ಸಹಾಯ ಮತ್ತು ಸಮಾಜ ಸೇವೆಯನ್ನು ಹೀಗೂ ಮಾಡಬಹುದೆಂಬ ಇವರ ವಿಶಿಷ್ಟ ಪರಿಕಲ್ಪನೆಗೆ ಮೊದಲು ನಾವು ಅಭಿನಂದನೆ ಸಲ್ಲಿಸಬೇಕು. ಸಹಾಯವೆಂಬ ಶಬ್ದ ಬಂದಾಗ ಮೊದಲಿಗೆ ನಮಗೆ ಹೊಳೆಯುವುದೇ ಧನಸಹಾಯ. ಯಾರಿಗಾದರೂ ಧನ ಸಹಾಯ ಮಾಡುವುದಾದರೆ ನಮ್ಮಲ್ಲಿ ಹಣವನ್ನು ಕ್ರೋಢಿಕರಿಸಲು ಬೇಕಾದ ಮಾರ್ಗವನ್ನು ಹುಡುಕಬೇಕಾಗುತ್ತದೆ. ನಮ್ಮಲ್ಲಿ ಹಣ ಇಲ್ಲದೆ ಬೇರೆಯವರಿಗೆ ನಾವು ಧನಸಹಾಯ ಮಾಡುವುದಾದರೂ ಹೇಗೆ? ಈ ಪ್ರಶ್ನೆ ಹಲವು ಸಮಾಜ ಸೇವಕರನ್ನು ಕಾಡುತ್ತಿರುತ್ತದೆ. ಜೊತೆಗೆ ಅವರ ಪ್ರಯತ್ನ ನಿರಂತರವಾಗಿರುತ್ತದೆ.
ಆ ನಿಟ್ಟಿನಲ್ಲಿ ಧನಸಹಾಯ ಮಾಡಲು ಹಾಗೂ ಸಹಾಯ ಧನ ಸಂಗ್ರಹಿಸಲು ಹಲವಾರು ಮಾರ್ಗಗಳಿವೆ ಎಂದು ತಿಳಿಸಿದ ಮಹಾನ್ ವ್ಯಕ್ತಿಯೊರ್ವರ ಕುರಿತು ನಿಮಗೆ ತಿಳಿಸಲಿಚ್ಚಿಸುತ್ತೇವೆ. ತನ್ನ ಕುಟುಂಬದ ನಿರ್ವಹಣೆಗಾಗಿ ಗಾರೆ ಕೆಲಸ ಮಾಡಿಕೊಂಡಿದ್ದು, ತನ್ನಿಂದ ಇತರರಿಗೆ ಏನಾದರೂ ಸಹಾಯ ಮಾಡಬೇಕೆಂಬ ಸಂಕಲ್ಪದೊಂದಿಗೆ , ಮಾರಕ ಕಾಯಿಲೆಯಿಂದ ಬಳಲುತ್ತಿರುವ ಕಡುಬಡತನದ ಕುಟುಂಬದ ಮಕ್ಕಳಿಗೆ 72 ಲಕ್ಷ ರೂ ಕ್ಕೂ ಮಿಕ್ಕಿ ಧನಸಹಾಯ ಮಾಡಿದವರು ರವಿ ಜಿ. ಕಟಪಾಡಿ.
ಅ ಹಿನ್ನೆಲೆಯಲ್ಲಿ ರವಿ ಜಿ. ಕಟಪಾಡಿಯವರ ಸೇವಾಕಾರ್ಯವನ್ನು ಗೌರವಪೂರ್ವಕವಾಗಿ ಕುಂದ ವಾಹಿನಿಯಲ್ಲಿ ಪರಿಚಯಿಸಲು ಸಂತಸ ಪಡುತ್ತಿದ್ದೇವೆ. ಉಡುಪಿ ಜಿಲ್ಲೆಯ ಕಟಪಾಡಿಯವರಾದ ರವಿಯವರು ಬಿ.ಗೋವಿಂದ ಮತ್ತು ದೇಯಿ ದಂಪತಿಯ 5ನೇ ಮಗ. ಶ್ರೀಯುತರು ಇಬ್ಬರು ಅಣ್ಣಂದಿರು ಹಾಗೂ ಇಬ್ಬರ ಅಕ್ಕಂದಿರ ಮುದ್ದಿನ ಸಹೋದರ.
ನಿಮ್ಮ ವಿಶಿಷ್ಟ ಪರಿಕಲ್ಪನೆಯ ಸಹಾಯ ಮತ್ತು ಸಮಾಜ ಸೇವೆಗೆ ಪ್ರೇರಣೆಯಾದ ಅಂಶಗಳು ಯಾವುದೆಂದು ಕೇಳಿದಾಗ ಉತ್ತರಿಸುತ್ತಾ ಅವರು ಹೇಳಿದ ಮಾತಿದು. ನಾನು ಹತ್ತು ವರ್ಷದಿಂದ ಈ ಸಾಮಾಜಿಕ ಸೇವೆಯ ಸಂತ್ರಪ್ತಿಯ ಕಾಯಕವನ್ನು ಮೈಗೂಡಿಸಿಕೊಂಡಿದ್ದೇನೆ. ಆದರೆ ಏಳು ವರ್ಷದ ಹಿಂದೆ ಒಂದು ಕಡು ಬಡತನದಲ್ಲಿರುವ ಮೂರು ತಿಂಗಳ ಮಗು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ನನಗೆ ಇವರಿಗೆ ಧನಸಹಾಯ ಮಾಡಬೇಕೆನ್ನುವ ಮನ ಮಿಡಿಯಿತು. ಆದರೆ ನನ್ನಲ್ಲಿ ಆ ಸಮಯದಲ್ಲಿ ನಯಾ ಪೈಸೆಯೂ ಇರಲಿಲ್ಲ. ಆದರೆ ಹೇಗಾದರೂ ಮಾಡಿ ಈ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಚಡಪಡಿಸುವ ನೊಂದ ಮನಸ್ಸುಗಳಿಗೆ ಸಹಾಯ ಮಾಡಬೇಕೆನ್ನುವ ತುಡಿತ ನನ್ನಲ್ಲಿತ್ತು.
ಇದೇ ಯೋಚನೆಯಲ್ಲಿದ್ದಾಗ ಈ ವಿಭಿನ್ನ ವೇಷ ಹಾಕುವ ಪರಿಕಲ್ಪನೆ ನನ್ನ ಮಸ್ತಕ ದೊಳಗೆ ಬಂದುಬಿಡುತ್ತದೆ. ಅಂದಿನಿಂದ ಕಾರ್ಯಪ್ರವೃತ್ತರಾಗಿ ಇಂದಿನ ತನಕ ಸತತ ಏಳು ವರ್ಷ ವಿಭಿನ್ನ ವೇಷಧರಿಸಿಕೊಂಡು ನೊಂದವರ ಕಣ್ಣೋರೆಸುವ ಪ್ರಯತ್ನ ಮಾಡಿದ್ದಾರೆ. ಪ್ರತಿ ವರ್ಷ ಕ್ರಷ್ಣಾಷ್ಟಮಿಯ ದಿನ ಉಡುಪಿಯ ಕೃಷ್ಣಮಠದಲ್ಲಿ ವಿಶಿಷ್ಟವಾದ ವೇಷ ಹಾಕಿ ಸಹಾಯ ನಿಧಿ ಸಂಗ್ರಹಿಸಿ ಕಡುಬಡವರಿಗೆ ದಾನ ಮಾಡುವ ಕಾರ್ಯನ್ನು ರವಿ ಜಿ. ಕಟಪಾಡಿಯವರು ವಿಭಿನ್ನ ಮತ್ತು ವೈಶಿಷ್ಟ್ಯಪೂರ್ಣವಾಗಿ ಮಾಡುತ್ತಾ ಬಂದಿದ್ದಾರೆ.
ಇವರ ಸಮಾಜ ಸೇವೆಯನ್ನು ಗುರುತಿಸಿ ಸೋನಿ ಚಾನೆಲ್ “ಕೌನ್ ಬನೇಗಾ ಕರೊಡ್ ಪತಿ” ಹಿಂದಿ ಕಾರ್ಯಕ್ರಮದಲ್ಲಿ ಕರ್ಮವೀರ ವಿಭಾಗದಲ್ಲಿ ಆಯ್ಕೆಮಾಡಿದೆ. ಅಲ್ಲಿ ಗೆದ್ದಿರುವ ಅಷ್ಟೂ ಮೊತ್ತವನ್ನು ಕಡು ಬಡವರ ಮಕ್ಕಳ ಚಿಕಿತ್ಸೆಗಾಗಿ ಸಹಾಯ ಮಾಡಿದ ಮಹಾದಾನಿ ಇವರು ಅನ್ನುವುದನ್ನು ಇಲ್ಲಿ ಎಲ್ಲರೂ ಗಮನಿಸಬೇಕು. ಪ್ರತಿವರ್ಷದಂತೆ ಈ ವರ್ಷವೂ ಹಾಲಿವುಡ್ ಸಿನಿಮಾದ ಫ್ಯಾಂಟಸಿ ವೇಷ ಡಾರ್ಕ್ ಅಲೈಟ್ ವೇಷಧಾರಣೆಯ ಮೂಲಕ ಸಹಾಯ ನಿಧಿ ಸಂಗ್ರಹಿಸಿ ಕಡುಬಡವರ ಅನಾರೋಗ್ಯ ಪೀಡಿತ ಮಕ್ಕಳಿಗೆ ಸಹಾಯ ಮಾಡಿರುವುದು ರವಿ ಜಿ. ಕಟಪಾಡಿಯವರ ಸೇವಾ ಕಾಳಜಿಯನ್ನು ಬಿಂಬಿಸುತ್ತದೆ.
ತನ್ನ ಜೀವನೋಪಾಯಕ್ಕಾಗಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು, ಇಲ್ಲಿಯ ತನಕ 33 ಮಕ್ಕಳಿಗೆ ಸಹಾಯ ಹಸ್ತ ಚಾಚಿರುವುದು ಉಲ್ಲೇಖನೀಯ. ಅಂತರಾಷ್ಟ್ರೀಯ ಮಟ್ಟದ ವೆಬ್ ಸೈಟ್ ಲ್ಲಿ ಬಂದ ಹಣವನ್ನು ನಯಾಪೈಸೆಯೂ ಇವರು ಸ್ವಂತಕ್ಕೆ ಉಪಯೋಗಿಸಿದವರಲ್ಲ. ನಿಸ್ವಾರ್ಥ ಸೇವೆ ಪದಕ್ಕೆ ಅನ್ವರ್ಥವಾಗಿ ನಡೆದುಕೊಂಡವರು ಶ್ರೀ ರವಿ ಕಟಪಾಡಿ. ಈ ವರ್ಷ ಸಂಗ್ರಹಿಸಿದ ಪೂರ್ಣ ಹಣವನ್ನು 4 ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡಬೇಕೆಂದು ನಿರ್ಧಾರ ಮಾಡಿದ್ದನ್ನು ಹೇಳಿಕೊಂಡರು.
ಬಡಮಕ್ಕಳ ಆಶಾಕಿರಣವಾದ ರವಿ ಕಟಪಾಡಿ ಯವರ ಸೇವಾಕಾರ್ಯವನ್ನು ಮೆಚ್ಚಲೇಬೇಕು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವ ವ್ಯಕ್ತಿಗೆ ಯಾವುದೇ ನಿರ್ದಿಷ್ಟವಾದ ಜ್ಞಾನ ಕೌಶಲ್ಯ, ಶಿಕ್ಷಣ ಮುಖ್ಯವಲ್ಲ ಎಂದು ರವಿ ಕಟಪಾಡಿಯವರು ಸಾಬೀತುಪಡಿಸಿದ್ದಾರೆ.ಆದರೆ ಸೇವಾಮನೋಭಾವ, ನಿಸ್ವಾರ್ಥ, ಕರುಣೆ ಇರುವ ಯಾರಾದರೂ ಜನರಿಗೋಸ್ಕರ ಮಾನವೀಯತೆಯ ಸೇವೆ ಸಹಾಯ ಮಾಡುವ ಮನಸ್ಸಿದ್ದರೆ ಸಾಕು ಎಂದು ತೋರಿಸಿಕೊಟ್ಟವರು ರವಿ ಕಟಪಾಡಿ.
ಇವರ ವೇಷ ಹಾಕಿ ಬಡಮಕ್ಕಳ ಚಿಕಿತ್ಸೆಗೆ ಧನ ಸಹಾಯ ಮಾಡುವ ಈ ವಿಶಿಷ್ಟ ಪರಿಕಲ್ಪನೆ ಸಾಮಾಜಿಕ ಕಾರ್ಯಕ್ಕೆ ಕೈ ಮುಗಿಯಲೇ ಬೇಕು. ಈ ಸೇವಾ ಮನೋಭಾವನೆಯಿಂದಲೇ ಜನರು ಇವರನ್ನು ಪ್ರೀತಿಯಿಂದ ನಿಸ್ವಾರ್ಥ ಸೇವಕ ಎಂದು ಒಪ್ಪಿಕೊಂಡಿರುವುದು. ಮಾನವೀಯತೆಗೆ ಮತ್ತೊಂದು ಹೆಸರು ರವಿ ಕಟಪಾಡಿ ಎಂದರೆ ಅದು ಅತಿಶಯೋಕ್ತಿಯಲ್ಲ.
ಆವಿವಾಹಿತರಾಗಿರುವ ಇವರಿಗೆ ಮುಂದಿನ ದಿನದಲ್ಲಿ ಕಂಕಣ ಭಾಗ್ಯ ಒಲಿದು, ಇವರ ಸೇವೆ ಕಾರ್ಯಕ್ಕೆ ಇನ್ನೂ ಬಲ ಸಿಗಲಿ ಎಂದು ಆಶಿಸುತ್ತಾ,ಮುಂದಿನ ಅವರ ಕನಸು ನನಸಾಗಲಿ ಎಂಬ ಹಾರೈಕೆ ನಮ್ಮದು.
ಈಶ್ವರ್ ಸಿ ನಾವುಂದ, ಚಿಂತಕ ಹಾಗೂ ಬರಹಗಾರರು