ಮ್ಮ ಕರಾವಳಿ ಭಾಗದಾದ್ಯಂತ ಹೊಸ ಫಸಲಿನ ಕದಿರುಕಟ್ಟುವ ಪೂಜೆ ಸಂಪ್ರದಾಯಕವಾಗಿ ರೂಡಿಯಲ್ಲಿರುವ ಹಬ್ಬ.ವಿಶೇಷವಾಗಿ ನವರಾತ್ರಿ ಸಂದರ್ಭದಲ್ಲಿ ಆಚರಿಸುವ ಈ ಹಬ್ಬದಂದು ಮನೆ ಮಂದಿಯಲ್ಲಾ ಸಂತಸದಿಂದ ಆಚರಿಸುತ್ತಾರೆ. ಕರಾವಳಿಯ ಕೃಷಿ ಪರಂಪರೆಯಲ್ಲಿ ಮತ್ತು ಸಂಪ್ರದಾಯದಲ್ಲಿ ಕದಿರು ಕಟ್ಟುವ ಹಬ್ಬಕ್ಕೆ ವಿಶೇಷ ಮಹತ್ವ ಇದೆ.

ಕ್ರಷಿ ಭೂಮಿಯಲ್ಲಿ ಬೆಳೆದ ಭತ್ತದ ಪೈರು ತೆನೆಬಿಟ್ಟು ಬೆಳೆದಿರುವ ಸಂಭ್ರಮವನ್ನು ಕರಾವಳಿ ಭಾಗದ ಜನತೆ ಭಕ್ತಿಭಾವದಿಂದ ಆಚರಿಸುವ ಹಾಗೂ ದೇವಸ್ಥಾನದಲ್ಲಿ ಹೊಸ ಫಸಲುಗಳನ್ನು ಊರ ಜನತೆಗೆ ಹಂಚುವುದು ಅದನ್ನು ಪ್ರಸಾದರೂಪದಲ್ಲಿ ಸ್ವೀಕರಿಸಿ ಮನೆಗೆ ತಂದು ಮನೆ ಮತ್ತು ಮನೆ ತುಂಬಿಸಿಕೊಂಡು ವಿಶೇಷ ಸಸ್ಯಾಹಾರಿ ಭೋಜನಗಳನ್ನು ತಯಾರಿಸಿ ಸಂಸಾರ ಸಮೇತ ಗುರು-ಹಿರಿಯರನ್ನು ಸಂಬಂಧಿಕರನ್ನು ಹಿತಚಿಂತಕರನ್ನು ಆಹ್ವಾನಿಸಿ ಸಹಭೋಜನದ ಸಂತೋಷವೇ ಈ ಹಬ್ಬದ ವೈಶಿಷ್ಟ್ಯತೆ.
ಹಿಂದಿನಿಂದಲೂ ಹಿರಿಯರು ಕದಿರು (ಹೊಸ ಪೈರು )ಕಟ್ಟಿ ಹಬ್ಬವನ್ನು ಆಚರಿಸುವ ನಿಯಮವನ್ನು ಅನುಸರಿಸುತ್ತಿದ್ದರು. ಮನೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿ ,ಅಂಗಳವನ್ನು ಗೋವಿನ ಸಗಣಿಯಿಂದ ಸಾರಿಸಿ ,ಗೋಡೆಗಳಿಗೆ ಶೇಡಿ (ಸುಣ್ಣದಿಂದ) ಅಲಂಕರಿಸಿ ಹಬ್ಬದ ಹಿಂದಿನ ದಿನವೇ ಬೇರೆಯವರಿಗೆ ಗದ್ದೆ ಹೊಸ ಫಸಲುಗಳನ್ನು ರಾತ್ರಿ ಯಾರು ನೋಡದಂತೆ ಕದ್ದು ತರುತಿದ್ದರು. ಆದರೆ ಇಂದು ಈ ನಿಯಮ ಬಹುತೇಕ ಮಾಯವಾಗಿ ಊರಿನ ಒಂದು ನಿರ್ದಿಷ್ಟ ದೇವಸ್ಥಾನದಲ್ಲಿ “ಕದಿರು” ಪೂಜೆ ಮಾಡಿ ಪ್ರತಿ ಮನೆಗೂ ಯಜಮಾನರಿಗೆ ದೇವಸ್ಥಾನ ದಿಂದ ಪ್ರಸಾದರೂಪದಲ್ಲಿ ಕೊಡುವುದು ಕಂಡುಬರುತ್ತಿದೆ. ಕದಿರನ್ನು ಸ್ವೀಕರಿಸಿ ಮನೆಗೆ ತಂದು ಮುಂದಿನ ವಿಧಿವಿಧಾನಗಳನ್ನು ಮಾಡುತ್ತಾರೆ.
ಹೊಸ ಕದಿರು ಮತ್ತು ಮಾವಿನ ಎಲೆ ಹಲಸಿನ ಎಲೆಯನ್ನು ದಾರದಲ್ಲಿ ಕಟ್ಟಿ ತೋರಣ ರೂಪದಲ್ಲಿ ಮನೆಯ ದ್ವಾರ ಬಾಗಿಲಿಗೆ ತುಳಸಿಕಟ್ಟೆಗೆ ಬಾವಿ ಮತ್ತು ವಾಹನ, ಯಂತ್ರ ಗಳಿಗೆ ಕಟ್ಟುವುದನ್ನೇ ಕದಿರುಕಟ್ಟುವ ಹಬ್ಬ ಎಂದು ಕರೆಯುತ್ತಾರೆ.

ಹಬ್ಬದೂಟದಲ್ಲಿ ಹಳೆಯ ಅಕ್ಕಿಯೊಂದಿಗೆ ಹೊಸ ಭತ್ತದ ಕಾಳುಗಳನ್ನು ಸುಲಿದು ಹಾಕಿ ಅಡುಗೆಯಲ್ಲಿ ಅನ್ನದ ರೂಪದಲ್ಲಿ ತಯಾರಿಸುವ ಅನ್ನವನ್ನು ಹೊಸ್ತು ಎಂದು ಕರೆಯುತ್ತಾರೆ. ಐದರಿಂದ ರಿಂದ ಏಳು ಅಥವಾ ಒಂಬತ್ತು ಬಗೆಯ ತರಕಾರಿ ಪಲ್ಯ, ಸಾಂಬಾರು, ಪಾಯಸ ವಿಶೇಷ ಭೋಜನಗಳು ಪರಿವಾರ ಜೊತೆಗೂಡಿ ಊಟ ಮಾಡಿ ವಿಳ್ಯದೇಲೆ ತಿನ್ನುವುದು ಪದ್ದತಿ. ಜೊತೆಗೆ ಮನಸ್ಸಿಗೆ ಖುಷಿ ಕೊಡುವ ಕೆಲವು ಹಳ್ಳಿಯ ಆಟಗಳನ್ನು ಕೆಲವಡೆ ಆಡುತ್ತಾರೆ. ಕೆಲವೊಂದು ಭಾಗದಲ್ಲಿ ಹಬ್ಬದ ದಿನದ ರಾತ್ರಿ ಊಟಕ್ಕೆ ಮೀನು ಊಟ ತಯಾರು ಮಾಡಿ ಬಡಿಸುವ ಪದ್ದತಿ ಇದೆ .


ಈಶ್ವರ್ ಸಿ ನಾವುಂದ ಚಿಂತಕ- ಬರಹಗಾರರು
9833259692










