” ಕುಣಿಸಲು ನೀನು ಕುಣಿವೇನು ನಾನು ……..ನೀ ಸೂತ್ರಧಾರಿ ನಾ ಪಾತ್ರಧಾರಿ “ಎನ್ನುವ ಸಾಲು ಪ್ರತಿ ವ್ಯಕ್ತಿಯ ಜೀವನ ಬಂಡಿಯ ಚಲನೆಗೆ ಒಂದು ನಿದರ್ಶನ. ಭೂಮಿ ನಮ್ಮದಲ್ಲ, ಗಾಳಿ ನಮ್ಮದಲ್ಲ, ಈ ನಾಲ್ಕು ದಿನದ ಜೀವನದಲ್ಲಿ ಚಿರಾಸ್ಥಾಯಿಯಾಗಿ ಉಳಿಯುವು ಸತ್ಕರ್ಮವಷ್ಟೇ! ಜೀವನಕ್ಕೇನು? ನಿರ್ಜೀವ ವಸ್ತುಗಳಿಗೂ ಕೂಡ ಹುಟ್ಟು , ವಿಕಾಸ ಹಾಗೂ ಅವನತಿ ಎನ್ನುವ ಜೀವನದ ಹಂತವಿರುತ್ತದೆ. ಆದರೆ ಈ ಜೀವನದಲ್ಲಿ ಅವಶ್ಯವಾಗಿರುವುದು ಜೀವಿಸುವುದು ಹಾಗೂ ನಿರರ್ಥಕ ಜೀವನವನ್ನು ಸಾರ್ಥಕವನ್ನಾಗಿಸಿಕೊಂಡು ಬದುಕಿನಲ್ಲಿ ಸಂತ್ರಪ್ತಿಯನ್ನು ಪಡೆಯುವುದು.

ಅದು ಹೆಸರಿಗೆ ಮಾತ್ರ ಗೊಂಬೆಮನೆ. ಆದರೆ, ಅಲ್ಲಿ ಜೀವತಳೆದಿದ್ದು ಗೊಂಬೆಗಳಲ್ಲ, ಬದಲಾಗಿ ಗೊಂಬೆ ಮಾಂತ್ರಿಕ ಭಾಸ್ಕರ್ ಕೊಗ್ಗ ಕಾಮತರ ಕನಸು. ನಿರ್ಜೀವ ಗೊಂಬೆಗಳ ಭಾವನೆ ತಾಳಕ್ಕೆ ತಕ್ಕಂತೆ ಮನದಲ್ಲಿ ರಾಗ ಹಾಕುತ್ತಿದ್ದ ಕೈಯಲ್ಲಿ ಚಪ್ಪಾಳೆ ತಟ್ಟಿದ ಪ್ರತಿಯೊಬ್ಬ ವಿದ್ಯಾರ್ಥಿಯ ಮನ, ಆ ಮುದ್ದುಮಕ್ಕಳ ಪರಿಶುದ್ಧ ನಗು. ಕಲಾ ಸರಸ್ವತಿ ಗುಡಿ ಗೋಪುರದಲ್ಲಿ ಪೂಜೆಗೈಯುವವಳಲ್ಲ, ಧನಕನಕದಿಂದ ಹೊಳೆಯುವವಳಲ್ಲ, ಸ್ವರ್ಣ ಗೋಪುರದ ಗರ್ಭಗುಡಿಯಲ್ಲಿ ನೆಲೆಸುವವಳು ಅಲ್ಲ,ನೈವೇದ್ಯದ ಅವಶ್ಯಕತೆ ಇಲ್ಲ,ಆ ತಾಯಿಗೆ ಕಲಾವೇದಿಕೆಯೇ ದೇವಾಲಯ, ಕಲಾ ಸಮರ್ಪಣೆಯೇ ಆಭರಣ, ಕಲಾರಸಿಕರ ಮನವೇ ಗರ್ಭಗುಡಿ, ಕಲಾಸೇವೆಯೇ ಮಹಾಯಾಗ.

ಅದಕ್ಕಾಗಿಯೇ ಅಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಕಲಾವಿದರ ಕಂಗಳಲ್ಲೂ ಆ ಸಾರ್ಥಕತೆ ನೋಟ ಕಂಗೊಳಿಸಿತ್ತಿದ್ದು, ಬಣ್ಣ ಹಚ್ಚಿ, ವೇದಿಕೆಗಿಳಿದು ಗೊಂಬೆಯ ಸೂತ್ರವನ್ನು ಹಿಡಿದು ಗೊಂಬೆಯನ್ನು ಆಡಿಸುತ್ತಾ ಗೊಂಬೆಗಿಂತ ಒಂದು ಹೆಜ್ಜೆ ಜಾಸ್ತಿ ಕುಣಿದ ಕಲಾವಿದರ ಕಂಗಳಲಿ ಹುರುಪು -ಹುಮ್ಮಸ್ಸು ಅಗಾದ ಸಮುದ್ರದ ತೆರೆಗಳಂತೆ ಅಪ್ಪಳಿಸುತ್ತಿತ್ತೇ ಹೊರತು ಎಂದೂ ಕುಗ್ಗಲಿಲ್ಲ. ಅವರ ಆ ಹುಮ್ಮಸ್ಸಿಗೆ ಏನೋ ಕೈಗಳ ಚಪ್ಪಾಳೆ ಸೇವೆ ಒಂದೇ ಸಮನೆ ನಡೆಯುತ್ತಲೇ ಇತ್ತು.

ಜಾಂಬವನ ಆ ಮುಖ ರಾಕ್ಷಸ ಗೊಂಬೆಯ ಆ ಕ್ರೋಧ, ಆಮೆಯ ನಡೆತ, ಮಾತನಾಡುವ ಗೊಂಬೆಯ ಆ ಮಾತು, ನರ್ತಕಿ ಗೊಂಬೆಯ ನ್ರತ್ಯ, ಕೋಲಾಟದ ಅದೊಂದು ಚಿಕ್ಕ ಗುಂಪು ಹಾಗೂ ಪುಟಾಣಿ ಹನುಮನ ರೂಪ, ಜಾಗತಿಕ ತಾಪಮಾನದಿಂದಾಗಿ ಹಸಿರುಭೂಮಿಯನ್ನೇ ಸೀಳಿಬಂದ ಆ ಆಸ್ತಿ ಪಂಜರ….. ಇನ್ನೂ ಹತ್ತು ಹಲವು ಕಲಾವಿದನ ಯೋಚನೆಯ ಮತ್ತಷ್ಟು ಕುಂಚಗಳು. ಕಲೆ ಎನ್ನುವುದು ಪರಿಶುದ್ಧ ಮಾನವ ಧರ್ಮ, ಸಂಸ್ಕೃತಿ ಹಾಗೂ ಬದುಕಿನ ಕೈಗನ್ನಡಿ. ಇದರಲ್ಲಿ ಯಾವುದೇ ಭಾಷೆ,ಧರ್ಮ, ದೇಶಗಳ ಗಡಿಯಿಲ್ಲ ಎನ್ನುವುದನ್ನು ಮ್ಯೂಸಿಯಂನಲ್ಲಿ ಇರಿಸಲಾದ ಬಿತ್ತಿಯಲ್ಲಿ ಅರಳಿದ ಒಂದೊಂದು ಗೊಂಬೆಗಳು ಸಾರುತಿತ್ತು. ಕಳೆದುಹೋಗುತ್ತಿರುವ,ನೈತಿಕತೆ, ಸಂಸ್ಕೃತಿ,ಸಂಪ್ರದಾಯ,ಕಲಾ ಪರಂಪರೆಯನ್ನು ಚಿಕ್ಕ ಮಗುವಿನಂತೆ ಎದೆಗೊತ್ತಿಕೊಂಡು ಪೋಷಿಸುತ್ತಿರುವ ಕಲಾ ಬಳಗದ ಕಾರಣದಿಂದಲೇ ಇಂದೂ ಕೂಡ ಭಾರತ ಸಂಸ್ಕೃತಿಯ ನೆಲೆಯಲ್ಲಿ ಶಿಖರವನ್ನೇರಿರುವುದು.

ಕಾಲ ಸರಿಯಿತಷ್ಟೇ, ಆದರೆ ಆ ಕಲಾವಿದರ ಕಂಗಳಲ್ಲಿ ಕಲೆಯನ್ನು ಉಣಬಡಿಸಬೇಕು ಎಂಬ ಕಾಂತಿಯಲ್ಲಿ ಕುಂದು ಕಾಣಿಸಲಿಲ್ಲ, ಇಂತಹ ಕಟ್ಟಕಡೆಯ ಕಲಾವಿದನ ಮನಸ್ಸುಗಳಲ್ಲಿ ಕಲೆ ಜೀವಂತವಾಗಿರುವುದರ ತನಕ ಕಲಾ ಸೇವೆಯು ಎಂದೆಂದಿಗೂ ನಿಲ್ಲದು .ಇದರ ಮಧ್ಯೆ ಆ ಮುದ್ದು ಮಗುವಿನ ನಿಲ್ಲದ ಹೆಜ್ಜೆ ನಿಲ್ಲದ ಮುಗ್ದತೆ ಎಂಥವರೆ ಆಗಲಿ ಯಾರೇ ಆಗಲಿ ಒಮ್ಮೆ ಹಿಂದಿರುಗಿ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತ್ತು. ಕಲೆಗಾಗಿ ನಮ್ಮ-ನಿಮ್ಮ ಒಂದು ಹಿಡಿ ಹಾರೈಕೆಯೂ ಕಲಾ ಸರಸ್ವತಿಗೆ ಅರ್ಪಿತ.

ಅಭಿನಯ. ಎ. ಶೆಟ್ಟಿ. ಪ್ರಥಮ ಬಿ .ಕಾಂ. ಸಿ ಡಾ. ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ









