ವೇಣೂರು ( ಏ,20):: ಮೌಲ್ಯಧಾರಿತ ಜೀವನ ರೂಪಿಸಿಕೊಳ್ಳಲು ಎನೆಸ್ಸೆಸ್ ಸಹಕಾರಿ. ಶಿಕ್ಷಣದ ಜತೆ ನಮ್ಮ ವ್ಯಕ್ತಿತ್ವವು ಶಕ್ತಿಯಾಗಿ ಹೊರಹೊಮ್ಮಲಿ ಎಂದು ವೇಣೂರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಅರುಣ್ ಕ್ರಾಸ್ತ ಹೇಳಿದರು.
ಅವರು ಬಜಿರೆ ಸ.ಉ.ಪ್ರಾ. ಶಾಲೆಯ ಸಭಾಂಗಣದಲ್ಲಿ ರವಿವಾರ ಜರಗಿದ ಮೂಡಬಿದಿರೆ ಶ್ರೀ ಧವಲಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಧವಲಾ ಕಾಲೇಜಿನ ಪ್ರಾಚಾರ್ಯ ಡಾ| ಸುದರ್ಶನ ಕುಮಾರ್ ಅಧ್ಯಕ್ಷತೆ ವಹಿಸಿ, ಶುಭ ಹಾರೈಸಿದರು.
ಧವಲಾ ಕಾಲೇಜು ಡಿ.ಜೆ.ವಿ. ಸಂಘದ ಕಾರ್ಯದರ್ಶಿ ಅಭಿಜಿತ್ ಎಂ. ಮಾತನಾಡಿ, ಎನ್ನೆಸ್ಸೆಸ್ ಶಿಬಿರವು ಸಿನೆಮಾದ ಟ್ರೇಲರ್ ಇದ್ದಂತೆ. ಶಿಬಿರದ ತರಬೇತಿ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳುತ್ತದೆ ಎಂದರು. ವೇಣೂರು ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ ಡಿ., ಸದಸ್ಯರುಗಳಾದ ಸುನಿಲ್ ಕುಮಾರ್, ಮಲ್ಲಿಕಾ ಹೆಗ್ಡೆ, ಲೀಲಾವತಿ, ಸುಜಾತ, ಬಜಿರೆ ಶಾಲೆಯ ಮುಖ್ಯ ಶಿಕ್ಷಕಿ ಕಮಲಾಜಿ ಎಸ್. ಜೈನ್, ಎಸ್ಡಿಎಂಸಿ ಅಧ್ಯಕ್ಷ ಶಿವಾನಂದ ಗೌಡ, ಉಪಾಧ್ಯಕ್ಷ ಪ್ರಸನ್ನ ಜೈನ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಿ. ಶಶಿಕುಮಾರ್ ಇಂದ್ರ, ಘಟಕದ ನಾಯಕರುಗಳಾದ ರೋಹಿತ್ ಕುಮಾರ್, ಸಾಕ್ಷ, ನಂದಿತಾ, ಸುಪ್ರಿತಾ, ರೋಶನ್ ಕುಮಾರ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಸಮ್ಮಾನ ಭಾರತೀಯ ವಾಯುಪಡೆಗೆ ಆಯ್ಕೆಯಾಗಿರುವ ಯೋಧ ಸುಜಿತ್ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ಸುಭೀಕ್ಷಾ ಬಳಗ ಪ್ರಾರ್ಥಿಸಿ, ಶಿಬಿರಾಧಿಕಾರಿ ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಸಾಕ್ಷ ನಿರೂಪಿಸಿ, ಶಿಬಿರಾಧಿಕಾರಿ ಯಶೋಧ ವಂದಿಸಿದರು.