ಕೋಟೇಶ್ವರ (ಜು,13) : ಕರೋನಾ ಮೊದಲ ಅಲೆಯ ದಿನಗಳಿಂದ ಇಲ್ಲಿಯವರೆಗೂ ಮತ್ತು ಕರೋನಾ ನಿರ್ನಾಮವಾಗುವವರೆಗೂ ಮುಂದಿನ ಸರತಿಯಲ್ಲಿ ನಿಂತು ಕರೋನಾ ವಿರುದ್ದ ಹೋರಾಡುವುದರ ಜೊತೆಗೆ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ನಿಸ್ವಾರ್ಥವಾಗಿ ಸೇವೆಗೈಯುತ್ತಿರುವ ಆಶಾ ಕಾರ್ಯಕರ್ತರ ಸೇವೆಗೆ ಈ ಸಮಾಜದ ಋಣ ಸಾಗರದಷ್ಟಿದೆ. ಆ ದಿಸೆಯಲ್ಲಿ ಸಾಸಿವೆಯಷ್ಟಾದರು ಋಣ ತೀರಿಸುವ ಶಕ್ತಿ ಭಗವಂತ ನಮ್ಮ ಬಳಗಕ್ಕೆ ನೀಡಿದ್ದಾನೆ ಎಂಬ ಆಶಯದೊಂದಿಗೆ ಜುಲೈ 13 ರಂದು ಕೋಟೇಶ್ವರ ಸಮೀಪದ ಅಂಕದಕಟ್ಟೆಯಲ್ಲಿ ಸಹೃದಯಿ ದಾನಿಗಳ ಸಹಕಾರದೊಂದಿಗೆ, ಸಹಾಯಹಸ್ತ ಅಂಕದಕಟ್ಟೆ ಹಾಗೂ ಕಟ್ಟೆ ಫ್ರೆಂಡ್ಸ್ ಅಂಕದಕಟ್ಟೆ ಸಹಯೋಗದಲ್ಲಿ ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 12 ಜನ ಆಶಾ ಕಾರ್ಯಕರ್ತೆಯರಿಗೆ ತಲಾ ಎರಡು ಸಾವಿರ ರೂಪಾಯಿ ಗೌರವ ಧನ ಹಾಗೂ ಕೊಡೆ ವಿತರಿಸುವ ಮೂಲಕ ಅವರ ಸೇವೆಯನ್ನು ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಮುಖರು ಹಾಗೂ ಬಿಜೆಪಿ ಕುಂದಾಪುರ ಮಂಡಲ ಅಧ್ಯಕ್ಷರಾದ ಶಂಕರ ಅಂಕದಕಟ್ಟೆ, ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ, ಉಪಾಧ್ಯಕ್ಷೆ ರಾಗಿಣಿ ದೇವಾಡಿಗ, ಪಂಚಾಯತ್ ಸದಸ್ಯರಾದ ಲೋಕೇಶ್ ಅಂಕದಕಟ್ಟೆ, ಮಹಿಳಾ ಸ್ವಸಹಾಯ ಸಂಘ ಕೋಟೇಶ್ವರ ಒಕ್ಕೂಟದ ಉಪಾಧ್ಯಕ್ಷೆ ಜಯಲಕ್ಷ್ಮೀ ಗಾಣಿಗ, ಸ್ಥಳೀಯ ಪ್ರಮುಖರಾದ ಲಲಿತ ದೇವಾಡಿಗ ಹಾಗೂ ಸಹಾಯ ಹಸ್ತ ಮತ್ತು ಕಟ್ಟೆ ಫ್ರೆಂಡ್ಸ್ ಅಂಕದಕಟ್ಟೆಯ ಸದಸ್ಯರು ಉಪಸ್ಥಿತರಿದ್ದರು. ಒರೆಲಿಯನ್ ಡಿ’ಮೆಲ್ಲೋ ರವರು ಕಾರ್ಯಕ್ರಮಕ್ಕೆ ಸ್ಥಳಾವಕಾಶ ನೀಡಿದರು.ಅಭಿಷೇಕ ಅಂಕದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.