ಕಲ್ಯಾಣಪುರ(ಸೆ,07): ಗುರು ಮಾಡಿದ ಪಾಠವು ವರವಾಗಿ ನನ್ನ ಸಾಧನೆಗೆ ಮೆಟ್ಟಿಲಾಗಿ ನಿಂತ ಕ್ಷಣವನ್ನು ನೆನಪಿಸಿ ಶಿಕ್ಷಕರ ದಿನಾಚರಣೆಯೆಂದು ತವರು ಮನೆ ಟ್ರಸ್ಟ್ ನ ಸಂಸ್ಥಾಪಕಿ ಶೈನಾ ಕಲ್ಯಾಣಪುರ ತನ್ನ ಶಿಕ್ಷಕ ಶೇಖರ್ ಶೆಟ್ಟಿ ಮಟಪಾಡಿಯವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.
6 ನೇ ತರಗತಿಯಲ್ಲಿ ತಾನು ಕಲಿತ ಪಾಠದ ವಿಷಯಗಳಾದ ಸತಿ ಪದ್ಧತಿ, ಹೆಣ್ಣು ಮಕ್ಕಳ ಶೋಷಣೆ, ಭ್ರೂಣ ಹತ್ಯೆ, ಲೈಂಗಿಕ ಶೋಷಣೆ ಇದರ ಬಗ್ಗೆ ಸಮಾಜ ವಿಜ್ಞಾನದ ಶಿಕ್ಷಕರಾದ ಶೇಖರ್ ಶೆಟ್ಟಿ ಮಟಪಾಡಿ ಅವರು ವಿವರವಾಗಿ ವಿವರಿಸುತಿದ್ದರು. ಅವರ ಪಾಠದ ಪ್ರಭಾವದಿಂದಾಗಿ ನನ್ನನ್ನು ಸಮಾಜದ ಕುರಿತಾದ ಚಿಂತನೆಗೆ ಒಳ ಮಾಡಿದ್ದು, ಹೆಣ್ಣು ಕುಲದ ನೋವಿನ ಬಗ್ಗೆ ಮನ ಮಿಡಿಯುತ್ತಿತ್ತು. ಶಿಕ್ಷಕ ಶೇಖರ್ ಶೆಟ್ಟಿ ಮಟಪಾಡಿಯವರು ಸಮಾಜ ಪರ ಚಿಂತನೆ ಇಂದು ನನಗೆ ಸಮಾಜಸೇವೆಗೆ ಪ್ರೇರಣೆ ನೀಡಿದೆ ಎಂದು ಶೈನಾ ಕಲ್ಯಾಣಪುರ ಹೇಳಿದರು.
ಗುರುವಿನಿಂದ ಪ್ರೇರಣೆಗೊಳಗಾದ ನಾನು ಇಂದು Mother Mary Women Welfare Organisation (R.) ತವರು ಮನೆ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಅಡಿಯಲ್ಲಿ ಅಂಗವಿಕಲ, ವಿಧವೆಯರು, ಅನಾಥ ಹೆಣ್ಣುಮಕ್ಕಳು,ಹೀಗೆ ಸ್ತ್ರೀ ಕುಲದ ಒಳಿತಿಗಾಗಿ ನಾನು ಇಂದು ಶ್ರಮಿಸುತ್ತಿದ್ದೆನೆ ಎಂದು ಶೈನಾ ಕಲ್ಯಾಣಪುರ ತಿಳಿಸಿ ಕಾರ್ಯಕ್ರಮದ ನಿರೂಪಣೆ ಮತ್ತು ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಶೇಖರ್ ಶೆಟ್ಟಿಯವರ ಪತ್ನಿ, ಶಿಷ್ಯೆ ಸುನೀತಾ ಪೂಜಾರಿ, ಟ್ರಸ್ಟ್ ನ ಸದಸ್ಯ ಗಿರೀವಾಸನ್ ಅಯ್ಯರ್ ಉಪಸ್ಥಿತರಿದ್ದರು.