ಮಹಾನಗರದ ಬೀದಿಗಳಲ್ಲಿ ನಡೆಯುತ್ತಿದ್ದಾನೆ
ಬಟ್ಟೆಯಂಗಡಿಯ ಮುಂದೆ ಬೊಂಬೆಗಳ ಮೈತುಂಬ
ವಿಧವಿಧವಾದ ಬಟ್ಟೆಗಳು
ಹೋಟೆಲಿನೆದುರಲ್ಲಿ ಬಗೆಬಗೆಯ ತಿಂಡಿಯ ಚಿತ್ರಗಳು
ಇಂದ್ರನ ರಥವನ್ನೂ ಮೀರಿಸುವ ಹೊಸಬಗೆಯ ಕಾರುಗಳು
ಹೊಸ ಫ್ಯಾಷನ್ನಿನ ಹರಿದ ಜೀನ್ಸ್ ತೊಟ್ಟ ಯುವಪಡೆ
ಮಾಲುಗಳ ಮುಂದೆ ಬೆಳಗುವ ಬಣ್ಣಬಣ್ಣದ ಲೈಟುಗಳೆದುರು
ಚಂದ್ರನ ಬೆಳದಿಂಗಳು ಯಾವ ಲೆಕ್ಕ?
ನಟನ ಅರವತ್ತಡಿ ಎತ್ತರದ ಕಟೌಟಿನ ಮುಂದೆ ಅವನು ಕುಬ್ಜ
ಮಾಲ್ ನೆದುರಿನ ಸುಸಜ್ಜಿತ ಬಸ್ ಸ್ಟಾಪ್ ನಲ್ಲಿ…
ನಗರ ಸಾರಿಗೆ ಬಸ್ ಗಾಗಿ ಕಾದು
ಹೆಚ್ಚೂ ಕಡಿಮೆ ಕೊಳಗೇರಿಯಂತಿರುವ ಪ್ರದೇಶದ
ತಗಡಿನ ಮಾಡಿನ ಶೆಡ್ ಸೇರುತ್ತಾನೆ
ತೇಪೆ ಹಚ್ಚಿದ ಜೀನ್ಸ್ ಬಿಚ್ಚಿ ಪೆಟ್ಟಿಗೆಯಲ್ಲಿಟ್ಟು
ಲುಂಗಿಯನ್ನುಟ್ಟು, ಮೊಂಬತ್ತಿಯನ್ನು ಹಚ್ಚಿ
ಒಂದು “ಕ್ವಾಟ್ರಿ”ನ ಜೊತೆಗೆ
ಬೆಳಿಗ್ಗೆಯೇ ಬೆಯಿಸಿದ್ದ ಅನ್ನವನ್ನುಂಡು
ಚಾಪೆ ಹಾಸಿ ಮಲಗಿ
ಮೊಂಬತ್ತಿಯನ್ನು ಆರಿಸಿಬಿಡುತ್ತಾನೆ.
ಮಹಾನಗರವೇ ನಿದ್ರೆಗೆ ಜಾರುತ್ತದೆ.
ಕಿಗ್ಗಾಲು ಜಿ.ಹರೀಶ್