ಹೆಮ್ಮಾಡಿ (ಜು, 31) : ಆಧುನಿಕತೆಯ ಒತ್ತಡದ ಬದುಕಿನಿಂದಾಗಿ ಮನುಷ್ಯನ ಆರೋಗ್ಯದ ಮೇಲೆ ಬಹಳಷ್ಟು ನಕಾರಾತ್ಮಕ ಪ್ರಭಾವಗಳು ಹೆಚ್ಚಾಗುತ್ತಿದ್ದು ಅದರಿಂದ ಹೊರ ಬರಲು ನಾವು ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸಬೇಕು. ಆ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ನಮ್ಮ ಲಯನ್ಸ್ ಸಂಸ್ಥೆ ಇಂದು ಗ್ರಾಮೀಣ ಭಾಗದ ಮಹಿಳೆಯರಿಗೆ ಆರೋಗ್ಯವನ್ನು ಕಾಪಾಡಲು ಕಾರ್ಯಗಾರವನ್ನು ಹಮ್ಮಿಕೊಂಡಿದೆ ಎಂದು ಕುಂದಾಪುರ ಲಯನ್ಸ್ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ನಾಯಕ್ ಕುಂದಾಪುರ ಹೇಳಿದರು.
ಅವರು ಲಯನ್ಸ್ ಕ್ಲಬ್ ಕುಂದಾಪುರ, ಯುವ ಸ್ಪಂದನ ಕೇಂದ್ರ ಉಡುಪಿ, ನಿಮಾನ್ಸ್ ಆಸ್ಪತ್ರೆ ಬೆಂಗಳೂರು, ಆಶಾಕಿರಣ ಸಂಜೀವಿನಿ ಸ್ವಸಹಾಯ ಸಂಘ ಹೆಮ್ಮಾಡಿ ಒಕ್ಕೂಟ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಹರಗೋಡ ಮಹಾ ವಿಷ್ಣು ಯುವಕ ಮಂಡಲ ಇವರ ಸಂಯುಕ್ತ ಆಶ್ರಯದಲ್ಲಿ ಹೆಮ್ಮಾಡಿಯಲ್ಲಿ ನಡೆದ ಜೀವನ ಕೌಶಲ್ಯ ಆರೋಗ್ಯ ತರಬೇತಿಯ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಗಾರದ ಅಧ್ಯಕ್ಷತೆಯನ್ನು ಲಯನ್ ಶ್ರೀ ಚಂದ್ರಶೇಖರ್ ಕಲ್ಪತರು ವಹಿಸಿಕೊಂಡಿದ್ದರು.
ನಮ್ಮಲ್ಲಿರುವ ಅಂತರಾಷ್ಟ್ರೀಯ ಸೇವಾ ಸಂಸ್ಥೆಗಳು ಗ್ರಾಮೀಣ ಪ್ರದೇಶದಲ್ಲಿರುವ ವಿವಿಧ ಸಂಘಟನೆಗಳೊಂದಿಗೆ ಕೈಜೋಡಿಸಿಕೊಂಡು ಪ್ರದೇಶಕ್ಕೆ ಅನುಗುಣವಾಗಿ ಅಗತ್ಯ ಇರುವ ಮಾರ್ಗದರ್ಶನವನ್ನು ನೀಡುತ್ತಿದೆ, ಇದರಿಂದ ಜನರು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ರಾಘವೇಂದ್ರ ಪೂಜಾರಿ, ಲಯನ್ಸ್ ಕುಂದಾಪುರದ ಕೋಶಾಧಿಕಾರಿ ಡಾ| ರವೀಂದ್ರ, ಕಾರ್ಯದರ್ಶಿ ಪ್ರಜ್ಞೇಶ್ ಪ್ರಭು, ಲಯನ್ಸ್ ರಾಜು ಕೋಟ್ಯಾನ್ ,ತರಬೇತಿದಾರ ಶ್ರೀ ಹರೀಶ್ ಕಾಂಚನ್, ಡಾ| ಅಮ್ಮಾಜಿ, ಶಾಲಾ ಮುಖ್ಯೋಪಾಧ್ಯಾಯರಾದ ದಿವಾಕರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಶೋಕ್ ದೇವಾಡಿಗ ಹಾಗೂ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಉಷಾ ಮೊದಲಾದವರು ಉಪಸ್ಥಿತರಿದ್ದರು.
ಶೈಲಜಾರವರು ಪ್ರಾರ್ಥನೆಗೈದರು, ಸಂಘದ ಪದಾಧಿಕಾರಿಯಾದ ಶ್ರೀಮತಿ ಕಮಲ ಸ್ವಾಗತಿಸಿದರು, ಯುವ ಸ್ಪಂದನ ಕೇಂದ್ರದ ನರಸಿಂಹ ಗಾಣಿಗ ಪ್ರಾಸ್ತಾವಿಕ ಮಾತನಾಡಿದರು, ಶ್ರೀಮತಿ ನಾಗರತ್ನ ವಂದಿಸಿದರು, ಶ್ರೀಮತಿ ಶಾಂತಿ ನಿರೂಪಿಸಿದರು.