ಮೂಡ್ಲಕಟ್ಟೆ(ಡಿ.30): ವಿದ್ಯಾರ್ಥಿಗಳ ಪರಿಪೂರ್ಣ ಅಭಿವೃದ್ಧಿಯ ದೃಷ್ಟಿಕೋನದಿಂದ ಅನೇಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವ ಕುಂದಾಪುರದ ಪ್ರತಿಷ್ಠಿತ ಸಂಸ್ಥೆಯಾದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ತಾಂತ್ರಿಕ ಕ್ಷೇತ್ರದಲ್ಲಿ ನಾವೀನ್ಯತೆ ಯನ್ನು ಹೆಚ್ಚಿಸುವ ಉದ್ದೇಶದಿಂದ ಐಇಇಇ ವಿದ್ಯಾರ್ಥಿ ಶಾಖೆ ಆರಂಭಿಸಿದ್ದು ಅದರ ಉದ್ಘಾಟನಾಕಾರ್ಯಕ್ರಮ ಡಿ.30 ರಂದು ನಡೆಯಿತು.
ಮುಖ್ಯ ಅತಿಥಿಯಾಗಿ ಐಇಇಇ ಮಂಗಳೂರು ಉಪ ವಿಭಾಗದ ಅಧ್ಯಕ್ಷರಾದ ಡಾ| ಪುಷ್ಪರಾಜ್ ಶೆಟ್ಟಿ ಯ ವರು ಭಾಗವಹಿಸಿ ಐಇಇಇ ವಿದ್ಯಾರ್ಥಿ ಶಾಖೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ಇನ್ನೋರ್ವ ಅತಿಥಿಯಾದ ಮಣಿಪಾಲ್ ಡಾಟ್ ನೆಟ್ ಕಂಪೆನಿಯ ಸಂಶೋಧನೆ ಮತ್ತು ತರಬೇತಿ ವಿಭಾಗದ ನಿರ್ದೇಶಕರಾದ ಡಾ|ಯು.ಸಿ ನಿರಂಜನ್ ಉಪಸ್ಥಿತರಿದ್ದು ಪ್ರಸ್ತುತ ಕಾಲಘಟ್ಟದಲ್ಲಿ ಲಭ್ಯವಿರುವ ಎಲ್ಲಾ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಐಇಇಇ ಮಂಗಳೂರು ಉಪವಿಭಾಗದ ಮುಂಬರುವ ವರ್ಷದ ಅಧ್ಯಕ್ಷರಾಗಲಿರುವ ಡಾ| ಪೂರ್ಣಲತ ರವರು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ವಿಚಾರಗೋಷ್ಠಿ ಆಯೋಜಿಸಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಐಇಇಇ ಮಂಗಳೂರು ಉಪವಿಭಾಗದ ಕಾರ್ಯದರ್ಶಿ ಡಾ| ಮೋಹಿತ್. ಪಿ. ರವರು ಮಾತನಾಡಿ ಐಇಇಇ ಘಟಕದ ಸದಸ್ಯತ್ವದ ಮಹತ್ವದ ಕುರಿತು ವಿವರಿಸಿ ಅದರ ಉಪಯೋಗವನ್ನು ಹೇಗೆ ಪಡೆದುಕೊಳ್ಳಬೇಕು ಎಂದು ತೋರಿಸಿಕೊಟ್ಟರು. ಅಧ್ಯಕ್ಷೀಯ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಚಂದ್ರರಾವ್ ಮದಾನೆ ಅವರು ಮಾತನಾಡಿ ಶಾಖೆಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡು ವಿಶೇಷ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಪ್ರೊ. ವರುಣ ಕುಮಾರ್,ಉಪ ಪ್ರಾಂಶುಪಾಲರು, ಡೀನ್, ಎಲ್ಲಾ ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಅಮರ್ ಸ್ವಾಗತಿಸಿದರು. ಇ&ಸಿ ವಿಭಾಗದ ಮುಖ್ಯಸ್ಥರಾದ ಪ್ರೊ. ಬಾಲನಾಗೇಶ್ವರ ವಂದಿಸಿದರು. ಇ&ಸಿ ವಿಭಾಗದ ಪ್ರೊ. ಸೂಕ್ಷ್ಮ ಅಡಿಗ ಕಾರ್ಯಕ್ರಮ ನಿರ್ವಹಿಸಿದರು.