ಬಂಟಕಲ್ (ಅ, 01) : ಭಾರತ ಶಿಕ್ಷಣ ಸಚಿವಾಲಯದ ಆಧೀನದಲ್ಲಿರುವ ಇನ್ಸಿಟ್ಯೂಶನ್ ಇನ್ನೊವೇಶನ್ ಕೌನ್ಸಿಲ್ (ಐಐಸಿ) 2021-22ರ ಸಾಲಿನಲ್ಲಿ ನಡೆದ ಮಾರ್ಗದರ್ಶಕ ಕಾರ್ಯಕ್ರಮದಲ್ಲಿ ಬಂಟಕಲ್ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯವನ್ನು ಮಾರ್ಗದರ್ಶಕ ಸಂಸ್ಥೆಯನ್ನಾಗಿ ಆಯ್ಕೆ ಮಾಡಲಾಗಿದೆ.
ಸ್ಥಳೀಯ ಪರಿಸರ ವ್ಯವಸ್ಥೆಯನ್ನು ನವೀನ ಮಾದರಿಯಲ್ಲಿ ರಚಿಸುವುದು,ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಯಾಂತ್ರಿಕತೆಯನ್ನು ಬೆಂಬಲಿಸಿ ಅದರ ಚೌಕಟ್ಟಿನಲ್ಲಿ ಹೊಸಹೊಸ ಸಾಧನೆಗಳನ್ನು ಮಾಡಲು ಇತರ ವಿದ್ಯಾಸಂಸ್ಥೆಗಳಲ್ಲಿ ಆಟಲ್ ಶ್ರೇಯಾಂಕಕ್ಕಾಗಿ ವಿದ್ಯಾರ್ಥಿಗಳನ್ನು ರೂಪಿಸುವುದು, ವಿದ್ಯಾರ್ಥಿಗಳಿಗೆ ಅವರ ಅರಿವಿನ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿ ಹೊಸ ಯೋಜನೆಗಳನ್ನು ರೂಪಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಐಐಸಿಯ ಜವಾಬ್ದಾರಿಯಾಗಿದೆ.
ಈ ಮಾರ್ಗದರ್ಶಕ ಕಾರ್ಯಕ್ರಮದಡಿಯಲ್ಲಿ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಮಾರ್ಗದರ್ಶಕ ಸಂಸ್ಥೆಯಾಗಿ 2021-22ರ ಶೈಕ್ಷಣಿಕ ವರ್ಷದಲ್ಲಿ ಐಐಸಿಯ ಸಹಯೋಗದೊಂದಿಗೆ ಔದ್ಯೋಗೀಕರಣದ ಮಾಹಿತಿ ವಿನಿಮಯದ ಜೊತೆಗೆ ಸಂಪನ್ಮೂಲ ಕ್ರೋಡೀಕರಣಕ್ಕೆ ಬೆಂಬಲವನ್ನು ಒದಗಿಸುತ್ತದೆ.
ಈ ಸಂಸ್ಥೆಯು ವಿವಿಧ ವಾಣಿಜ್ಯೋದಮಿಗಳು, ಹೂಡಿಕೆದಾರರು, ವೃತ್ತಿಪರರೊಂದಿಗೆ ಕಾರ್ಯಗಾರ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿ ಆವಿಷ್ಕಾರರಿಗೆ ಮಾರ್ಗದರ್ಶನ ನೀಡುವಲ್ಲಿ ಸಹಕರಿಸುತ್ತಿದೆ.
ಮಾರ್ಗದರ್ಶಕ ಸಂಸ್ಥೆಗಳು ಅಟಲ್ ಟಿಂಕರಿಂಗ್ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ಮತ್ತು ಕೇಂದ್ರ/ರಾಜ್ಯ ಸರಕಾರಗಳು ಆಯೋಜಿಸುವ ಯೋಜನೆಗಳಲ್ಲಿ, ಮಾರ್ಗದರ್ಶನ ನೀಡುತ್ತವೆ. 2019 -20 ರ ಶೈಕ್ಷಣಿಕ ವರ್ಷದಲ್ಲಿ ನಡೆದ ನಾವೀನ್ಯತೆ, ಉದ್ಯಮಶೀಲಕೆ ಸಂಬಂಧಿತ ಚಟುವಟಿಕೆಗಳಲ್ಲಿ 4.5 ಗೋಲ್ಡನ್ ಸ್ಟಾರ್ ರೇಟಿಂಗ್ ಪಡೆದ ಸಲುವಾಗಿ ಈ ಮಾರ್ಗದರ್ಶಕ ಸ್ಥಾನವನ್ನು ವಿದ್ಯಾಸಂಸ್ಥೆಯು ಪಡೆದಿರುತ್ತದೆ.
ಭಾರತ ಸರ್ಕಾರದ ಇನ್ನಿಟ್ಯೂಶನ್ ಇನ್ನೋವೇಶನ್ ಕೌನ್ಸಿಲ್ (ಐಐಸಿ) ಮಾರ್ಗದರ್ಶನದ ಕಾರ್ಯಕ್ರಮ ಪಟ್ಟಿಯಲ್ಲಿ 150 ಸಂಸ್ಥೆಗಳಲ್ಲಿ ಈ ಸಂಸ್ಥೆಯು ಹೆಸರನ್ನು ಪಡೆದಿರುವುದು ಹೆಮ್ಮೆ ತಂದಿದೆ. ಕಾಲೇಜಿನ ಇನ್ಸ್ಟಿಟ್ಯೂಶನ್ ಇನ್ನೋವೇಶನ್ ಕೌನ್ಸಿಲ್ (ಐಐಸಿ)ಯ ಸದಸ್ಯರ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಉಪ ಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ರವರು ಐಐಸಿ ಸಂಯೋಜಕರನ್ನು ಮತ್ತು ಸದಸ್ಯರನ್ನು ಅಭಿನಂದಿಸಿದರು.