ಕುಂದಾಪುರ (ಡಿ, 02) : ವಿದ್ಯಾರ್ಥಿ ಬದುಕಿನಲ್ಲಿ ವೈವಿಧ್ಯಮಯ ವೇದಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇರುವ ಸಮಯವನ್ನು ಧನಾತ್ಮಕವಾಗಿ ಬಳಸಿಕೊಳ್ಳಬೇಕು. ಔದ್ಯೋಗಿಕವಾಗಿ ಎತ್ತರದ ಸ್ಥಾನವೇರಲು ಇದೆಲ್ಲ ಬಹುದೊಡ್ಡ ಮೆಟ್ಟಿಲಾಗುತ್ತದೆ. ಈ ಕಾಲೇಜು ಅಪರೂಪದ ಈ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವುದು ಶ್ಲಾಘನೀಯ, ಇದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತದೆ ಎಂದು ಕನ್ನಡ ಜಾನಪದ ಪರಿಷತ್, ಉಡುಪಿ ಘಟಕದ ಅಧ್ಯಕ್ಷರಾದ ಡಾ.ಗಣೇಶ ಗಂಗೊಳ್ಳಿ ಹೇಳಿದರು. ಅವರು ಕಾಲೇಜಿನ ವಿವಿಧ ವೇದಿಕೆಗಳ ವಾರ್ಷಿಕ ಚಟುವಟಿಕೆಗಳನ್ನು ಡಿಸೆಂಬರ್ 02ರಂದು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ.ಕೆ.ಉಮೇಶ್ ಶೆಟ್ಟಿ ವಹಿಸಿಕೊಂಡಿದ್ದು, ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ವಿವಿಧ ವೇದಿಕೆಗಳ ಬಗೆಗೆ ತಿಳಿಸಿದರು. ಅಭಯ, ಅಂಕಿತಾ ಶೇಟ್, ಶ್ರೀನಿಧಿ, ದೀಕ್ಷಾ ವಿವಿಧ ಜನಪದ ಗೀತೆಗಳ ಮೂಲಕ ರಂಜಿಸಿದರು. ವೇದಿಕೆಗಳ ಸಂಯೋಜಕ ಸುಧಾಕರ ಪಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಗಳ ಸಂಯೋಜಕ ಪ್ರವೀಣ್ ಮೊಗವೀರ ಗಂಗೊಳ್ಳಿ ಧನ್ಯವಾದ ಸಲ್ಲಿಸಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ವೀಣಾ ಭಟ್ ನಿರೂಪಿಸಿದರು.