ಯುವಜನತೆಯಲ್ಲಿ ಶಿಸ್ತು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವಲ್ಲಿ ಎನ್.ಸಿ.ಸಿ. ಯ ಪಾತ್ರ ಬಹುಮುಖ್ಯವಾದದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎನ್.ಸಿ.ಸಿ. ಗೆ ಸೇರ್ಪಡೆಗೊಂಡು ದೇಶದ ಸೈನ್ಯದಲ್ಲಿ ಗುರುತಿಸಿಕೊಳ್ಳಬೇಕು ಹಾಗೂ ದೇಶಸೇವೆಗೆ ಸದಾ ಸಿದ್ದರಾಗಬೇಕು ಎಂದು ಬೈಂದೂರಿನ ಶಾಸಕರು ಹಾಗೂ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ಅಧ್ಯಕ್ಷರಾಗಿರುವ ಶ್ರೀ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಅವರು ಕಾಲೇಜಿನ ನೂತನ ಎನ್.ಸಿ.ಸಿ. ಘಟಕದ ಉದ್ಘಾಟನೆ ನಡೆಸಿ ಮಾತನಾಡಿದರು. ಕಾಲೇಜಿನ ನೂತನ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಶ್ರೀ ಹುಂತ್ರಿಕೆ ಸುಧಾಕರ್ ಶೆಟ್ಟಿಯವರು ಮಾತನಾಡಿ ತನ್ನ ವಿದ್ಯಾರ್ಥಿ ಬದುಕಿನ ಎನ್.ಸಿ.ಸಿ. ಯ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಭಾರತೀಯ ಗಡಿಭದ್ರತಾ ಪಡೆಯ ನಿವೃತ್ತ ಯೋಧ ಶ್ರೀ ಗಣಪತಿ ಖಾರ್ವಿ ಬಸ್ರೂರು ಇವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಶಿವರಾಜ್. ಸಿ ನಾವುಂದ ಸ್ವಾಗತಿಸಿದರು. ಇಂಗ್ಲೀಷ್ ಉಪನ್ಯಾಸಕಿ ಅಮ್ರತಾ ಕಾರ್ಯಕ್ರಮವನ್ನು ನಿರೂಪಿಸಿದರು.