ಪುತ್ತೂರು(ಜ.21): ಮಾನವನ ಪಾಲಿಗೆ ರಕ್ತ ಜೀವದ್ರವ, ರಕ್ತದಾನದ ಕುರಿತು ಅರಿವು ಅತ್ಯವಶ್ಯಕ ಎಂದು ಪುತ್ತೂರಿನ ರೋಟರಿ-ಕ್ಯಾಂಪ್ಕೋ ಬ್ಲಡ್ ಬ್ಯಾಂಕಿನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್.ಕೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಯೂತ್ ರೆಡ್ಕ್ರಾಸ್ ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ನಗರ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಶ್ರೀರಾಮ ಸಭಾ ಭವನದಲ್ಲಿ ಏರ್ಪಡಿಸಿದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತಾಡಿದರು. ಕಾಯಿಲೆ, ಶಸ್ತ್ರಚಿಕಿತ್ಸೆ, ಅಪಘಾತಗಳ ಸಂದರ್ಭದಲ್ಲಿ ರಕ್ತನಾಶವಾದಾಗ ಅದಕ್ಕೆ ಪರ್ಯಾಯವಾಗಿ ಮಾನವನ ರಕ್ತವನ್ನೇ ನೀಡಬೇಕು. ಸರಿಯಾದ ಸಮಯದಲ್ಲಿ ರಕ್ತದಾನ ಮಾಡಿದರೆ ಒಂದು ಜೀವವನ್ನೇ ಉಳಿಸಬಹುದು ಎಂದರು.
ರೋಟರಿ ಕ್ಲಬ್ ಪುತ್ತೂರು ನಗರ ಇದರ ಮುಂದಿನ ಸಾಲಿಗೆ ಆಯ್ಕೆಯಾಗಿರುವ ಅಧ್ಯಕ್ಷ ಪ್ರಶಾಂತ್ ಶೆಣೈ ಮಾತನಾಡಿ ಸೀಮಿತ ಅವಧಿಯವರೆಗೆ ಮಾತ್ರ ರಕ್ತವನ್ನು ಶೇಖರಿಸಿ ಇಡಬಹುದಾದ್ದರಿಂದ ಇಂತಹ ಶಿಬಿರಗಳನ್ನು ಆಗಾಗ ಆಯೋಜಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಮಾತನಾಡಿ ರಕ್ತಕ್ಕೆ ರಕ್ತವೇ ಪರ್ಯಾಯ, ಜಾತಿ ಧರ್ಮಗಳನ್ನು ಮೀರಿದ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ರಕ್ತದಾನ ಪ್ರಕ್ರಿಯೆ ನಿಜಾರ್ಥದಲ್ಲಿ ಜೀವದಾನದ ಕೆಲಸವೇ ಆಗಿದೆ ಎಂದರು. ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ನೀಡುವ ಪರಿಕಲ್ಪನೆಯ ಭಾಗವಾಗಿ ಸಂಸ್ಥೆಯಲ್ಲಿ ಇಂತಹ ಸಮಾಜಮುಖೀ ಚಟುವಟಿಕೆಗಳು ನಿರಂತರ ನಡೆಯುತ್ತವೆ ಎಂದರು.
ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ಡಾ.ಮಹೇಶ್ಪ್ರಸನ್ನ.ಕೆ ಆವಶ್ಯಕತೆಯ ಅರ್ಧದಷ್ಟು ಮಾತ್ರ ರಕ್ತ ಸಕಾಲದಲ್ಲಿ ಸಿಗುತ್ತಿದ್ದು, ಈ ಅಗತ್ಯತೆಯನ್ನು ಪೂರೈಸಲು ಸ್ವಯಂಪ್ರೇರಿತ ರಕ್ತದಾನ ಶಿಬಿರಗಳ ಪಾತ್ರ ಗಣನೀಯ ಎಂದರು. ಸುದ್ದಿ ಪತ್ರಿಕೆಯ ಭ್ರಷ್ಟಾಚಾರ ವಿರೋಧಿ ಆಂದೋಲದ ಬಗ್ಗೆ ಪ್ರಸ್ತಾಪಿಸಿದ ಅವರು ಭಾರತವನ್ನು ಭ್ರಷ್ಚಾಚಾರ ಮುಕ್ತ ದೇಶವನ್ನಾಗಿಸುವತ್ತ ಯುವಜನತೆ ಕಂಕಣ ಬದ್ದರಾಗಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಭ್ರಷ್ಚಾಚಾರ ಮುಕ್ತ ಪ್ರತಿಜ್ಞಾ ವಿಧಿಯನ್ನು ಅವರು ಬೋಧಿಸಿದರು. ಕಾಲೇಜಿನ ಯೂತ್ ರೆಡ್ಕ್ರಾಸ್ ಘಟಕ ಸಂಯೋಜಕ ಪ್ರೊ.ಅಜಯ್ ಶಾಸ್ತ್ರೀ ವಂದಿಸಿದರು. ವಿದ್ಯಾರ್ಥಿ ಶ್ರೀನಿಧಿ ಕಾರ್ಯಕ್ರಮ ನಿರ್ವಹಿಸಿದರು.