ನೇ ಜೇಸಿ ಸಪ್ತಾಹದಲ್ಲಿ ಸನ್ಮಾನ ಇವರ ಕವಿ ಮನಸು ಮತ್ತು ಪ್ರತಿಭೆಗೆ ಸಂದ ದೊಡ್ಡ ಗೌರವ. ಸಮಾಜ ಸೇವೆಯನ್ನು ಪ್ರಚಾರಕ್ಕಾಗಿ ಮಾಡದೆ ,ತನ್ನ ಸೇವಾ ವಿವರವನ್ನು ಹೇಳಿಕೊಳ್ಳದ ಸಂಕೊಚದ ಸ್ವಭಾವದವರು.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಥಬೀದಿ ಶಾಲಾ ಮಕ್ಕಳಿಗೆ ಐಡಿ ಕಾರ್ಡ್ ವಿತರಣೆಗೆಯಲ್ಲಿ ಶ್ರೀಯುತರ ಪೂರ್ಣ ಸಹಕಾರ ಸಹಾಯ ಇದೆ.
ಕನ್ನಡ & ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಮಂದಾರ ಕಲಾವಿದರ ವೇದಿಕೆ (ರಿ.) ಬೀದರ್ ಇವರ ವತಿಯಿಂದ 2019ರ ಡಿಸೆಂಬರ್ 15 ರಂದು ಜರುಗಿದ ರಾಜ್ಯಮಟ್ಟದ ರಜತ ಕವಿ ಸಮ್ಮೇಳನದಲ್ಲಿ ” ಕಾವ್ಯ ಭೂಷಣ ಪ್ರಶಸ್ತಿ “, 2020ರ ಫೆಬ್ರವರಿ 2 ರಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರ ಇದರ ಜಿಲ್ಲಾ ಘಟಕದ ವತಿಯಿಂದ ಬೀದರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ, ಹಾಸ್ಯ ತರಂಗ ಕಲಾ ಸಂಸ್ಥೆ ಬೆಂಗಳೂರು ಹಾಗೂ ವೈ.ಸತ್ಯನಾರಾಯಣ ಕೇರಳದ ಕಾಸರಗೋಡು ಇವರ 80ರ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ, ಅಖಿಲ ಕರ್ನಾಟಕ ದ್ವಿತೀಯ ಕವಿ-ಕಾವ್ಯ ಸಮ್ಮೇಳದಲ್ಲಿ ವಿಶೇಷ ಗೌರವ.
ಈ ಎಲ್ಲಾ ಪುರಸ್ಕಾರ ಗೌರವಗಳು ಎಳವೆಯಲ್ಲೇ ಇವರನ್ನು ಹುಡುಕಿ ಬಂದಿರುವುದು ವಿಶೇಷವೇ ಹೌದು.
ಶ್ರೀಯುತರು ತನ್ನ ವ್ರತ್ತಿ ಧರ್ಮಕ್ಕೆ ಕಿಂಚಿತ್ತೂ ಚ್ಯುತಿ ತೋರದೆ ಕೊಂಕಣ ರೈಲ್ವೇಯಲ್ಲಿ ಯಾತ್ರಾರ್ಥಿಗಳಿಗೆ ಸರಿಯಾದ ಮಾಹಿತಿಯನ್ನು ಕ್ಲಪ್ತ ಸಮಯದಲ್ಲಿ ಒದಗಿಸಿದ ಸೇವಾ ಸಂತ್ರಪ್ತಿ ಇವರಿಗಿದೆ.
ಬಾಳಸಂಗಾತಿ ಸುಮತಿ ಮತ್ತು ಮಗಳು ಆರ್ವಿ ಜೊತೆ ಸುಂದರ ಸಂಸಾರಿಕ ಜೀವನ ಸಾಗಿಸುತ್ತಿರುವ ಇವರು ಇನ್ನೂ ಉತ್ತಮ ಸಮಾಜ ಸೇವೆ, ಉತ್ತಮ ಸಾಹಿತ್ಯ ಕೃಷಿ ಮಾಡಲಿ, ಉಪ್ಪುಂದ ಶ್ರೀ ದುರ್ಗಾ ಪರಿಮೇಶ್ವರಿ ತಾಯಿ ಇವರಿಗೆ ಆಯುರ್ ಆರೋಗ್ಯ ಕೊಟ್ಟು ರಕ್ಷಣೆ ಮಾಡಲಿ ಎಂಬದು ನಮ್ಮ ಹರಕೆ ಮತ್ತು ಹಾರೈಕೆ.
ಲೇಖನ :-✍️ಈಶ್ವರ ಸಿ ನಾವುಂದ.