ಕುಂದಾಪುರ (ನ,12): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ಪ್ರವರ್ತಕರಾದ ನಾಡೋಜಾ ಡಾ. ಜಿ. ಶಂಕರ್ ರವರು ಯಾವುದೇ ಜಾತಿ, ಮತ, ಧರ್ಮ ಭೇದವಿಲ್ಲದೆ ಬಡವರ ಅರೋಗ್ಯ ಸ್ವಾಸ್ಥ್ಯಕ್ಕಾಗಿ ಮಣಿಪಾಲ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪೆನಿ ಸಹಯೋಗದೊಂದಿಗೆ ಮಾಹೆ ಮಣಿಪಾಲದ ಸಹಕಾರದಿಂದ ಹಮ್ಮಿಕೊಂಡ ಜಿ. ಶಂಕರ್ ಆರೋಗ್ಯ ವಿಮಾ ಯೋಜನೆ ನವೀಕರಣ ಮತ್ತು ಹೊಸ ಕಾರ್ಡುಗಳ ನೋಂದಾವಣಿ ಅಭಿಯಾನ ಇದೇ ನವೆಂಬರ್ ,15 ರಿಂದ 30 ರ ತನಕ ನಡೆಯಲಿದೆ.
2021ರಲ್ಲಿ ಒಟ್ಟು 52,505 ಕುಟುಂಬಗಳಿಗೆ ಜಿಲ್ಲಾ ಮೊಗವೀರ ಯುವ ಸಂಘಟನೆ ಹಾಗೂ ವಿವಿಧ ಘಟಕಗಳ ಮೂಲಕ ನೋಂದಾವಣೆ ಗೊಳಿಸಿ ವಿತರಿಸಲಾಗಿದೆ.
ಮಣಿಪಾಲ ಸಮೂಹ ಆಸ್ಪತ್ರೆಗಳಿಗೆ ಮಾತ್ರ ಈ ಯೋಜನೆ ಸೀಮಿತವಾಗಿದ್ದು, ಮಣಿಪಾಲದ ಕೆಎಂಸಿಯ ಹೊರರೋಗಿ ವಿಭಾಗದ ಚಿಕಿತ್ಸೆಯಲ್ಲಿ ಶೇ. 70, ಉಡುಪಿ ಟಿಎಂಎ ಪೈ ಆಸ್ಪತ್ರೆಯ ಚಿಕಿತ್ಸೆಯಲ್ಲಿ ಶೇ. 60, ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ ಚಿಕಿತ್ಸೆಯಲ್ಲಿ ಶೇ.100 ರಿಯಾಯಿತಿ ಲಭ್ಯವಾಗಲಿದೆ.
50 ಸಾವಿರ ರೂ. ಕ್ಲೇಮು ಪಡೆಯುವ ವಿಮಾ ಯೋಜನೆ ಇದಾಗಿದ್ದು,ಕುಟುಂಬದ ಸದಸ್ಯ ವಿಮಾ ಯೋಜನೆಗೆ ಒಳಪಟ್ಟ ರೋಗದ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾದಲ್ಲಿ ನಗದು ರಹಿತವಾಗಿ ಚಿಕಿತ್ಸೆ ಪಡೆಯುವ ಸೌಲಭ್ಯವಿದೆ.
ಈ ಹಿಂದೆ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ಹೊಂದಿದ್ದವರು ಹಾಗೂ ಹೊಸ ಕಾರ್ಡ್ ಮಾಡಲಿಚ್ಛಿಸುವವರು ರೇಷನ್ ಕಾರ್ಡ್ ಪ್ರತಿ ಹಾಗೂ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕಚೇರಿ ಮಾಧವ ಮಂಗಲ ಸಮುದಾಯ ಭವನ ಶ್ಯಾಮಿಲಿ ಸಭಾಂಗಣದ ಎದುರು ಅಂಬಲಪಾಡಿ,ಉಡುಪಿ ಅಥವಾ ಮೊಗವೀರ ಯುವ ಸಂಘಟನೆಯ ವಿವಿಧ ಘಟಕಗಳನ್ನು ಸಂಪರ್ಕಿಸಿ ನೋಂದಾವಣಿ ಮಾಡಿಕೊಳ್ಳಬಹುದು ಎಂದು ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಾಮ ಕೆ.ಎಂ. ಕೋಟ ತಿಳಿಸಿದ್ದಾರೆ.