ಕರೋನಾ ಲಾಕ್ಡೌನಿನ ಕಳೆದೆರಡು ಅವಧಿಯಲ್ಲಿ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು, ಸರಕಾರದ ಪ್ಯಾಕೇಜುಗಳು ಸರಿಯಾಗಿ ಸಿಗದೆ ಬದುಕು ಸಾಗಿಸಿದ ಮೀನುಗಾರರು ಮತ್ತೆ ಕಡಲಿಗೆ ಇಳಿಯಲು ಸಜ್ಜಾಗುತ್ತಿದ್ದಾರೆ.
ಕರೋನಾ ಮೂರನೆ ಅಲೆಯ ಭಯದ ನಡುವೆ ಹೊಟ್ಟೆಪಾಡಿಗಾಗಿ ಅಗಸ್ಟ್ ತಿಂಗಳ ಎರಡನೇ ವಾರದಲ್ಲಿ ಸರ್ಕಾರದ ನಿಯಮದಂತೆ ಮೀನು ಹಿಡಿಯಲು ಹೊರಡುತ್ತಿರುವ ಬಹುತೇಕ ಮೀನುಗಾರರಿಗೆ ಕರೋನಾ ಲಸಿಕೆ ಇನ್ನೂ ಲಭ್ಯವಾಗಿಲ್ಲ. ಕರೋನಾ ಲಸಿಕಾಕರಣ ನಿಧಾನ ಗತಿಯಲ್ಲಿ ಸಾಗುತ್ತಿರುವುದರ ಜೊತೆಗೆ ಸರ್ಕಾರ ಮೀನುಗಾರರನ್ನು ಕರೋನ ಲಸಿಕೆಯ ಆದ್ಯತೆಯ ಪಟ್ಟಿಯಲ್ಲಿ ಇನ್ನೂ ಸೇರಿಸದಿರುವುದು ಕರಾವಳಿ ಮೀನುಗಾರರಲ್ಲಿ ಆತಂಕ ಹೆಚ್ಚಿಸಿದೆ.

ಉಡುಪಿ ಜಿಲ್ಲೆಯ ಮಲ್ಪೆ, ಹಂಗಾರಕಟ್ಟೆ , ಗಂಗೊಳ್ಳಿ, ಮರವಂತೆ, ಕೋಡೇರಿ ಮೀನುಗಾರಿಕಾ ಬಂದರುಗಳಲ್ಲಿ ಮೀನುಗಾರರು ಕಡಲಿಗಿಳಿಯಲು ಇಗಾಗಲೇ ಸಿದ್ಧತೆ ನಡೆಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೀನುಗಾರರಿಗೆ ಕರೋನ ಲಸಿಕೆಯನ್ನು ನೀಡಬೇಕಿದೆ ಹಾಗೂ ಮೀನುಗಾರರನ್ನು ಆದ್ಯತೆ ಪಟ್ಟಿಯಲ್ಲಿ ಸೇರಿಸಬೇಕಾಗಿದೆ.
ಮಲ್ಪೆಯಂತಹ ಬ್ರಹತ್ ಮೀನುಗಾರಿಕಾ ಬಂದರಿನಲ್ಲಿ ನಮ್ಮ ರಾಜ್ಯದ ಬೇರೆಬೇರೆ ಮೂಲೆಗಳಿಂದ ಮೀನುಗಾರರು ಆಗಮಿಸುವುದರ ಜೊತೆಗೆ ಒರಿಸ್ಸಾ, ಪಶ್ಚಿಮ ಬಂಗಾಳ, ಉತ್ತರಪ್ರದೇಶ ಭಾಗಗಳಿಂದ ಮೀನುಗಾರರು ಆಗಮಿಸುತ್ತಾರೆ.
ಇಲ್ಲಿ ಕರೋನಾ ಅತಿವೇಗವಾಗಿ ಹರಡುವ ಸಾಧ್ಯತೆಗಳಿರುತ್ತದೆ. ಪರ್ಶಿನ್ ಬೋಟು, ಮಾಟು ಬಲೆ ದೋಣಿಗಳಲ್ಲಿ 30 ರಿಂದ 35 ಕಾರ್ಮಿಕರ ಒಟ್ಟಿಗೆ ಕೆಲಸ ಮಾಡುತ್ತಾರೆ. ಹೀಗೆ ಟ್ರಾಲ್ ದೋಣಿ, ಆಳ ಸಮುದ್ರ ಮೀನುಗಾರಿಕಾ ಬೋಟುಗಳಲ್ಲಿ ಕೆಲಸ ಮಾಡಲು ಸಹಸ್ರಾರು ಸಂಖ್ಯೆಯಲ್ಲಿ ಕಾರ್ಮಿಕರು ಮಲ್ಪೆಗೆ ಆಗಮಿಸುತ್ತಾರೆ. ಮೀನು ಖರೀದಿಸುವವರು, ಕಾರ್ಮಿಕರು, ಮಹಿಳಾ ಮೀನುಗಾರರು ಸಾವಿರಾರು ಸಂಖ್ಯೆಯಲ್ಲಿ ಮಲ್ಪೆ ಬಂದರಿನಲ್ಲಿ ದಿನನಿತ್ಯ ಮೀನಿನ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ, ಜೊತೆಗೆ ಕರೋನಾ ಹರಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇದನ್ನು ರಾಜ್ಯ ಸರಕಾರ, ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತ ಗಂಭೀರವಾಗಿ ಪರಿಗಣಿಸಬೇಕು. ಮೊದಲೇ ಮತ್ಸ್ಯ ಕ್ಷಾಮದಿಂದ ಕಂಗೆಟ್ಟು ಹಲವು ತಿಂಗಳುಗಳಿಂದ ಮೀನುಗಾರಿಕೆ ನಡೆಸದೆ ಕಷ್ಟದ ಬದುಕನ್ನು ಸಾಗಿಸಿದ ಮೀನುಗಾರರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕದಿರಲಿ.
ಆ ನಿಟ್ಟಿನಲ್ಲಿ ಮೀನುಗಾರರನ್ನು ಕರೋನಾ ಲಸಿಕಾಕರಣದಲ್ಲಿ ಆದ್ಯತೆಯ ಪಟ್ಟಿಯಲ್ಲಿ ಸೇರಿಸಬೇಕೆನ್ನುವ ಕಾಳಜಿ ನಮ್ಮದು...
ಕುಂದವಾಹಿನಿ ಬಳಗ












