ಗಾಳದ ತುದಿಗೆ
ಎರೆಹುಳವನ್ನು ಸಿಕ್ಕಿಸಿ
ಇನ್ನೊಂದು ತುದಿಗೆ ಉದ್ದ ಹಗ್ಗವನ್ನು ಕಟ್ಟಿ
ಹೊಳೆಗೆಸೆದು, ಹರಿವ ತಂಪಾದ ನೀರಲ್ಲಿ
ಕಾಲಿಳಿಸಿ ಕುಳಿತಿದ್ದೇನೆ
ಯಾವುದೋ ಹೆಸರಿನ ಮೀನೊಂದು
ಎರೆಹುಳಕ್ಕೆ ಬಲಿಯಾದ ತಕ್ಷಣ
ಮೇಲಕ್ಕೆಳೆದುಕೊಳ್ಳಬೇಕು
ಆದರೇನು?
ನನ್ನ ಪಾದಗಳಿಗೆ ಕಚಗುಳಿ ಇಟ್ಟು
ನೀರಿನಾಳಕ್ಕೆ ಜಾರಿಬಿಡುವ ಮೀನು
ಗಾಳದ ಹತ್ತಿರವೂ ಸುಳಿಯುತ್ತಿಲ್ಲ
ಆ ಕ್ಷಣಕ್ಕೆ ಒಂದು ಆಲೋಚನೆ!
ಮೇಲಿನವನೂ ಇಳಿಬಿಟ್ಟರಬಹುದಲ್ಲ
ನನಗೂ ಯಾವುದಾದರೊಂದು ಗಾಳವನ್ನು
ಒಂದಲ್ಲದಿದ್ದರೆ ಹತ್ತಾರು ಗಾಳಗಳನ್ನು
ಇಲ್ಲವಾದರೆ ಬಲೆಯನ್ನೇ ಬೀಸಿರಬಹುದಲ್ಲವೇ?
ಮೂರ್ಖ ಸಿಕ್ಕಿಹಾಕಿಕೊಳ್ಳಲಿಯೆಂದು?
ಬಹುಶಃ ನದಿಯೂ ಬಲೆ ಇರಬಹುದು
ಪುಟ್ಟ ಮೀನೊಂದು ಪಾಶವಿರಬಹುದು
ಮೀನಿನ ಬದಲು ಮೊಸಳೆಯೇ ಬರಬಹುದು
ಹಣೆಯ ಮೇಲೆ ಬೆವರಿನ ಹನಿಗಳು
ಪಕ್ಕನೆ ಗಾಳವನ್ನು ಮೇಲೆಳೆದು ಕೊಂಡೆ
ಗಾಳದ ತುದಿಯಲ್ಲಿ…..
ಎರೆಹುಳವೂ ಇಲ್ಲ…..ಮೀನೂ ಇಲ್ಲ……
ಕಿಗ್ಗಾಲು ಜಿ. ಹರೀಶ್