ಮಂಗಳೂರು (ಜು,13) : ಕೋವಿಡ್ ಕಾರಣದಿಂದಾಗಿ ಬಾಕಿ ಉಳಿದಿರುವ ಮಂಗಳೂರು ವಿ.ವಿ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಥಮ,ತ್ರತೀಯ ಹಾಗೂ ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಮಂಗಳೂರು ವಿಶ್ವವಿದ್ಯಾನಿಯ ಚಿಂತನೆ ನಡೆಸಿದೆ. ಬಾಕಿ ಉಳಿದ ಪರೀಕ್ಷೆಗಳನ್ನು ನಡೆಸುವ ಕುರಿತಾದ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಕಳುಹಿಸಿ ಅನುಮತಿ ಪಡೆಯಲು ವಿ.ವಿ. ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ನಿರ್ಧರಿಸಿದ್ದಾರೆ.
ಬಾಕಿ ಉಳಿದ ಪರೀಕ್ಷೆಗಳನ್ನು ಆದಷ್ಟು ಬೇಗ ನಡೆಸಿ ಮೌಲ್ಯಮಾಪನ ನಡೆಸಲು ಚಿಂತನೆ ನಡೆಸಲಾಗಿದೆ. ಆಗಸ್ಟ್ 10ರೊಳಗೆ ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಪ್ರಕ್ರಿಯೆ ಮುಗಿದ ನಂತರ ಎರಡು, ನಾಲ್ಕು ಹಾಗೂ ಆರನೇ ಸೆಮಿಸ್ಟರ್ನ ಭೌತಿಕ ತರಗತಿಗಳನ್ನು ನಡೆಸಿ ಬಳಿಕ ಸೆಪ್ಟೆಂಬರ್ ವೇಳೆಗೆ ಇದರ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.
ಪರೀಕ್ಷೆ ನಡೆಸುವ ಕುರಿತಾದ ಗೊಂದಲದ ಕುರಿತಾಗಿ ನಿರ್ಧಾರಕೈಗೊಳ್ಳಲು ವಿ.ವಿ .ವ್ಯಾಪ್ತಿಯ ಎಲ್ಲ ಕಾಲೇಜು ಪ್ರಾಂಶುಪಾಲರ ಸಭೆಯನ್ನು ನಡೆಸಲಾ ಗಿದ್ದು, ಪರೀಕ್ಷೆ ನಡೆಸುವ ಬಗ್ಗೆ ಹೆಚ್ಚಿನವರು ಒಲವು ತೋರಿದ್ದಾರೆ. ಶೇ. 70 ರಷ್ಟು ಪರೀಕ್ಷೆ ಈಗಾಗಲೇ ಮುಗಿದಿದ್ದು, ಶೇ. 30ರಷ್ಟು ಮಾತ್ರ ಬಾಕಿ ಉಳಿದಿವೆ ಎಂದು ಮಂಗಳೂರು ವಿ.ವಿ. ಪರೀಕ್ಷಾಂಗ ಕುಲಸಚಿವ ಡಾ| ಪಿ.ಎಲ್. ಧರ್ಮ ತಿಳಿಸಿದ್ದಾರೆ.