ಕುಂದಾಪುರ(ಸೆ,15): “ಯತ್ರ ನಾರ್ಯಸ್ತು ಪೂಜ್ಯಂರಮಂತೇ ತತ್ರ ದೇವತಾಃ” ಎನ್ನುವ ನಮ್ಮ ದೇಶದಲ್ಲಿ ಎಳೆ ವಯಸ್ಸಿನ ಮಕ್ಕಳಿಂದ ಹಿಡಿದು ಇಳಿವಯಸ್ಸಿನವರ ಮೇಲೆ ಅತ್ಯಾಚಾರ, ಹಿಂಸೆ,ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ದುಃಖಕರ ಸಂಗತಿ. ದೇಶದಲ್ಲಿ ನಿರಂತರವಾಗಿ ನಡೆಯುತ್ತಲೇ ಇರುವ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವ ಕಾನೂನು ಜಾರಿಯಾಗಬೇಕೆಂದು ವಿದ್ಯಾರ್ಥಿನಿ ಪ್ರಮುಖ್ ನಿರಕ್ಷಿತಾ ಹೇಳಿದರು.

ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕುಂದಾಪುರದ ವತಿಯಿಂದ ಕುಂದಾಪುರ ಮಿನಿವಿಧಾನಸೌಧದ ಎದುರು ಸೆಪ್ಟೆಂಬರ್,15 ರಂದು ದೇಶಾದ್ಯಂತ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ ಕಳಸ ಮಾತನಾಡಿ, ಭಾರತದ ಸಂಸ್ಕೃತಿಯಲ್ಲಿ ಮಹಿಳೆಗೆ ನೀಡಿರುವ ಗೌರವ, ಸ್ಥಾನಮಾನದ ಕುರಿತು ಮಾತನಾಡಿ ಇತ್ತೀಚೆಗೆ ನಡೆಯುತ್ತಿರುವ ಮಹಿಳಾ ದೌರ್ಜನ್ಯದ ಕುರಿತು ಕಳವಳ ವ್ಯಕ್ತಪಡಿಸಿದರು. ಗಾಂಧೀಜಿ ಕಂಡ ರಾಮರಾಜ್ಯದ ಕನಸು ಸಾಕಾರವಾಗಬೇಕು. ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗೊಳಿಸಲು ಮನವಿ ಮಾಡಿಕೊಂಡರು. ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ನೀಡಿದ ವಿದ್ಯಾರ್ಥಿಗಳು ಇಂತಹ ಪ್ರಕರಣಗಳು ದೇಶದಲ್ಲಿ ನಡೆಯದಂತೆ ಕಠಿಣವಾದ ಕಾನೂನು ದೇಶದಲ್ಲಿ ರೂಪಿಸಲು ಮನವಿ ನೀಡಿದರು.
ಈ ಸಂದರ್ಭದಲ್ಲಿ ಎಬಿವಿಪಿ ಕುಂದಾಪುರ ತಾಲೂಕು ಸಂಚಾಲಕ ಪ್ರಜ್ವಲ್, ಪ್ರಮುಖರಾದ ಪ್ರಸನ್ನ,ಯಶಸ್ವಿನಿ ಬೀಜಾಡಿ, ಆಶೀಶ್ ಬೋಳಾ, ವಿಜೇತಾ, ರಶ್ಮಿತಾ ,ದೀಪಕ್ ಕೋಟೇಶ್ವರ, ದೀಪಕ್, ರಾಹುಲ್, ಪಲ್ಲವಿ, ಮೇಘಾ, ಸಂಜಯ್ ಉಪಸ್ಥಿತರಿದ್ದರು.
ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಕಾಲೇಜು, ಭಂಡಾರ್ಕರ್ಸ್ ಕಾಲೇಜು, ಶಾರದಾ ಕಾಲೇಜು ಬಸ್ರೂರು,ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪದವಿ ಕಾಲೇಜು, ಸಹಿತ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.










