ಶಿರ್ವ(ಡಿ.28): ನಮ್ಮ ಪರಿಸರ ಸ್ವಚ್ಛವಾಗಿದ್ದರೆ ಎಷ್ಟೋ ರೋಗಗಳನ್ನು ಮದ್ದಿಲ್ಲದೇ ದೂರವಾಗಿಸಲು ಸಾಧ್ಯ. ನಮಗೆ ಶಿಕ್ಷಣ ಎಷ್ಟು ಮುಖ್ಯವೋ ಪರಿಸರ ಕಾಳಜಿ ಅಷ್ಟೇ ಮುಖ್ಯ. ಅ ನಿಟ್ಟಿನಲ್ಲಿ ಕಾಲೇಜಿನ ಎನ್ ಸಿ ಸಿ ಘಟಕದ ವಿದ್ಯಾರ್ಥಿಗಳು ಕಾಪು ಬೀಚ್ ಸ್ವಚ್ಛಗೊಳಿಸುವ ಮೂಲಕ ಸರಕಾರದ ಕೆಲಸ ಮಾತ್ರವಲ್ಲ ಪ್ರಜ್ಞಾ ವಂತ ನಾಗರಿಕರೆಲ್ಲರ ಕರ್ತವ್ಯವೆಂದು ಸಾಬೀತು ಪಡಿಸಿದರು. ಕಡಲ ಕಿನಾರೆಯ ವ್ಯಾಪಾರಸ್ಥರು ಸ್ವಚ್ಛತೆಯ ಬಗ್ಗೆ ತಾವೇ ಮುತುವಜಿ೯ ವಹಿಸಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಪ್ರವಾಸಿಗರಿಗೆ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಮೂಡಿಸಿದಾಗ ಸ್ವಚ್ಛ ಭಾರತದ ಕನಸು ಸಾಕಾರಗೊಳ್ಳಲು ಸಾಧ್ಯ ಎಂದು ಶಿವ೯ ಸಂತಮೇರಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಐವನ್ ಮೊನೀಸ್ ರವರು ಬೀಚ್ ಕ್ಲೀನಿಂಗ್ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಚ್ಛ ಭಾರತ-ಸ್ವಸ್ಥ ಭಾರತದ ನೆಲೆಯಲ್ಲಿ ಸ್ವಚ್ಛ- ಸುಂದರ ಸಾಗರ, 75 ನೇ ಸ್ವಾತಂತ್ರ್ಯದ ಆಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಬೀಚ್ ಕ್ಲೀನಿಂಗ್ ಕಾರ್ಯಕ್ರಮವನ್ನು ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ಎನ್ ಸಿಸಿ ಘಟಕ ಹಾಗೂ 21 ಕರ್ನಾಟಕ ಬೆಟಾಲಿಯನ್ ಎನ್ ಸಿಸಿ ಉಡುಪಿ ಸಂಯುಕ್ತವಾಗಿ ಏರ್ಪಡಿಸಿದ್ದ ಪುನೀತ ಸಾಗರ ಅಭಿಯಾನದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾಲೇಜಿನ ಎನ್ ಸಿಸಿ ಅಧಿಕಾರಿ ಲೆಫ್ಟಿನೆಂಟ್ ಕೆ. ಪ್ರವೀಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದ್ದರು. ಕಾಪು ಬೀಚಿನಲ್ಲಿ ಸುಮಾರು 35 ಕೆಡೆಟ್ ಗಳು ಭಾಗವಹಿಸಿ 400 ಕೆಜಿ ಪ್ಲಾಸ್ಟಿಕ್ ಮತ್ತು ಕಸವನ್ನು ಸಂಗ್ರಹಿಸಿ ಕಾಪು ಪುರಸಭೆಯ ಸ್ವಚ್ಛಗೊಳಿಸುವ ಸಿಬ್ಬಂದಿ ವರ್ಗದವರಿಗೆ ಹಸ್ತಾಂತರಿಸದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಯಶೋಧ,ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಸುರಕ್ಷ ,ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ವಿಶಾಲ್ ಎಸ್ ಮೂಲ್ಯ, ಜೂನಿಯರ್ ಅಂಡರ್ ಆಫೀಸರ್ ಹರ್ಷಿತ , ಕಂಪನಿ ಸಾರ್ಜೆಂಟ್ ಕ್ವಾಟರ್ಮಸ್ಟರ್ ಮೋಹಿತ್ ಎನ್ ಸಾಲಿಯಾನ್, ಕಾರ್ಪೊರಲ್ ಧೀರಜ್ ಆಚಾರ್ಯ, ಸಹಕರಿಸಿದರು. ಜೂನಿಯರ್ ಅಂಡರ್ ಆಫೀಸರ್ ಸುರಕ್ಷಾ ಸ್ವಾಗತಿಸಿ,ಲ್ಯಾನ್ಸ್ ಕಾರ್ಪೊರಲ್ ಲೋಬೋ ರಿಯಾ ನೆವಿಲ್ ಪಿಂಟೋ ವಂದಿಸಿದರು.














