ಕಣ್ಣೀರು ಚೆಲ್ಲಬೇಡ
ಮೊಳಕೆಯೊಂದು ನಾಳೆಯಿಂದ ನಿನ್ನ
ಕಣ್ಣೀರನ್ನೇ ಬಯಸೀತು
ಕಣ್ಣೀರು ಚೆಲ್ಲಬೇಡ
ಅದನ್ನೇ ಹೀರಿದ ನೆಲ ದಿನ ಕಳೆದಂತೆ
ಬಂಜರು ಭೂಮಿಯಾದೀತು
ಸಾಧ್ಯವಾದರೆ ನೀನೊಮ್ಮೆ ನಕ್ಕುಬಿಡು
ದ್ವೇಷದ ಬೀಜ ಬಿತ್ತಿದವರೆಲ್ಲ ಒಳಗೊಳಗೇ
ಕುದ್ದು ಬೆಂದು ಹೋಗಲಿ
ಇಲ್ಲವಾದರೆ ಅಂತೆಯೇ ಸುಮ್ಮನಿದ್ದುಬಿಡು
ನಿನ್ನ ಕೆಣಕಿದವರಿಗೆಲ್ಲ ನೀನೊಂದು ಬಂಡೆಯೆಂದು
ಗೊತ್ತಾಗಿ ಸುಮ್ಮನಾಗಿಹೋಗಲಿ
ಶಸ್ತ್ರ ಹೋರಾಟ ಗೊತ್ತಿರಲೇ ಬೇಕಾಗಿಲ್ಲ ಗೆಲ್ಲಲು
ಸುಮ್ಮನೆ ಬಂದೂಕನ್ನೆತ್ತಿಕೋ, ಗುರಿಯಿಡು
ಕುದುರೆಯ ಮೇಲೆ ಬೆರಳಿರಲಿ
ಎದುರಿನವನು ಖಡ್ಗ ಕೆಳಗಿಡಬಹುದು ಅಥವಾ
ಬಿಳಿ ಪತಾಕೆ ಹಾರಿಸಿಯಾನು
ಸುಮ್ಮನೆ ಬಂದೂಕಿನ ಕುದುರೆಯನ್ನೆಳೆದು ಬಿಡು
ನಳಿಕೆಯಿಂದ ಕೆಂಗುಲಾಬಿಯೇ ಚಿಮ್ಮಲಿ
ಸೋತರೂ ಜಯ ನಿನ್ನದಾಗಬಹುದು
ಬಾನಿಂದ ಹನಿಯೊಂದು ಚೆಲ್ಲಬಹುದು
ಮೊಳಕೆ ಚಿಗುರಲೂ ಬಹುದು
ಕಿಗ್ಗಾಲು ಜಿ. ಹರೀಶ್