ಕುಂದಾಪುರ (ಜು, 01) : ಯೋಗ ಎನ್ನುವುದು ಇಡೀ ವಿಶ್ವಕ್ಕೆ ಭಾರತ ನೀಡಿದ ಅದ್ಭುತವಾದ ಕೊಡುಗೆ. ಅದನ್ನು ನಮ್ಮದೆಂದು ಹೇಳಲು ಹೆಮ್ಮೆ ಪಡಬೇಕು ಮತ್ತು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಹೇಳಿದರು.
ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್, ರೇಂಜರ್ಸ್, ವಾಣಿಜ್ಯ ಮತ್ತು ಕಲಾ ವಿಭಾಗ ಹಾಗು ಐಕ್ಯೂಎಸಿ ಸಹಯೋಗದಲ್ಲಿ ನಡೆದ ಆನ್ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗ ಕೇವಲ ಒಂದು ದಿನದ ಅಬ್ಬರಕ್ಕೆ ಸೀಮಿತವಾಗಬಾರದು. ಅದನ್ನು ಸ್ವಲ್ಪ ಮಟ್ಟಿಗಾದರೂ ಅರ್ಥೈಸಿಕೊಂಡು ಅನುಷ್ಠಾನಕ್ಕೆ ತರುವಲ್ಲಿ ಪ್ರತಿಯೊಬ್ಬರು ಪ್ರಯತ್ನ ಪಟ್ಟಿದ್ದೇ ಆದಲ್ಲಿ ಉತ್ತಮವಾದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೊಂದಲು ಸಾಧ್ಯ ಎಂದು ಅವರು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜನಾಧಿಕಾರಿ ಸಂಧ್ಯಾ ಎಮ್, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಲತಾ ಹೆಗಡೆ, ಯೂತ್ ರೆಡ್ ಕ್ರಾಸ್ ಮುಖ್ಯಸ್ಥೆ ಸುಚಿತ್ರ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೋನಿಶಾ ಸ್ವಾಗತಿಸಿ ಪರಿಚಯಿಸಿದರು. ವಿದ್ಯಾರ್ಥಿನಿ ದೀಪಿಕಾ ವಂದಿಸಿದರು.