ನಮ್ಮನೆ ಬೆಕ್ಕು
ಲಾಂಗೂಲವನ್ನು ಲಂಬ ಕೋನದಲ್ಲಿ ಮೇಲಕ್ಕೆತ್ತಿ
ಮೀಸೆಗಳನ್ನು ನೆಟ್ಟಗೆ ಮಾಡಿಕೊಂಡು
ಸರಳ ರೇಖೆಯಲ್ಲೇ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು
ನಡೆದು ಬರುವಾಗ ವಿಶ್ವ ಸುಂದರಿಯರನ್ನು
ನೆನಪಿಸುತ್ತದೆ ನಮ್ಮನೆಯ ಬೆಕ್ಕು !
ಬಿಳಿಯ ಬಣ್ಣ ಮೈತುಂಬ ರೋಮ
ರೋಮ್ ನಿಂದ ಬಂದದ್ದೇ? ನೀವೇನಾದರೂ
ಕೇಳಿದರೆ ರೂಮ್ ಬಿಟ್ಟು ಹೊರಹೋಗದ್ದು
ಅಲ್ಲಿಂದ ಬರುವುದು ಹೇಗೆ?
ಅದೇನು ಭಕ್ತಿ ? ಅದೇನು ನಿಯತ್ತು?
ಬಟ್ಟಲಿಗೆ ಹಾಕಿಟ್ಟ ಹಾಲು ಕುಡಿಯುವಾಗಲೂ
ಕಣ್ಮುಚ್ಚಿ ಪರಶಿವನ ಧ್ಯಾನ
ಕಾಡಿ ಬೇಡಿ ಅರಚಿ ಕಿರುಚಿ
ವ್ಹಿಸ್ಕಸ್ ಮೆದ್ದ ಮೇಲೆ
ಕುಂಭಕರ್ಣನೂ ನಾಚಬೇಕು ಅದರ ನಿದ್ದೆಗೆ
ಮುಟ್ಟಿದೊಡನೆ ಮೈಮರೆತು
ಶೀರ್ಷಾಸನ ಹಾಕಿ ಮೆಲ್ಲಗೆ ಹಾಡಲು ಶುರು
ಮೂಗಿನೆದುರಲ್ಲಿ ಮೂಷಿಕ ಹಾದುಹೋದರೂ
ನಿದ್ದೆಯಲ್ಲೇ ಏನನ್ನೋ ಮಾತನಾಡಿ
ಮಗ್ಗಲು ಬದಲಿಸಿಬಿಡುತ್ತದೆ
ರಾತ್ರಿ ಮಂಚದ ಬಳಿಬಂದಾಗ
ಅಲ್ಲಿ ಮಲಗಿ ಸಂಗೀತ ಸುಧೆ ಹರಿಸುತ್ತದೆ
ಎತ್ತಿ ಕೆಳಕ್ಕೆ ಬಿಟ್ಟರೆ, ಎಷ್ಟೊತ್ತಿಗೆ ಕಂಬಳಿಯೊಳಗೆ
ಬಂದು ಸೇರಿಕೊಂಡಿತೋ ಗೊತ್ತೇ ಆಗುವುದಿಲ್ಲ!
ಕಾಲಿಗೆ ಬಾಲವನ್ನೊರಿಸಿಕೊಂಡು ಒಮ್ಮೊಮ್ಮೆ
ಬಾಯ್ ಅಗಲಿಸಿ ಪುಸ್ಸೆಂದು ನಮಗೇ ಜೋರು ಮಾಡುತ್ತದೆ
ಎಲಾ ಮಾರ್ಜಾಲವೇ ಎಂದು ಜೋರು ಮಾಡಿದರೆ
ಮೆಲ್ಲನೆ ಕಣ್ಣು ಮಿಟುಕಿಸುವ ಬೆಕ್ಕು
ಓಡಾಡಾಕೊಂಡಿರುತ್ತದೆ……
ಮನೆಯೊಳಗೂ….. ಮನದೊಳಗೂ……..
ಕಿಗ್ಗಾಲು ಜಿ. ಹರೀಶ್