ವಕ್ವಾಡಿ(ಜ.24): ವಕ್ವಾಡಿಯಲ್ಲಿ ನಡೆಯುತ್ತಿರುವ ವಾರಾಹಿ ಕಾಲುವೆ ಯೋಜನೆ, ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆ ತಂದೊಡ್ಡುತ್ತಲೇ ಇದೆ.
ಈ ಎಲ್ಲ ಸಮಸ್ಯೆಗಳನ ಕುರಿತು, ಸ್ಥಳಿಯರು, ಗ್ರಾಮ ಪಂಚಾಯತ್ ನೊಂದಿಗೆ ಸೇರಿ ಅನೇಕ ಬಾರಿ ಕಂಪೆನಿ ಯೊಂದಿಗೆ ಸಭೆ ನಡೆಸಿ, ಸಮಸ್ಯೆ ಗಳ ಶೀಘ್ರ ಪರಿಹಾರ ಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ.
ಇದೀಗ ಈ ಕಾಮಗಾರಿ ನಡೆಸುತ್ತಿರುವ ಕಂಪೆನಿ ಯ ಔದಾಸಿನ್ಯಕ್ಕೆ ಹಿಡಿದು ಕೈಗನ್ನಡಿಯಂತೆ, ಬೇಕು ಬೇಕಾದಲ್ಲಿ ಹೊಂಡ ತೆರೆದು, ಕಾಮಗಾರಿ ನಡೆಯುತ್ತಿರುವ ಕುರಿತು ಯಾವುದೇ ಫಲಕಗಳನ್ನು ಅಳವಡಿಸದೆ, ಬದಲೀ ರಸ್ತೆಯನ್ನು ಬಳಸುವ ಕುರಿತು ಯಾವುದೇ ಸೂಕ್ತ ಚಿನ್ಹೆಗಳನ್ನು ಹಾಕದೇ, ಹೊಂಡದ ಸುತ್ತ ಎತ್ತರದ ಮಣ್ಣಿನ ದಿಬ್ಬವನ್ನೂ ಮಾಡದೇ 25-30 ಅಡಿಗಳಷ್ಟು ಆಳ ಕೊರೆದು, ಸೇತುವೆ ನಿರ್ಮಿಸುತ್ತಿರುವ ಕಂಪೆನಿಯ ಬೇಜವಾಬ್ದಾರಿ ತನಕ್ಕೆ ಯುವಕನೋರ್ವ ಜೀವದ ದಂಡ ತೆತ್ತುವ ಪರಿಸ್ಥಿತಿ ಬಂದೊದಗಿದೆ.

ಕೋಟೇಶ್ವರದ ಕಾಗೇರಿಯ ಪೆಟ್ರೋಲ್ ಬಂಕ್ ಒಂದರಲ್ಲಿ ದುಡಿಯುವತ್ತಿರುವ ಶಾನಾಡಿಯ ಯುವಕ ರಂಜಿತ್ (21) ಆ ದುರ್ದೈವಿ. ಮುಂಜಾನೆ ಕೆಲಸಕ್ಕೆಂದು ಬೈಕ್ ಏರಿ ಹೊರಟಿದ್ದ ರಂಜಿತ್, ವಕ್ವಾಡಿ ಯು ವಿಶ್ವಬ್ರಾಹ್ಮಣ ಪುರ ರಸ್ತೆಯ ಲ್ಲಿ ನಡೆಯುತ್ತಿರುವ, ವಾರಾಹಿ ಕಾಲುವೆ ಯ ಸೇತುವೆ ನಿರ್ಮಾಣದ ಹೊಂಡಕ್ಕೆ ಬಿದ್ದು ಈಗ ಆಸ್ಪತ್ರೆ ಸೇರುವಂತಾಗಿದೆ.

ಬೈಕ್ ಸಮೇತನಾಗಿ ಹೊಂಡಕ್ಕೆ ಬಿದ್ದ ಯುವಕನಿಗೆ ಸೇತುವೆ ಪಿಲ್ಲರ್ಗಳಲ್ಲಿರುವ ತೆರೆದ ಕಬ್ಬಿಣದ ಸರಳುಗಳು ಮಾರಣಾಂತಿಕ ಗಾಯಗಳನ್ನುಮಾಡಿದ್ದರೆ, ಬೈಕ್ ನ ಮುಂಬಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಪಕ್ಕದಲ್ಲೇ ಇದ್ದ ಮನೆಯವರ ಸಹಾಯದಿಂದ ಯುವಕನನ್ನು ಮೇಲಕೆತ್ತಿ, ಕೂಡಲೇ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆ, ಹೊಟ್ಟೆ ಮತ್ತು ಬೆನ್ನಿಗೆ ಸಾಕಷ್ಟು ಏಟಾಗಿರುವ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಯುವಕನನ್ನು ಮಣಿಪಾಲಕ್ಕೆ ಕರೆದೊಯ್ಯುವ ಅನಿವಾರ್ಯತೆಯೂ ಎದುರಾಗಿದೆ.

ಇಷ್ಟೆಲ್ಲ ಆದರೂ ಕೂಡ, ಕಾಮಗಾರಿ ನಡೆಸುತ್ತಿರುವ ಸಂಸ್ಥೆಯ ಮೇಲ್ವಿಚಾರಕರಾಗಲೀ, ಇಂಜಿನಿಯರ್ ಗಳಾಗಲಿ ಇನ್ನು ಸ್ಥಳಕ್ಕೆ ಭೇಟಿ ನೀಡಿಲ್ಲ. ಯುವಕನಿಗೆ ಪರಿಹಾರ ನೀಡುವ ಕುರಿತು ಸಮರ್ಪಕ ಉತ್ತರ ವನ್ನೂ ನೀಡಿಲ್ಲ. ಘಟನೆ ಜರುಗಿದೆ ಕೆಲ ನಿಮಿಷಗಳಲ್ಲೆ ಹೊಂಡದ ಸುತ್ತ ಮಣ್ಣಿನ ದಿಬ್ಬ ನನ್ನು ಮಾಡಿ, ಅಪಾಯದ ಬೋರ್ಡನ್ನು ಅಳವಡಿಸಿ, ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನೂ ಕಾಮಗಾರಿ ನಡೆಯುತ್ತಿರುವ ಸಂಸ್ಥೆ ನಡೆಸಿದೆ.

ಕಾಮಗಾರಿ ನಡೆಸುತ್ತಿರುವ ಸಂಸ್ಥೆಯ ಬೇಜವಾಬ್ದಾರಿ ಯುತ ನಡೆಗೆ ಸ್ಥಳಿಯರಿಂದ ಆಕ್ರೋಶ ವ್ಯಕ್ತವಾಗಿದ್ದು, ಯುವಕನಿಗೆ ಸೂಕ್ತ ಪರಿಹಾರ ನೀಡುಂತೆ ಮತ್ತು ಕಾಮಗಾರಿ ಕುರಿತಂತೆ ಸೂಚನಾ ಫಲಕಗಳನ್ನು ಅಳವಡಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.












