ಉಡುಪಿ (ಡಿ.29): ಜಿಲ್ಲೆಯ ಕಡಲ ತೀರದ ಆಪದ್ಬಾಂಧವ ಈಶ್ವರ ಮಲ್ಪೆಯವರ ಮನೆಗೆ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಉಡುಪಿ ಜಿಲ್ಲೆ ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಶೆಟ್ಟಿ ಭೇಟಿ ನೀಡಿದರು.ಈಶ್ವರ ಮಲ್ಪೆಯವರ ಸಮಾಜಮುಖಿ ಕಾರ್ಯವನ್ನು ಗುರುತಿಸಿ ಪ್ರಶಂಸೆಯ ಜೊತೆಗೆ ಅವರ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.
ಮಲ್ಪೆ ಬೀಚಿಗೆ ತೆರಳುವ ಮುಖ್ಯರಸ್ತೆಯ ಎಡಭಾಗದಲ್ಲಿ, ಬೀಚಿನಿಂದ ಅನತಿ ದೂರದಲ್ಲಿ ಸಣ್ಣದೊಂದು ಮನೆಯಲ್ಲಿ 3 ವಿಕಲಚೇತನ ಮಕ್ಕಳು. 21 ವರ್ಷ ಹಾಗೂ 19 ವರ್ಷದ ಇಬ್ಬರು ಗಂಡು ಮಕ್ಕಳು, 4 ವರ್ಷದ ಹೆಣ್ಣು ಮಗು ಹಾಗೂ ಪತ್ನಿಯೊಂದಿಗೆ ಕಡಲ ತೀರದ ಆಪದ್ಬಾಂಧವನೆನಿಸಿಕೊಂಡ ಈಶ್ವರ್ ಮಲ್ಪೆ ಹೋರಾಟದ ಜೀವನ ಸಾಗಿಸುತ್ತಿದ್ದಾರೆ.
ಈಜು ಈಶ್ವರ ಮಲ್ಪೆಯವರಿಗೆ ದೇವರು ಕೊಟ್ಟ ವರ. ಅದರಿಂದ ಸಮಾಜಕ್ಕೆ ನನ್ನಿಂದ ಆಗುವ ಸಹಾಯ ಮಾಡುವುದು ನನ್ನ ಧರ್ಮ, ಕರ್ತವ್ಯ ಎನ್ನುತ್ತಾ ನೀರಿನಲ್ಲಿ ಮುಳುಗಿದವರನ್ನು ರಕ್ಷಿಸಿ, ಬದುಕಿಸುವ, ನೀರಿನಾಳದಲ್ಲಿ ಮುಳುಗಿದ ಶವಗಳನ್ನು ಎತ್ತಿ ತರುವ ಸಾಹಸಮಯ ಕಾಯಕದಲ್ಲಿ ತೊಡಗಿಸಿಕೊಂಡು, ಬೇರೆಯವರ ಸಂತೃಪ್ತಿಯಲ್ಲಿ ತನ್ನ ನೋವನ್ನು ಮರೆಯುವ ಬಲು ದೊಡ್ಡ ಮನಸ್ಸು ಇವರದ್ದು.
ನೀರಿಗೆ ಬಿದ್ದ 220 ಕ್ಕೂ ಹೆಚ್ಚು ಶವಗಳನ್ನು ಜೀವದ ಹಂಗು ತೊರೆದು ವಾರಸುದಾರರಿಗೆ ತಲುಪಿಸಿದವರು ಇವರು ನೀರಿಗೆ ಬಿದ್ದು ಜೀವನ್ಮರಣದ ಹೋರಾಟದಲ್ಲಿದ್ದ ಎಷ್ಟೋ ಜನರನ್ನು ಬದುಕಿಸಿದ್ದಾರೆ.ದೋಣಿಗಳಿಗೆ ನೀರು ಸರಬರಾಜು ತನ್ನ ನಿತ್ಯ ಕಾಯಕದೊಂದಿಗೆ ಸುಮಾರು 20 ವರ್ಷಗಳಿಂದ 24 ಗಂಟೆ ಈ ಸಮಾಜಕ್ಕೆ ತನ್ನನ್ನು ಮೀಸಲಿಟ್ಟಿದ್ದಾರೆ. ಆದರೆ ಇವರ ಸಮಾಜ ಸೇವೆಗೆ ಸರ್ವಜನಿಕರಿಂದ ಇನ್ನಷ್ಟು ಪ್ರೋತ್ಸಾಹ ಜೊತೆಗೆ ಮಕ್ಕಳ ಪೋಷಣೆಗೂ ಸಹಾಯ ಬೇಕಾಗಿದೆ.
ಈಶ್ವರ್ ಮಲ್ಪೆ 9663434415
ವರದಿ: ಈಶ್ವರ್ ಸಿ ನಾವುಂದ.
ಚಿಂತಕ -ಬರಹಗಾರ.