ಮಾನವೀಯ ನೆಲೆಯ ಸಮಾಜ ಸೇವೆ ಜಾತಿ ಮತ್ತು ಧರ್ಮಗಳನ್ನು ಮೀರಿದ್ದು. ಒಬ್ಬ ವ್ಯಕ್ತಿ ಸಮಾಜಸೇವೆಯಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಾದರೆ ಆ ವ್ಯಕ್ತಿಯ ಮನಸ್ಸಿನಲ್ಲಿ ಸಮಾಜದ ದುರ್ಬಲ ವರ್ಗದವರ ಸೇವೆಯ ಕುರಿತಾದ ತುಡಿತ ಇರಬೇಕು ಜೊತೆಗೆ ಕಷ್ಟದಲ್ಲಿರುವವರಿಗೆ ಮಿಡಿಯುವ ಹ್ರದಯವನ್ನು ಹೊಂದಿರಬೇಕು. ಹೌದು ಆತ್ಮೀಯರೇ , ನಿಮಗೆ ಇಂದು ನಾವು ಸಮಾಜ ಸೇವೆಯಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿರುವ ಅಶಕ್ತರಿಗೆ ನೆರಳಾಗುತ್ತಿರುವ ಶೈನಾ ಕಲ್ಯಾಣ ಪುರ ರವರನ್ನು ಪರಿಚಯಿಸಲು ಇಚ್ಚಿಸುತ್ತಿದ್ದೇವೆ.
ಒಂದು ಹೆಣ್ಣು ತನ್ನ ವೈಯುಕ್ತಿಕ ಬದುಕಿನೊಂದಿಗೆ ಹೋರಾಡುವುದರ ಜೊತೆಗೆ ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಳ್ಳುವುದು ಸ್ವಲ್ಪ ಕಷ್ಟ. ಅದಕ್ಕೆ ಪೂರ್ಣ ಪ್ರಮಾಣ ಸೇವಾ ಸಂಕಲ್ಪ ಬೇಕು. ಶ್ರೀಮತಿ ಶೈನಾ ರವರು ಮುಖ್ಯವಾಗಿ ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ಜನಸೇವೆ ಮಾಡುವ ಉದ್ದೇಶದಿಂದ “ತವರುಮನೆ” ಎಂಬ ಅರ್ಥಪೂರ್ಣವಾದ ಹೆಸರಿನೊಂದಿಗೆ ಅನಾಥರಿಗೆ ಆಶ್ರಯ ನೀಡುವ “ತವರುಮನೆ” ಸೃಷ್ಟಿ ಮಾಡುವ ಕನಸನ್ನು ಇಟ್ಟುಕೊಂಡು Mother Mary Women Welfare Organisation(R) ಸಂಸ್ಥೆಯ ಜೊತೆ ಜೊತೆಗೆ ಸಮಾಜ ಸೇವೆಯಲ್ಲಿ ನಿರತರಾದವರು.
ವಿಧವೆಯರು, ನಿರ್ಗತಿಕ ಸ್ತ್ರೀಯರು, ವೃದ್ಧೆಯರು ಒಂಟಿ ಮಹಿಳೆಯರು,ವಿಕಲಚೇತನ ಹೆಣ್ಣುಮಕ್ಕಳಿಗೆ ಸಹಾಯ ಮತ್ತು ಆಶ್ರಯ ನೀಡುವ ಉದ್ದೇಶದಿಂದ ತವರುಮನೆಯನ್ನು ಶೈನಾರವರು ಹುಟ್ಟುಹಾಕಿದ್ದಾರೆ.
ಯಾವುದೇ ಧರ್ಮ, ಜಾತಿ ಅಥವಾ ರಾಜಕೀಯ ಮಾಡದೆ ಮಾನವೀಯತೆಯನ್ನು ಮಾತ್ರ ಹಂಚುವ ಮನದಾಸೆ ಇಟ್ಟುಕೊಂಡಿರುವ “ಶೈನಾ”. ಮಾನವತ್ವದ ಶ್ರೇಷ್ಠತೆ, ಸಹಾಯ, ಪ್ರೀತಿ ,ಸೌಹಾರ್ದ ಭ್ರಾತತ್ವ , ಪ್ರಾಮಾಣಿಕತೆ, ನ್ಯಾಯ -ನೀತಿ, ತ್ಯಾಗ ಮತ್ತು ಔದಾರ್ಯದಂತಹ ವಿಶೇಷಗುಣಗಳೇ ಮಾನವನನ್ನು ಸಮಾಜಸೇವೆಗೆ ದೂಡಿ ಬಿಡುತ್ತದೆ ಎಂದು ಹೇಳುತ್ತಾ ತನ್ನನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದರ ಕುರಿತು ಸಂತ್ರಪ್ತಿಯ ಅನುಭವವನ್ನು ಹೇಳಿಕೊಂಡರು.
ಶೈನಾ ಮೂಲತಃ ಬ್ರಹ್ಮಾವರದ ಮಟಪಾಡಿ ಊರಿನವರು. ಓದಿದ್ದು ಬಿ.ಎ, ಬಿ.ಇಡ್. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಪತಿ ರಾಯಲ್ ಮೋನಿಶ್ ಹಾಗೂ ಮಗ ಈಶಾನ್ ರೊಂದಿಗೆ ಸುಖಿ ಸಂಸಾರ. ತವರು ಮನೆಯನ್ನು ಹುಟ್ಟುಹಾಕಿ ಕೇವಲ ಒಂದು ತಿಂಗಳಲ್ಲೇ ಇವರ ಜೋಳಿಗೆಯಲ್ಲಿ ಮೂರು ಕಡೆ ಸಮಾಜಪರ ಕೆಲಸ ಮಾಡಿ ಅನುಭವ ಪಡೆದವರು ಸೈನಾ.
ಮಿಣ್ಕು ಎಂಬ ವೃದ್ಧ ಒಂಟಿ ಮಹಿಳೆಯ ಬದುಕಿನ ಸ್ಥಿತಿಗತಿಯನ್ನು ಸಹ್ರದಯಿ ದಾನಿಗಳ ಗಮನಕ್ಕೆ ತಂದು ಬಡ ವ್ರದ್ದೆಯ ಮನೆಗೆ ರಿಪೇರಿ ಹಾಗೂ ಮನೆಗೆ ಬೇಕಾಗುವ ದಿನನಿತ್ಯದ ಸಾಮಾನುಗನ್ನು ಒದಗಿಸಿ ಕೊಟ್ಟಿರುವುದು,ಹಾಗೂ ಕಲ್ಯಾಣಪುರ ಸಂತೆ ಕಟ್ಟೆಯಲ್ಲಿ ಒಂದು ವಿಕಲಚೇತನ ಹುಡುಗಿಗೆ ದಾನಿಗಳನ್ನು ಹುಡುಕಿ ಅವರಿಂದ ಸಹಾಯ ಹಸ್ತ ಚಾಚಿದ್ದಾರೆ. ಕಲ್ಯಾಣಪುರದ ಮಮತೆಯ ತೊಟ್ಟಿಲು ಆಶ್ರಮದಲ್ಲಿ “ತವರುಮನೆ” ಉದ್ಘಾಟನೆ ಮಾಡಿ ತನ್ನ ಕೈಯಿಂದಲೇ ಆಶ್ರಮಕ್ಕೆ ಧನ ಸಹಾಯ ಮಾಡಿರುತ್ತಾರೆ.
ಪ್ರಶ್ನೆಗಳಿಗೆ ಉತ್ತರಿಸುತ್ತ ಇಲ್ಲಿ ನಾನು ಯಾವುದೇ ಧರ್ಮದ ಪ್ರಚಾರಕಿ ಅಲ್ಲ ,ಮಾನವ ಧರ್ಮದ ಸೇವಕಿ ಎಂದರು. ಇಲ್ಲಿ ನಾನು ಮಾನವೀಯತೆ ಗುಣಧರ್ಮಗಳನ್ನು ಹೊಂದಿರುವಳು ನನಗೆ ಸಮಾನಮನಸ್ಕರ ದಾನಿಗಳ ಸಹಕಾರ ಬೇಕಾಗಿದೆ ಎಂದರು.
ಮಾತು ಮುಂದುವರಿಸುತ್ತಾ ಈಗ ಕರೋನ ದಂತಹ ಮಹಾಮಾರಿ ಹಾಗೂ ಕ್ಯಾನ್ಸರ್ ನಂತಹ ಕಾಯಿಲೆ ಯಾರನ್ನು ಎಲ್ಲಿಯೂ ಬಲಿ ತೆಗೆದುಕೊಳ್ಳಬಹುದು. ಹಾಗಾಗಿ ಹಣ ಮತ್ತು ಶ್ರೀಮಂತಿಕೆ ಯಾವ ಪ್ರಾಯೋಜನಕ್ಕೂ ಬರುವುದಿಲ್ಲ. ಬದುಕಿದ್ದಷ್ಟು ದಿನ ಸಮಾಜ ಸೇವೆ ಮಾಡಿ ಜೀವನ ಕಳೆಯುವ ತುಡಿತವನ್ನು ಹೊಂದಿದ್ದೇನೆ. ನನಗೆ ಎಳೆವೆಯಿಂದಲೇ ಸಮಾಜ ಸೇವೆ ಮಾಡುವ ಉದ್ದೇಶ ಇತ್ತು, ನಂತರ ಸಮಾಜ ಸೇವಕರ ಜೊತೆ ಜೊತೆಗೆ ಹತ್ತಿರದಿಂದ ಅವರ ಸೇವೆಗಳನ್ನು ಗಮನಿಸಿದ ನಾನು ಅವರ ಪ್ರೇರಣೆಗೆ ಒಳಗಾದೆ. ಹಾಗಾಗಿ ನನಗೆ ಸಮಾಜಸೇವೆಯಲ್ಲಿ ಒಲವು ಮೂಡಿಬಂತು ಎಂದು ಹೇಳಿದರು.
ನೊಂದವರು ತುಂಬ ಜನ ಇರುತ್ತಾರೆ ಎಲ್ಲರ ಕಣ್ಣೀರು ನಮ್ಮಿಂದ ಒರೆಸಲು ಕಷ್ಟ ಸಾಧ್ಯ. ನಮ್ಮ ಕೈಯಲ್ಲಾದಷ್ಟು ಅಶಕ್ತರ ಕಣ್ಣೀರನ್ನು ಒರೆಸುವ ಪ್ರಯತ್ನ ಮಾಡೋಣ ಎಂದು ಈ ಸಮಾಜ ಸೇವೆಯ ಹೋರಾಟದ ಹಠವನ್ನು ಮೈಗೂಡಿಸಿಕೊಂಡಿದ್ದೇನೆ ಎಂದು ಸಮಾಜ ಸೇವೆಯ ಕುರಿತಾದ ಮನದ ಇಂಗಿತವನ್ನು ಹಂಚಿಕೊಂಡರು.
ಶೈನಾ ರವರ ಕನಸು ಬಹಳ ದೊಡ್ಡದಿದೆ .ಜೊತೆಗೆ ಒಳ್ಳೆ ಕಲ್ಪನೆಗಳನ್ನು ಬದುಕಿನಲ್ಲಿ ಕಟ್ಟಿಕೊಂಡಿರುವ ಕನಸುಗಾರ್ತಿ .ಬಾಲ್ಯದಿಂದಲೇ ಕಲೆ ,ಸಾಹಿತ್ಯ ಸಂಗೀತ ಮುಂತಾದ ಸಾಂಸ್ಕೃತಿಕ ಅಭಿರುಚಿ ಹಾಗೂ ಗುರಿ ಇಟ್ಟುಕೊಂಡ ಈ ವೀರ ವನಿತೆ ಮೊದಲಿನಿಂದಲೂ ನಾನು ಯಾವ ಕೆಲಸ ಮಾಡಿದರೂ ಅದು ಸೇವಾ ರೂಪದ ಕೆಲಸವಾಗಿರ ಬೇಕೆಂದುಕೊಂಡಿರುವ ಹಠಮಾರಿ ಹುಡುಗಿ .ಜೊತೆಗೆ ತನ್ನ ಮನದಿಚ್ಛೆಯಂತೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಮಾಜಸೇವೆ, ಹೆಣ್ಣು ಕುಲದ ನೋವು ಮತ್ತು ನಲಿವುಗಳಿಗೆ ಸ್ಪಂದಿಸುವ ಮನಮಿಡಿಯುವ ಹುಡುಗಿ ಯಾದ ಶೈನಾ ರವರು ಈ ಸಮಾಜಕ್ಕೆ ತನ್ನಿಂದ ಏನಾದರೂ ಕೊಡುಗೆ ನೀಡಬೇಕೆಂಬ ಸದಾ ಹಂಬಲಿಸುತ್ತಿದ್ದಾರೆ.
ಒಂದು ಕೈಯಲ್ಲಿ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ ಅದರಂತೆ ಸೇವಾ ಮನೋಭಾವನೆ ಹೊಂದಿರುವ ಹಾಗೂ ನನ್ನ ಸೇವಾ ಕನಸುಗಳಿಗೆ ಕೈ ಜೋಡಿಸಲು ಅಶಕ್ತರ ಏಳಿಗೆಗೆ ಮತ್ತು ಬಾಳು ಬೆಳಗಿಸಲು ದಾನಿ ಗಳಲ್ಲಿ ಶೈನಾ ಅವರು ಮನವಿ ಮಾಡಿಕೊಂಡಿದ್ದಾರೆ. ದಾನಿಗಳು ಇವರನ್ನು ನೇರವಾಗಿ ಸಂಪರ್ಕಿಸಬಹುದು ಅಥವಾ ಅವರ ಟ್ರಸ್ಟ್ ಖಾತೆಗೆ ಆರ್ಥಿಕ ಸಹಾಯವನ್ನು ಜಮಾ ಮಾಡಬಹುದು.
ಶೈನಾ ಕಲ್ಯಾಣಪುರ- ಸಂಪರ್ಕ ಸಂಖ್ಯೆ:-9591642788/7204018192.
ಬನ್ನಿ, ಶೈನಾ ರವರ ಸೇವಾ ಸಂಕಲ್ಪಕ್ಕೆ ಕೈ ಜೋಡಿಸೋಣ…
✍️ಈಶ್ವರ್ ಸಿ ನಾವುಂದ, ಚಿಂತಕ ಮತ್ತು ಬರಹಗಾರರು