ಅಂದು ಶಿವರಾತ್ರಿಯ ಅಮಾವಾಸ್ಯೆ, ಸಂಜೆ ಹೊತ್ತು ನನ್ನ ಬಾಲ್ಯದ ಸ್ನೇಹಿತರ ಜೊತೆ ಆಟ ಮುಗಿಸಿ ಮನೆಗೆ ಹೋಗುವಾಗ, ಗೆಳೆಯ ಅಶೋಕ್ ಹೇಳಿದ “ಇವತ್ತು ಕೋಟೇಶ್ವರ ದೇವಸ್ಥಾನದಲ್ಲಿ ಯಕ್ಷಗಾನ ಇದೆ, ನನ್ನ ಬಳಿ ಹಣ ಇದೆ, ಈವಾಗಲೇ ಹೋಗಿ ಅಲ್ಲೇ ಏನಾದ್ರೂ ತಿಂದು ಯಕ್ಷಗಾನ ನೋಡಿಕೊಂಡು ಬರೋಣ” ಎಂದು ಹೇಳುತ್ತಿದ್ದಂತೆ ಹಿಂದೆ ಮುಂದೆ ನೋಡದೆ ಅವನೊಂದಿಗೆ ಯಕ್ಷಗಾನ ನೋಡಲು ಹೋಗಿದ್ದೆ. ಇತ್ತ ಊಟ ಸಿದ್ದಪಡಿಸಿಕೊಂಡು ಕಾದಿದ್ದ ಅಮ್ಮನಿಗೆ ಚಿಂತೆ ಹೆಚ್ಚಾಗಿ ಅಪ್ಪನಿಗೆ ಹೇಳಿ ನನ್ನನ್ನು ಹುಡುಕಲು ಕಳುಹಿಸಿದರು. ನಮ್ಮ ಆಟದ ಮೈದಾನ ನೋಡಿ, ಸುತ್ತಮುತ್ತಲಿನ ಮನೆಗಳಲ್ಲಿ, ಸ್ನೇಹಿತರಲ್ಲಿ ವಿಚಾರಿಸಿದಾಗ ನಾನು ಆವಾಗಲೇ ಆಟ ಮುಗಿಸಿ ಮನೆಗೆ ಹೋಗಿದ್ದೇನೆ ಎಂದು ಕೇಳಿದಾಗ ನಮ್ಮ ಅಪ್ಪನಲ್ಲಿ ಆತಂಕ ಹೆಚ್ಚಾಯಿತು. ಮೊಬೈಲ್ ಇಲ್ಲದ ಕಾಲವದು, ಆದ್ದರಿಂದ ನಮ್ಮ ಅಕ್ಕಪಕ್ಕದ ಸಂಬಂಧಿಕರ ಮನೆಗೆಲ್ಲ ಖುದ್ದಾಗಿ ಹೋಗಿ ನಾನು ಅಲ್ಲಿ ಇಲ್ಲವೆಂದು ತಿಳಿದ ಮೇಲೆ, ಕೆರೆ ಬಾವಿಗಳಲ್ಲಿ ಹುಡುಕಾಟ ಶುರು ಮಾಡಿದರು. ಎಲ್ಲೂ ನನ್ನನ್ನು ಕಾಣದೇ ಇದ್ದಾಗ ನಡುರಾತ್ರಿಯಲ್ಲಿ ಜ್ಯೋತಿಷಿಗಳ ಮನೇಲಿ ನಿಮಿತ್ತು ಕೇಳಿದಾಗ ಪ್ರಾಣಕ್ಕೇನು ಅಪಾಯ ಇಲ್ಲ ಎಂಬ ಉತ್ತರ ಕೇಳಿ ನಿಟ್ಟುಸಿರು ಬಿಟ್ಟವರು ನಮ್ಮಪ್ಪ.
ಅಂದು ನಿಜವಾಗಿಯೂ ಮನೆ ಮಂದಿಗೆಲ್ಲ ಶಿವರಾತ್ರಿಯ ಉಪವಾಸ ನಡೆದುಹೋಗಿತ್ತು. ಯಕ್ಷಗಾನ ನೋಡ ನೋಡುತ್ತಾ ಅಲ್ಲೇ ಮಲಗಿದ್ದ ನಾನು ಬೆಳಿಗ್ಗೆ ಮನೆಗೆ ಬರೋವಾಗ ಮನೆ ಮುಂದೆ ಜನ ಜಮಾಯಿಸಿಯಾಗಿತ್ತು, ನನ್ನ ನೋಡಿದ ನನ್ನ ಪುಟ್ಟ ತಂಗಿ “ಅಣ್ಣ ಬಂದ” ಎಂದು ಹೇಳುತ್ತಲೇ ಎಲ್ಲಿದ್ದರೋ ಏನೋ ನಮ್ಮಪ್ಪ ಓಡಿ ಬಂದು ತಬ್ಬಿಕೊಂಡು ಪಟಪಟನೆ ಹೊಡೆಯೋಕೆ ಪ್ರಾರಂಭಿಸಿದರು, ಎಲ್ಲರೂ ಆಶ್ಚರ್ಯ ಚಕಿತರಾಗಿ ನನ್ನನ್ನೇ ನೋಡುತ್ತಿದ್ದರು. ನನಗೆ ಮಾತ್ರ ಏನು ನಡೆಯುತ್ತಿದೆ ಅಂತಾನೆ ಗೊತ್ತಾಗದೆ ಅಳಲು ಪ್ರಾರಂಭಿಸುತ್ತಿದ್ದಂತೆ ಅಪ್ಪನೂ ಅಳುತ್ತಾ ತಬ್ಬಿಕೊಂಡು ಮುದ್ದಿಸೋಕೆ ಶುರು ಮಾಡಿದ್ದರು. ಅದೇ ಮೊದಲು ಅದೇ ಕೊನೆ ನಮ್ಮ ಅಪ್ಪ ಅಳುವುದನ್ನು ನಾನು ಕಂಡಿದ್ದು.
ಆವತ್ತು ಅಪ್ಪ ಹೇಳಿದರು “ನೀನು ಎಲ್ಲಿಗೆ ಬೇಕಾದರೂ ಹೋಗು, ಆದರೆ ಇನ್ನು ಮುಂದೆ ಹೋಗವಾಗ ನಮಗೆ ಹೇಳಿ ಹೋಗು” ಎಂದು ತಿಳಿ ಹೇಳಿದರು. ಅಂದಿನಿಂದ ಇಂದಿನವರೆಗೆ ಮನೆಯಿಂದ ಹೊರಗೆ ಹೋಗುವಾಗ ನಾನು ಇಂತಲ್ಲಿಗೆ ಹೋಗುತ್ತಿದ್ದೇನೆ ಎಂದು ಹೇಳಿಯೇ ಮನೆಯಿಂದ ಹೊರಗೆ ಹೆಜ್ಜೆ ಇಡುವ ಪರಿಪಾಟವನ್ನು ಬೆಳೆಸಿಕೊಂಡಿದ್ದೇನೆ.
ಅಪ್ಪಾ! ನೀವು ಕರ್ರಗೆ ಒರಟನಂತೆ ಕಂಡರೂ ತುಂಬಾ ಮೃದು ಸ್ವಭಾವದವರು..
ಇಡೀ ಸಂಸಾರದ ಭಾರವನ್ನು ನೀವೊಬ್ಬರೇ ದುಡಿದು ಸಲಹುವಾಗ ಎಂದಿಗೂ ನೀವು ನಿಮ್ಮ ಕಷ್ಟವನ್ನು ನಮ್ಮೆದುರಿಗೆ ತೋರಿಸಿಕೊಂಡವರಲ್ಲ..
ನಮ್ಮದು ಬಡ ಮಧ್ಯಮ ವರ್ಗದ ಕುಟುಂಬವಾಗಿದ್ದರೂ ನಮ್ಮೆಲ್ಲರ ಬೇಕು ಬೇಡಗಳನ್ನು ತಾಳ್ಮೆಯಿಂದಲೇ ಕೇಳಿ ಕಷ್ಟವಾದರೂ ಇಷ್ಟದಿಂದಲೇ ನೆರವೇರಿಸಿದ್ದೀರಿ,
ಹಬ್ಬ ಹರಿದಿನ, ಮದುವೆ ಮುಂಜಿಗಳಿಗೆ ನಮಗೆ ಹೊಸ ಬಟ್ಟೆ ತೆಗೆಸಿಕೊಟ್ಟ ನೀವು ಮಾತ್ರ ಹಳೆ ಬಟ್ಟೆಯಲ್ಲೇ ನಮ್ಮ ಚಂದ ನೋಡುತ್ತಿದ್ದಿರಿ.
ಹಲವು ಬಾರಿ ಕೆಲಸವಿಲ್ಲದೆ ಮನೆಯಲ್ಲಿ ಇದ್ದಾಗಲೂ ಅವರಿವರಲ್ಲಿ ಕೇಳಿ ಮಾಡಿ ನಮ್ಮ ಹೊಟ್ಟೆ ಸದಾ ತುಂಬಿರುವಂತೆ ನೋಡಿಕೊಂಡಿದ್ದೀರಿ,
ಒಂದು ಸಣ್ಣ ಸ್ಕೂಟರ್ ನಲ್ಲೇ ಹೆಂಡತಿ ಮಕ್ಕಳನ್ನು ತಿರುಗಾಡಿಸುವ ಆಸೆ ಹೊತ್ತಿದ್ದ ನೀವು, ನಾನು ಕೇಳಿದ ದುಬಾರಿ ಸೈಕಲ್ ಗಾಗಿ ನಿಮ್ಮ ಆಸೆಯನ್ನು ಬದಿಗೊತ್ತಿ ನನಗೆ ಸೈಕಲ್ ತೆಗೆಸಿಕೊಟ್ಟು ನನ್ನ ಸಂತೋಷದಲ್ಲಿ ನಿಮ್ಮ ನೋವ ಮರೆತಿದ್ದೀರಿ.
ಕೋಳಿ ತನ್ನ ಮರಿಗಳನ್ನು ರಣಹದ್ದುಗಳಿಂದ ರಕ್ಷಿಸಿ ಕಾಪಾಡುವಂತೆ ನೀವು ಸದಾ ನಮ್ಮನ್ನು ನಿಮ್ಮ ಕಣ್ಣರೆಪ್ಪೆಯಡಿಯಲ್ಲೇ ಕಾಪಾಡಿದ್ದೀರಿ, ಹೆಂಡತಿ ಮಕ್ಕಳಿಗಾಗಿ ನಿಮ್ಮವರಿಂದಲೇ ನಿಷ್ಟುರ ಕಟ್ಟಿಕೊಂಡಿರಿ.
ನಿಮಗೆ ಎಷ್ಟೇ ಕಷ್ಟವಿದ್ದರೂ ಅದನ್ನು ತೋರ್ಪಡಿಸದೆ ನಮ್ಮೆಲ್ಲಾ ಬಯಕೆಗಳನ್ನು ಈಡೇರಿಸುತ್ತಾ ಬಂದಿದ್ದೀರಿ.
ಶಿಕ್ಷಸದೇ ಬರೀ ಬುದ್ದಿವಾದದ ಮಾತುಗಳಿಂದಲೇ ನಮ್ಮನ್ನು ತಿದ್ದಿದ ಜಾದೂಗಾರ ನೀವು..
ಆದರೆ ನೀವೇಕೆ ಹೀಗೆ ಮಾಡಿದಿರಿ ಅಪ್ಪಾ..?!
ಯಾವಾಗಲೂ ಹೇಳಿಯೇ ಹೋಗಬೇಕು ಎಂದು ಪಾಠ ಕಳಿಸಿದ್ದ ನೀವು ಯಾಕೆ ಹೇಳದೆ ಹೋದಿರಿ?
ಎಂದಿನಂತೆ ಆವತ್ತೂ ಕೂಡಾ ನಿಮಗೆ ಹೇಳಿಯೇ ನಾನು ಕೆಲಸಕ್ಕೆ ಹೋಗಿದ್ದೆ, ಆದರೆ ನಾನು ಬರುವಾಗ ನೀವು ಮಾತ್ರ ಹೆಣವಾಗಿ ಮಲಗಿದ್ದೀರಿ, ಹೇಳಿ ಅಪ್ಪ ನೀವು ಯಾಕೆ ಯಾರಿಗೂ ಹೇಳದೆ ಹೋದಿರಿ?
ನಿಮ್ಮ ಒಳ್ಳೆತನಕ್ಕೆ ಆ ದೇವರಿಗೂ ನೀವು ಅವನ ಬಳಿ ಅಷ್ಟು ಬೇಗ ಬರಬೇಕೆಂದು ಆಸೆಯಾಗಿಯೇ ಕರೆಸಿಕೊಂಡನೇ?
ಯಾವಾಗಲೂ ಬುದ್ದಿವಾದ ಹೇಳುವಾಗ ನೀವು ಹೇಳ್ತಾ ಇದ್ರಿ “ಮುಂದೆ ನೀವು ದುಡಿದು ನನ್ನನ್ನ ನೋಡಿಕೊಳ್ಳೋದು ಬೇಡ, ನಿಮ್ಮ ಜೀವನವನ್ನು ಸರಿಯಾಗಿ ಇರುವಂತೆ ಬದುಕಲು ಕಲಿಯಿರಿ ” ಅಂತ, ಕೊನೆಗೂ ನಮ್ಮ ದುಡಿಮೆಯ ಒಂದು ರೂಪಾಯಿಯನ್ನೂ ನೀವು ತಿನ್ನದೇ, ನಿಮ್ಮ ಋಣವನ್ನು ನಮ್ಮ ಮೇಲೆಯೇ ಹೊರಿಸಿ ಹೋದಿರಿ.
ಹೇಳಿ ಅಪ್ಪಾ! ನೀವೇಕೆ ಹೀಗೆ ಮಾಡಿದಿರಿ?
ನಿಮ್ಮ ಒಳ್ಳೆತನ, ನಿಮ್ಮ ನಯವಾದ ಮಾತು, ನೀವು ಕಲಿಸಿದ ಅಜ್ಜ ಮಾವರ ಮೇಲಿನ ಭಯ, ಅಕ್ಕ ತಂಗಿಯರ ಮಮತೆ, ಅಮ್ಮ, ಅತ್ತೆಯರ ಮೇಲಿನ ಪ್ರೀತಿ, ಅಜ್ಜ ಅಜ್ಜಿಯರ ಕಾಳಜಿ, ಎಲ್ಲಕ್ಕಿಂತ ಹೆಚ್ಚಾಗಿ ನೀವು ಕಲಿಸಿಕೊಟ್ಟ ಸಂಸ್ಕಾರ ನಮ್ಮ ಜೀವನವನ್ನು ಎತ್ತರಕ್ಕೆ ಕೊಂಡೋಯುತ್ತಿದೆ.
ಇದನ್ನು ನೋಡಲು ನೀವಿಂದು ನಮ್ಮ ಜೊತೆಗಿಲ್ಲ, ಈಗ ಒಂದು ಮಗುವಿನ ತಂದೆಯಾಗಿರುವ ನನಗೆ ಆಗ ನಿಮಗಿದ್ದ ಜವಾಬ್ದಾರಿಯ ಅರಿವಾಗುತ್ತಿದೆ. ನಿಜವಾಗಿಯೂ ನೀವು ಗ್ರೇಟ್, ಒಬ್ಬ ಒಳ್ಳೆಯ ತಂದೆಯಾಗಿ ನೀವು ನಿಮ್ಮ ಕರ್ತವ್ಯವನ್ನು ಪರಿಪೂರ್ಣವಾಗಿಯೇ ನಿಭಾಯಿಸಿದ್ದೀರಿ.
ಎಲ್ಲರೂ ಅಪ್ಪಂದಿರರ ದಿನದ ಬಗ್ಗೆ ಹೇಳಿಕೊಳ್ಳುವಾಗ ನನಗೂ ನಿಮ್ಮ ಬಗ್ಗೆ ಹೇಳಿಕೊಳ್ಳಬೇಕೇನಿಸಿತು.
ರಿಯಲಿ ಮಿಸ್ ಯು ಅಪ್ಪಾ!
ಹರೀಶ್ ಕಾಂಚನ್,
ಉಪನ್ಯಾಸಕರು, ಕುಂದಾಪುರ