ಉಡುಪಿ (ಜು, 6) : ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಆಶ್ರಯದಲ್ಲಿ “ನಿರ್ಮಾಣ ಕಾರ್ಯದಲ್ಲಿ ಆಧುನಿಕ ಪ್ರವೃತ್ತಿ” ವಿಷಯದ ಕುರಿತು ಐದು ದಿನಗಳ ಆನ್ಲೈನ್ ತರಬೇತಿ ಕಾರ್ಯಕ್ರಮವನ್ನು ಜೂನ್ 28ರಿಂದ ಜುಲೈ 2ರವರೆಗೆ ಆಯೋಜಿಸಿಲಾಗಿತ್ತು.
ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ಡಾ.ರಾಘವೇಂದ್ರ ಹೊಳ್ಳ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಿವಿಲ್ ಇಂಜಿನಿಯರಿಂಗ್ನಲ್ಲಿ ಕಟ್ಟಡ ನಿರ್ಮಾಣದಲ್ಲಿ ಮಾದರಿ ತಯಾರಿಸುವ ಬಗ್ಗೆ ಮಾಹಿತಿ ನೀಡಿದರು ಮತ್ತು ಕೌಶಲ್ಯವನ್ನು ವೈವಿಧ್ಯಗೊಳಿಸಲು ಪ್ರೇರೆಪಿಸಿದರು. ಪಡುಬಿದ್ರಿ ಸೃಷ್ಟಿ ವೆಂಚರ್ಸ್ ಇದರ ನಿರ್ದೇಶಕ ಮತ್ತು ವಾಸ್ತುಶಿಲ್ಪಿ ಶ್ರೀ ಶಶಿ ಜಿ.ನಾಯಕ್ ಅವರು ಗೋಡೆ ನಿರ್ಮಾಣದಲ್ಲಿ ಬಳಸುವ ಆಧುನಿಕ ತಂತ್ರಜ್ಞಾನದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಸಮಯದ ಉಳಿತಾಯ, ಆರ್ಥಿಕ ಹಾಗೂ ಪರಿಸರದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ ಎಂದು ಸವಿವರವಾಗಿ ತಿಳಿಸಿಕೊಟ್ಟರು.
ಎನ್ ಐ ಟಿ ಕೆ ಸುರತ್ಕಲ್ ನ ಅಸೋಸಿಯೇಟ್ ಪ್ರೋಫೆಸರ್ ಡಾ ಬಿ. ಬಿ ದಾಸ್ ಮಾತನಾಡಿ ಸಂಶೋಧನಾ ಕ್ಷೇತ್ರದ ಪ್ರಗತಿಯ ಬಗ್ಗೆ, ನ್ಯಾನೊಸಿಲಿಕಾದ ಜಲಸಂಚಯನ ಮತ್ತು ಮೈಕ್ರೋಸ್ಟ್ರಕ್ಚರ್, ಗುಣಲಕ್ಷಣಗಳ ಬಗ್ಗೆ ತಿಳಿಸಿದರು. ಕಟ್ಟಡ ನಿರ್ಮಾಣ ಮತ್ತು ಕೆಡವುವ ಸಮಯದಲ್ಲಿನ ವಸ್ತುಗಳ ಮರುಬಳಕೆಯ ಬಗ್ಗೆ ಸುರತ್ಕಲ್ನ ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ರಾಜೇಂದ್ರ ಕಲಬಾವಿ, ವಿವರಿಸಿದರು. ಸಮೃದ್ಧಿ ಅಸೋಸಿಯೇಟ್ಸ್ ಮಂಗಳೂರಿನ ಸಹ – ಪಾಲುದಾರರಾದ ಶ್ರೀ ವಿವೇಕ್ ಮಯ್ಯ ಇವರು ಇಟ್ಟಿಗೆ ಸೇರ್ಪಡೆ ತಂತ್ರಜ್ಞಾನದಿಂದ ಕಡಿಮೆ ವೆಚ್ಚದ ಮನೆ ನಿರ್ಮಾಣದ ಬಗ್ಗೆ ತಿಳಿಸಿದರು.
100ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ಸಂಶೋಧಕರು ಈ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಸಂದೀಪ್ .ಜೆ. ನಾಯಕ್ ಉಪಸ್ಥಿತರಿದ್ದರು. ಶ್ರೀ ವಿಘ್ನೇಶ್ ಶೆಣೈ, ಶ್ರೀ ಸೂರಜ್ ಕಾರ್ಯಕ್ರಮವನ್ನು ಸಂಯೋಜಿಸಿದರು.