ಅಮ್ಮ ಎಂದರೆ ಎನೋ ಹರುಷವು ನಮ್ಮ ಪಾಲಿಗೆ ಅವಳೇ ದೈವವೂ……….ಸೋಲು ಎಂದರೆ ಬಾಕಿ ಉಳಿದ ಸವಾಲು ,ಮರಳಿ ಪ್ರಯತ್ನಿಸು ಎಂದರ್ಥವಂತೆ .ಗೆಲುವು ಎಂದರೆ ಇನ್ನೂ ಕಾಲಹರಣ ಮಾಡುವುದು ಸೂಕ್ತವಲ್ಲ ಎಂದರ್ಥವಂತೆ ..ಶಬ್ದಕೋಶ ದಲ್ಲೂ ಸಿಗದ ಅರ್ಥವನ್ನು ,ಬದುಕಿನ ದೊಡ್ಡ ಸಂಕಷ್ಟವನ್ನು ಸರಳವಾಗಿಯೇ ಬಗೆಹರಿಸುವಂತೆ ತಿಳಿ ಹೇಳುವ ಅವಳ ಮಾತು ಇನ್ನೇಲ್ಲೋ ನೆನಪಾಗಿ ಆ ವಿಷಯವೇ ಶಕ್ತಿ ತುಂಬುವುದುಂಟು ಮರಳಿ ಹೋರಾಟ ನಡೆಸಲು….
ಹಾ,ಪ್ರೀತಿ ಕುರುಡು ಎನಿಸಿಕೊಂಡಿದ್ದು ಇವಳಿಂದಲೇ ಎನೋ !! ಕಾಣದೇನೇ ಅವಳು ನಮ್ಮನ್ನ ಪ್ರೀತಿಸಲು ಶುರುಮಾಡಿಕೊಂಡಿದ್ದಾಗಲಿಂದ.
“ಹೆತ್ತವರಿಗೆ ಹೆಗ್ಗಣ ಮುದ್ದು ” ಎಂಬ ಆಡೋ ಮಾತು ನಿಜವೇ ಆಗಿತ್ತು.ಅಪ್ಪನ ಮುದ್ದು ಅಲ್ಲೆಲ್ಲೋ ಗದರಿ ಒರಟಾಗಿ ಹೇಳುತ್ತಿದ್ದರೆ ,ಅಮ್ಮ ಅದೇ ವಿಷಯವನ್ನು ಮೃದುವಾಗಿ ತಿಳಿ ಹೇಳುತ್ತಿದ್ದಳು.ಇದರ ಅರ್ಥ ಅವಳು ಗದರಿದ್ದೇ ಇಲ್ಲವೇ !!,ಹಾ,ಅದೇನೋ ವಿಚಿತ್ರ ಅವಳ ಒಂದು ನೋಟ ಇಡೀ ಕಥೆಯನ್ನೇ ವರ್ಣಿಸುತ್ತದೆ.ನಮ್ಮನ್ನ ನಿಯಂತ್ರಿಸಲೂ ಅಷ್ಟೇ ಸಾಕಾಗಿತ್ತು.ಇನ್ನೂ ಅವಳ ಕೋಪ ಗೋಡೆ ಪಾತ್ರೆಗಳ ಜೊತೆ ಕೋಪ ಕರಗುವಷ್ಟು ಒದರುವಳು.ಇನ್ನೂ ಹೆಚ್ಚಾದ ಕೋಪ…..ಬೇಜಾರಾಗಿ ಬದಲಾಗುವುದು.ಆ ಘಳಿಗೆ ಕಣ್ಣ್ ಜಾರಿದ ಹನಿಯ ,ಯಾರು ಕಾಣದಂತೆ ಅಲ್ಲೇಲ್ಲೋ ಕೋಣೆಯ ಕೊನೆ ಕಡೆ ಸರಿದು ಕಣ್ಣೊರೆಸಿಕೊಳ್ಳುವಳು.ಎನೂ ಆಗದಂತೆ ಅತ್ತಿತ್ತ ಗಡಿಬಿಡಿ ಮಾಡಿಕೊಂಡು ಓಡಾಡುತ್ತಾ ಅವಳೇ ಸಮಾಧಾನಿಸಿಕೊಳ್ಳುವಳು.ಇನ್ನೂ ಅವಳ ಕೆಟ್ಟ ಕೋಪದಲ್ಲೂ ನಗುತ್ತಲೇ ಉತ್ತರಿಸುವುದನ್ನು ನೋಡಿದ್ದೆ.
ಇನ್ನೂ ಇವಳಷ್ಟು ಲೆಕ್ಕದಲ್ಲಿ ಪಕ್ಕಾ ಯಾರು ಕೂಡ ಇರಲೂ ಸಾಧ್ಯವಿಲ್ಲ.ಅವಳ ಮಕ್ಕಳಿಗೆ ಪ್ರತಿ ವಸ್ತು ವಿಷಯದಲ್ಲೂ ಸರಿ ಪಾಲು ಸಮ ಬಾಳು .ಆದರೂ ಇಂಥ ಚತುರೆಯ ಲೆಕ್ಕ ತಪ್ಪುವುದು ಊಟ -ತಿಂಡಿ ವಿಚಾರದಲ್ಲೇ .ಎರಡು ದೋಸೆ ಎಂದರೆ ,ನಾಲ್ಕು ದೋಸೆ ಹಾಕಿ ಕಣ್ಣು ಬಿಡುತ್ತಾ ನಿಂತು ಬಿಡುತ್ತಾಳೆ.ಅದನ್ನೆಲ್ಲಾ ಮುಗಿಸಿದರೆ ಅವಳ ಖುಷಿಗೆ ಪಾರವೇ ಇರುವುದಿಲ್ಲ.ಇಂಥ ಚಿಕ್ಕ ಪುಟ್ಟ ವಿಷಯದಲ್ಲಿ ಅವಳ ಜೀವನವೇ ಅಡಗಿದೆ.
ಅದೇನೋ ಜಾದು ಅವಳ ಅಡುಗೆಯಲ್ಲಿ ,ಲೋಕ ಸುತ್ತು ಹಾಕಿದರೂ ಆ ರುಚಿ ಸಿಗುವುದಿಲ್ಲ.ಅವಳ ಹೃದಯ ವೈಶಾಲ್ಯತೆ ಎಷ್ಟರಮಟ್ಟಿಗೆ ಎಂದರೆ ಮನೆಗೆ ಬಂದ ಅತಿಥಿಗಳನ್ನು ,ಇರುವೆಗಳ ತನಕ ಖಾಲಿ ಹೊಟ್ಟೆಯಲ್ಲಿ ಕಳುಹಿಸುವವಳಲ್ಲ.ಆಕೆ ಲೋಕ ಮಾತೆ .ನಮ್ಮ ಮನೆ-ಮನಗಳ ಕಾಯುವ ದೇವತೆಯಾಗಿಯೇ ಉಳಿದಿದ್ದಾಳೆ. ನಮ್ಮೆಲ್ಲಾ ಕೆಲಸಗಳನ್ನು ಮಾಡುತ್ತಿರುವುದು ನಾವಾದರೂ ,ಅದೆಲ್ಲಾ ಜವಾಬ್ದಾರಿ ,ಹೊಣೆಗಾರಿಕೆಯ ಹೊರೆ ಅವಳೇ ವಹಿಸಿಕೊಂಡು ಬಿಡುವಳು.
ಇನ್ನೂ ಅವಳೆಂಥಾ ಮಾತುಗಾತಿ ,ದಿನವಿಡೀ ಎನಾದರೊಂದು ಗುನುಗುತ್ತಲೇ ಇರುವಳು.ಸುಸ್ತೇ ಆಗುವುದಿಲ್ಲವೇ !? ಆಕೆ ಎಲ್ಲದರಲ್ಲೂ ಗಟ್ಟಿಗಿತ್ತಿನೇ ಆಗಿದ್ದಳು.ಅವಳಿಗೆ ಸರಿಸಾಟಿ ಯಾರಿರಲೂ ಸಾಧ್ಯವೇ ಇಲ್ಲ.
ನನ್ನ ಈ ಅಸ್ತಿತ್ವಕ್ಕೆ ಇವಳಲ್ಲವೇ ಕಾರಣ .ನನ್ನ ಇಂದಿನ ಧೈರ್ಯ ಅವಳದ್ದೇ ಅಲ್ಲವೇ !!ಈ ನನ್ನ ಗಟ್ಟಿತನ ಅವಳ ಕೊಡುಗೆ ತಾನೆ ,ನಾ ಆಡೋ ಮಾತುಗಳು ನೀನೇ ಹೇಳಿಕೊಟ್ಟಿದ್ದಲ್ಲವೇ ??ನನ್ನ ನಗೂ ನಿನ್ನದೇ ಪ್ರತಿರೂಪ ವಲ್ಲವೇ !ನನ್ನ ಈ ಬದುಕು ,ನೀನೇ ಕಟ್ಟಿಕೊಟ್ಟ ಬುತ್ತಿಯಲ್ಲವೇ ?ಅತ್ತಾಗ ಆಸರೆ ನೀನು ,ನೊಂದಾಗ ಸಮಾಧಾನ ನೀನು..ನಾ ಹೇಗೆ ವರ್ಣಿಸಲಿ ಪದಗಳಲಿ ನಿನ್ನನ್ನು ,ಇನ್ನೂ ಹೇಳಿದರೆ ಮತ್ತಷ್ಟು …ಮುಂದುವರೆಸಿದರೆ ಮುಗಿಯದಷ್ಟು..
ನಿನ್ನ ಬಣ್ಣಿಸಲೂ ಪದಗಳ ಕೊರತೆ ,ನೀ ನಿಲ್ಲದೇ ಮುಂದುವರೆಯದು ನನ್ನ ಈ ಕತೆ..
ಪ್ರತಿ ಹೆಜ್ಜೆಗೆ ಸ್ಪೂರ್ತಿ ನೀನೇ ,ಕಥೆ ನನ್ನದಾದರೂ ಕಥಾ ನಾಯಕಿ ನೀನೇ ‘ಗಟ್ಟಿಗಿತ್ತಿ ‘……….
-ಲೇಖನ : ಅರ್ಚನಾ ಕುಂದಾಪುರ