ಶಿರ್ವ(ಸೆ,28): ಇಲ್ಲಿನ ಸಂತ ಮೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯ ಸೇವಾ ಯೋಜನಾ ದಿನವನ್ನು ಕಾಲೇಜಿನ ದೃಶ್ಯ-ಶ್ರಾವ್ಯ ಕೊಠಡಿಯಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿ ಉಡುಪಿಯ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶ್ರೀಯುತ ಸುಚಿತ್ ಕೋಟ್ಯಾನ್ ರವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಜೀವನದಲ್ಲಿ ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಸೇವಾ ಮನೋಭಾವನೆಯಿಂದ ಸಮಾಜಕ್ಕೆ ಮಾದರಿ ಪ್ರಜೆಗಳಾಗಬೇಕು. ಅದಕ್ಕಾಗಿ ಯೋಜನೆಯಡಿಯಲ್ಲಿ ದೊರೆಯುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿ ಮಹಾತ್ಮ ಗಾಂಧೀಜಿಯವರ ಕನಸಿನ ಕೂಸಾಗಿರುವ ರಾಷ್ಟ್ರೀಯ ಸೇವಾ ಯೋಜನೆ ಎಂಬ ಸಂಘಟನೆಯು ಯುವಕರಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುವುದರೊಂದಿಗೆ ಸಮಾಜದಲ್ಲಿ ಸ್ವಾಸ್ಥ್ಯವನ್ನು ಕಾಪಾಡಲು ಮೊದಲ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದರು.
ಯೋಜನಾಧಿಕಾರಿ ಶ್ರೀ ಪ್ರೇಮನಾಥ್ರವರು ಪ್ರಾಸ್ತಾವಿಕ ಮಾತುಗಳೊಂದಿಗೆ ಅತಿಥಿ ಪರಿಚಯಗೈದರು. ರಾಷ್ಟ್ರೀಯ ಸೇವಾ ಯೋಜನ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಸ್ವಯಂಸೇವಕರಿಗೆ ಬಹುಮಾನವನ್ನು ವಿತರಿಸಲಾಯಿತು. ಸಹ ಯೋಜನಾಧಿಕಾರಿ ಸ್ಯಾಮ್ಜೋಯೆಲ್ ಡಯಾ ಸ್ ರವರು ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.
ಕಾರ್ಯಕ್ರಮದಲ್ಲಿ ಸಹ ಯೋಜನಾಧಿಕಾರಿ ಶ್ರೀಮತಿ. ದೀಪಾ ಶೆಟ್ಟಿ, ಘಟಕ ನಾಯಕರಾದ ಅಕ್ಷಯ್, ಡೆರಿಲ್ ಡೇಸಾ, ಸುರೇಖಾ ಮತ್ತು ಅಪೇಕ್ಷಾ, ಸ್ವಯಂ ಸೇವಕರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಸ್ವಯಂ ಸೇವಕಿ ನಿಶ್ಮಿತಾ ಸ್ವಾಗತಿಸಿ, ಯೋಜನಾಧಿಕಾರಿ ಕು. ರಕ್ಷಾ ವಂದಿಸಿದರು. ಸ್ವಯಂ ಸೇವಕಿ ಕು. ಅಕ್ಷತಾ ನಿರೂಪಿಸಿದರು.