ಪುತ್ತೂರು (ನ, 26) : ದಕ್ಷಿಣ ಧ್ರುವದ ಸುತ್ತ ವ್ಯಾಪಿಸಿರುವ ಹಿಮಚ್ಚಾದಿತ ಪ್ರದೇಶ ಅಂಟಾರ್ಕ್ಟಿಕ್ ವಿಸ್ಮಯಗಳ ಆಗರ ಮತ್ತು ಇದೊಂದು ಪ್ರಯೋಗಶಾಲೆಯಿದ್ದಂತೆ ಎಂದು ಮಣಿಪಾಲದ ಮಣಿಪಾಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಡಾ. ಅನೀಶ್.ಕೆ ವಾರಿಯರ್ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಅಂಟಾರ್ಕ್ಟಿಕಾದ ಹವಾಮಾನ ಬದಲಾವಣೆ ಮತ್ತು ಸೂಕ್ಷ್ಮ ಪ್ಲಾಸ್ಟಿಕ್ ಹಾಗೂ ಅದರಿಂದಾಗುವ ಹಾನಿ ಎನ್ನುವ ವಿಷಯದ ಬಗ್ಗೆ ಮಾತಾಡಿದರು. ಇದು ಭೂಗೋಳದ ಅತ್ಯಂತ ಎತ್ತರವಾದ ಖಂಡವಾಗಿದ್ದು ಪರ್ವತ ಸಾಲು, ಕಣಿವೆ ಕಂದರಗಳನ್ನು ಒಳಗೊಂಡಿದೆ ಎಂದರು. ಇಲ್ಲಿ ಸಂಪೂರ್ಣ ಪ್ರತಿಕೂಲ ಹವಾಮಾನವಿದ್ದು, ಒಂದೊಂದು ಪ್ರದೇಶದಲ್ಲಿ ಬೇರೆ ಬೇರೆ ಉಷ್ಣತೆ ಮತ್ತು ಗಾಳಿಯ ವೇಗಗಳನ್ನು ಕಾಣಬಹುದಾಗಿದೆ. ವರ್ಷದ ಆರು ತಿಂಗಳು ಬೆಳಕು ಮತ್ತು ಆರು ತಿಂಗಳು ಕತ್ತಲು ಆವರಿಸಿರುವುದರಿಂದ ಕೆಲವೇ ಕೆಲವು ಜೀವಿಗಳು ಇಲ್ಲಿ ಬದುಕುತ್ತವೆ ಎಂದರು. ದೇಶದಲ್ಲಿ ಪ್ಲಾಸ್ಟಿಕ್ನ ಅತಿಯಾದ ಬಳಕೆಯಿಂದಾಗಿ ವಾತಾವರಣದಲ್ಲಿ ಮತ್ತು ನೀರಿನಲ್ಲಿ ಸೂಕ್ಷ್ಮ ಪ್ಲಾಸ್ತಿಕ್ ಕಣಗಳು ಸೇರಿಕೊಂಡಿದ್ದು ಇದು ಮನುಕುಲಕ್ಕೆ ಮತ್ತು ಇತರ ಜೀವರಾಶಿಗಳಿಗೆ ಮಾರಕವಾಗಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ನಿಷೇಧಿಸುವ ಕೆಲಸವಾಗಬೇಕು ಎಂದು ನುಡಿದರು.
ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಆನಂದ್.ವಿ.ಆರ್, ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಂಘದ ಸಂಯೋಜಕ ಪ್ರೊ. ಸುಮಂತ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ವಿದ್ಯಾರ್ಥಿನಿ ಶ್ರಾವಣಿ. ಸಿ ಸ್ವಾಗತಿಸಿದರು. ಉಷಾ ಎಚ್.ಆರ್. ವಂದಿಸಿದರು.










