ಕನ್ನಡಿಯೊಂದೇ ತೋರಿಸುವುದಂತೆ
ನನ್ನನ್ನು ನಾನಿದ್ದಂತೆ
ಕಾಣಬೇಕಿತ್ತು ನನ್ನೊಳಗಿನ ನನ್ನನ್ನು ನಾನು
ಆಳೆತ್ತರದ ಕನ್ನಡಿಯೆದುರು ನಿಂತೆ
ಏನಾಶ್ಚರ್ಯ !
ಎಡಭಾಗ ಬಲಭಾಗವಾಗಿ
ಬಲಭಾಗ ಎಡಭಾಗವಾಗಿ
ನನ್ನ ವೈರುಧ್ಯಗಳ ದರ್ಶನ
ಕನ್ನಡಿಯೊಳಗಿನ ನನ್ನ ಬಿಂಬದ
ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸಿ ನೋಡಿದೆ
ಕಣ್ಣುಗಳ ಮೂಲಕವೇ ನನ್ನೊಳಗಿಳಿದು ಕೇಳಿದೆ
ಹೌದು, ಯಾರು ನಾನು
ಅಲುಗಾಡಿದ ತುಟಿ ಅತ್ತದ್ದೇ ನಕ್ಕದ್ದೇ ಅರ್ಥವಾಗಲಿಲ್ಲ
ಕಣ್ಣುಗಳಾದರೂ ಹೇಳಿದ್ದೇನು? ಅದೂ ಅರ್ಥವಾಗಲಿಲ್ಲ
ನನ್ನ ಪ್ರತಿಬಿಂಬಕ್ಕೂ ನನ್ನರಿವಾಗದೆ ನಿಟ್ಟುಸಿರು ಬಿಟ್ಟಿರಬೇಕು
ಖಚಿತವಾಯ್ತು. ಇಲ್ಲ..ಕನ್ನಡಿ ತೋರಲಾರದು ಸತ್ಯ
ಅರ್ಥವಾಗಿತ್ತು ನನಗೆ
ಹಾಗೇ ಸುಮ್ಮನೆ ನಡೆದು ಹೋದೆ
ಬಿಡಲಾರದೆ ನನ್ನನ್ನೇ ಹಿಂಬಾಲಿಸುತ್ತಿತ್ತು ನೆರಳು
ಅದನ್ನೇ ಕೇಳಿದೆ ‘ಹೌದು ನಾನು ಯಾರು?’
ತಕ್ಷಣಕ್ಕೆ ಜ್ಞಾನೋದಯ….
ನಾನು ನೆರಳು….ನಾನು ನೆರಳಿನ ನೆರಳು….ಅಷ್ಟೇ!
ಕಿಗ್ಗಾಲು. ಜಿ. ಹರೀಶ್