ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಬಹಳ ಇತಿಹಾಸವಿದೆ. ಆ ಎಲ್ಲಾ ಇತಿಹಾಸಕ್ಕೆ ಮುಕುಟಪ್ರಯವಾಗಿರುವ ಸ್ಥಳವೇ ಕುಂದಾಪುರ.ಭಾರತಕ್ಕೆ ಹೇಗೆ ಹಿಮಾಲಯವೋ ಅದೇ ರೀತಿಯಲ್ಲಿ ಕುಂದಾಪುರಕ್ಕೆ ನದಿಗಳು. ಮೂಡಣದಲ್ಲಿ ಉಗಮವಾಗುವ ಚಕ್ರ, ಸೌಪರ್ಣಿಕ, ವಾರಾಹಿ, ಕೇದಕ ಹಾಗೂ ಕುಬ್ಜ ಎಂಬ ಈ ಐದು ನದಿಗಳು ಗಂಗೊಳ್ಳಿಯಲ್ಲಿ ಒಂದಾಗಿ ಅರಬ್ಬಿ ಸಮುದ್ರವನ್ನು ಸೇರುತ್ತದೆ. ಆ ಸ್ಥಳವೇ ಪಂಚಗಂಗಾವಳಿ.
ನದಿಗಳು ಒಂದೆಡೆಯಾದರೆ ದೇವಸ್ಥಾನಗಳು ಇನ್ನೊಂದೆಡೆ. ನೂರಾರು ದೇವಾಲಯಗಳ ಹೊಂದಿರುವ ಕುಂದಾಪುರ ಕೊಲ್ಲೂರು ಮೂಕಾಂಬಿಕೆ, ಆನೆಗುಡ್ಡೆಯ ವಿನಾಯಕ,ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ, ಬಸ್ರೂರಿನ ಮಹಾಲಿಂಗೇಶ್ವರ, ದೇವಿ ದೇವಸ್ಥಾನಗಳು ನಮ್ಮಲ್ಲಿದೆ. ಯಾವುದೇ ಧರ್ಮಗಳ ಭೇದವಿಲ್ಲದೆ ಹತ್ತಾರು ಚರ್ಚುಗಳು ನೂರಾರು ಮಸೀದಿಗಳು ನಮ್ಮಲ್ಲಿದೆ.
ಇಲ್ಲಿಯ ಜನರು ನಾಗರಾಧನೆ, ದೈವರಾಧನೆ, ಭೂತರಾಧನೆಯಲ್ಲಿ ಅಪಾರ ನಂಬಿಕೆ ಹೊಂದಿದ್ದು, ಅದನ್ನು ಚಾಚು ತಪ್ಪದೆ ಆಚರಿಸಿಕೊಂಡು ಬರುತ್ತಿದ್ದಾರೆ. ಅದೇ ರೀತಿಯಲ್ಲಿ ಯಕ್ಷಗಾನ, ರಂಗಭೂಮಿ ನಾಟಕ, ಕೋಳಿ ಅಂಕ ಹೀಗೆ ಎಷ್ಟೊಂದು ಸಂಸ್ಕೃತಿಗಳು ನಮ್ಮಲ್ಲಿ ತುಂಬಿಕೊಂಡಿವೆ.
ಕುಂದಾಪುರದ ಇತಿಹಾಸ ಪುಸ್ತಕ ತೆಗೆದು ನೋಡಿದಾಗ ಎಷ್ಟೊಂದು ಅಚ್ಚರಿಗಳು ನಮ್ಮಲ್ಲಿ ಮೂಡುತ್ತದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಕುಂದಾಪುರ ತನ್ನ ಗತವೈಭವವನ್ನು ಸಾರಿ ಹೇಳುತ್ತದೆ. ಕುಂದವರ್ಮ ಎಂಬ ರಾಜನಿಂದ ಆಳಲ್ಪಟ್ಟಿದ್ದ ಈ ಕುಂದಾಪುರವು ತನ್ನ ಕಾರ್ಯವೈಖರಿಯಿಂದ ವಿಶ್ವವಿಖ್ಯಾತವಾಗಿದೆ. ಪಂಚಗಂಗಾವಳಿಯ ಪಾವಿತ್ರತೆಯ ಪ್ರತೀಕವಾಗಿ ಕುಂದವರ್ಮನು ಕುಂದೇಶ್ವರ ದೇವಾಲಯವನ್ನು ನಿರ್ಮಿಸಿದನು.
ಕುಂದಾಪುರದ ಇತಿಹಾಸಕ್ಕೆ ಹಲವಾರು ಸಾಕ್ಷಿಗಳು ಇಂದಿಗೂ ದೊರಕುತ್ತದೆ. ತುಳುನಾಡಿನ ಭಾಷ್ಯದ ತುಳುವಿನಲ್ಲಿ ಕುಂದ ಎಂದರೆ ಕಂಬ ಎಂದರ್ಥ. ಕುಂದಾಪುರ ಪ್ರಾಂತ್ಯದಲ್ಲಿ ನಿರ್ಮಿಸುತ್ತಿದ್ದ ಮನೆಗಳನ್ನು ಬಹಳ ಸಾಂಸ್ಕೃತಿಕವಾಗಿ ಕಂಬಗಳನ್ನು ಉಪಯೋಗಿಸಿ ನಿರ್ಮಿಸುತ್ತಿದ್ದ ಕಾರಣದಿಂದಾಗಿ ಕುಂದಾಪುರ ಎಂಬ ಹೆಸರು ಬಂದಿದೆ ಎಂದು ಇತಿಹಾಸಕಾರರು ಊಹಿಸುತ್ತಾರೆ. ಕನ್ನಡದಲ್ಲಿ ಕುಂದ ಎಂದರೆ ಮಲ್ಲಿಗೆ ಎಂಬ ಅರ್ಥವೂ ಇದೆ. ಕುಂದಾಪುರದ ಮಲ್ಲಿಗೆಯು ಪ್ರಸಿದ್ಧ. ಇಲ್ಲಿನ ಜನರು ತಮ್ಮ ಜೀವನೋಪಾಯಕ್ಕಾಗಿ ಮಲ್ಲಿಗೆಯನ್ನು ಬೆಳೆಸಿ ಅದರಿಂದ ತಮ್ಮ ಜೀವನವನ್ನು ನಡೆಸುತ್ತಿದ್ದರು. ಯಾವ ಪ್ರದೇಶದಲ್ಲಿ ಮಲ್ಲಿಗೆಯನ್ನು ಜಾಸ್ತಿ ಬೆಳೆಯುತ್ತಿದ್ದರು ಆ ಸ್ಥಳವೇ ಕುಂದಾಪುರವಾಯಿತು.
ಇಲ್ಲಿಯ ಆಡುಭಾಷೆ ಕುಂದಗನ್ನಡ. ಆಡಲು ಹಾಗೆ ಕೇಳಲು ಕೊಡ ಬಹುಸುಂದರ. ತನ್ನ ಸರಳ ಕನ್ನಡ ಹಾಗೂ ಚಿಕ್ಕದಾಗಿ ಮತ್ತು ಚೊಕ್ಕವಾಗಿ ಮಾತನಾಡುವ ಭಾಷೆಯಲ್ಲಿ ಇದು ಕೂಡ ಒಂದು. ಇಲ್ಲಿನ ಜನರು “ಇದ್ ಭಾಷಿ ಅಲ್ಲಾ ಬದ್ಕ್” ಎಂದು ಹೇಳುತ್ತಲೇ ಇರುತ್ತಾರೆ.
ಅಕ್ಕ-ಪಕ್ಕ ಊರುಗಳಾದ ಬಾರ್ಕೂರು, ಬಸ್ರೂರು ಇತಿಹಾಸಗಳ ಪ್ರಮುಖ ಪುಟಗಳಲ್ಲಿವೆ. ಬಸ್ರೂರು ಮೊದಲು ಕೆಳದಿ ಸಂಸ್ಥಾನದ ಪ್ರಮುಖ ವ್ಯಾಪಾರಿ ಕೇಂದ್ರಗಳಲ್ಲೊಂದು. ಅಲ್ಲಿನ ಹಣಕಾಸಿನ ವ್ಯವಹಾರಗಳನ್ನು ನೋಡಿ ಬ್ರಿಟಿಷ್ ಸರಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿತು. ಬ್ರಿಟಿಷ್ ಆಡಳಿತ ವೈಫಲ್ಯದಿಂದಾಗಿ ಬಸ್ರೂರು ಪೋರ್ಚುಗಲರ ಕೈವಶವಾಯಿತು. ಅಲ್ಲಿ ನಡೆದ ಯುದ್ಧಗಳ ಕುರುಹುಗಳು ಈಗಲೂ ನೋಡಸಿಗುತ್ತವೆ.
ದೇವಾಲಯಗಳ ಊರು ಎಂದು ಪ್ರಸಿದ್ಧವಾಗಿರುವ ಬಾರ್ಕೂರು ಕುಂದಾಪುರದ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ವಿಜಯನಗರದ ಪ್ರಮುಖ ಪಟ್ಟಣಗಳಲ್ಲಿ ಒಂದಾದ ಬಾರ್ಕೂರು ಹಲವು ವಿಶೇಷತೆ ಹೊಂದಿದೆ. ಇಲ್ಲಿನ ಬಸದಿಗಳು, ವೀರಗಲ್ಲುಗಳು ಹಾಗೂ ದೇವಾಲಯಗಳು ಊರಿನ ವಿಶೇಷತೆಯನ್ನು ಸಾರಿ ಹೇಳುತ್ತವೆ.
ಒಂದು ಕಡೆ ಸಮುದ್ರ ಇನ್ನೊಂದೆಡೆ ನದಿ ಮಧ್ಯ ರಾಷ್ಟ್ರೀಯ ಹೆದ್ದಾರಿ ಅದುವೇ ಮರವಂತೆ. ಈ ಸುಂದರವಾದ ಸ್ಥಳವು ಜಗತ್-ಪ್ರಸಿದ್ಧವಾಗಿದೆ. ಕುಂದಾಪುರದ ತಪ್ಪಲಲ್ಲೇ ಇರುವ ಕೊಡಿ,ಮರವಂತೆ, ಗಂಗೊಳ್ಳಿ, ಸೋಮೇಶ್ವರ ಬೀಚ್,ಕೊಡಚಾದ್ರಿ ಬೆಟ್ಟ, ಬೆಳ್ಕಲ್ ತೀರ್ಥ, ತೂದಳ್ಳಿ ಫಾಲ್ಸ್ , ಮೆಟ್ಕಲ್ ಗುಡ್ಡ ಕುಂದಾಪುರದ ಪ್ರಮುಖ ಪ್ರವಾಸಿ ತಾಣ. ನೂರಕ್ಕೂ ಅಧಿಕ ಹಳ್ಳಿಗಳನ್ನು ಹೊಂದಿರುವ ಕುಂದಾಪುರದಲ್ಲಿ ಲಕ್ಷಕ್ಕೂ ಅಧಿಕ ಜನ ವಾಸಿಸುತ್ತಾರೆ. ಆಡು ಭಾಷೆಯಲ್ಲಿ ಕುಂದಾಪ್ರ ಎಂದು ಹೇಳುವ ಊರಿನ ಜನ ತಮ್ಮ ಊರನ್ನು ತುಂಬಾ ಪ್ರೀತಿಸುತ್ತಾರೆ….
ಲೇಖನ – ಸಂಪತ್ ಶೆಟ್ಟಿ
ವಿದ್ಯಾರ್ಥಿ
ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು