ಕುಂದಾಪುರ (ಜು,21): ಕಠಿಣ ಪರಿಶ್ರಮ, ನಿರ್ದಿಷ್ಟ ಗುರಿಯೊಂದಿಗೆ ಅಭ್ಯಸಿಸುವ ಯಾವುದೇ ವಿದ್ಯಾರ್ಥಿಯು ಕೂಡ ಸಿಎ/ಸಿಎಸ್ ಪರೀಕ್ಷೆಯನ್ನು ನಿರಾಂತಕವಾಗಿ ಪೂರ್ಣಗೊಳಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ಅಧ್ಯಕ್ಷ, ಚಾರ್ಟೆರೆಡ್ ಅಕೌಟೆಂಟ್ ಶಾಂತರಾಮ್ ಶೆಟ್ಟಿ ಹೇಳಿದರು .
ಅವರು ಕುಂದಾಪುರದ ಎಕ್ಸ್ಲೆಂಟ್ ಪಿಯು ಕಾಲೇಜಿನಲ್ಲಿ ಜು16ರಂದು ನಡೆದ ಸಿಎ/ಸಿಎಸ್ ಫೌಂಡೇಶನ್ ತರಗತಿಯನ್ನು ಉದ್ಘಾಟನೆಗೊಳಿಸಿ ಮಾತನಾಡಿದರು.
ಪಿಯುಸಿಯಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾದ ನಾನು ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಪೂರೈಸಿ ಈ ಹಂತಕ್ಕೆ ತಲುಪಿದ್ದೇನೆ. ಎಕ್ಸ್ಲೆಂಟ್ ಪಿಯು ಕಾಲೇಜು ಇಂತಹ ಗ್ರಾಮೀಣ ಪ್ರದೇಶದಲ್ಲಿ ಸಿಎ/ಸಿಎಸ್ ಕೊರ್ಸುಗಳ ಗುಣಮಟ್ಟದ ತರಬೇತಿ ನೀಡಲು ಹೊರಟಿರುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸುವರ್ಣ ಅವಕಾಶ ಎಂದರು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ, ಶಿಕ್ಷಪ್ರಭಾ ಅಕಾಡಮಿ ಸ್ಥಾಪಕರಾಗಿರುವ ಪ್ರತಾಪಚಂದ್ರ ಶೆಟ್ಟಿ ಮಾತನಾಡಿ ಹಲವಾರು ವಿದ್ಯಾರ್ಥಿಗಳಿಗೆ ಸಿಎ ಮತ್ತು ಸಿಎಸ್ ವಿಷಯದ ಬಗ್ಗೆ ಮಾಹಿತಿಯ ಕೊರತೆಯಿಂದ, ವಿದ್ಯಾರ್ಥಿಗಳಿಗೆ ಗೊತ್ತಿದ್ದರೂ ಅದಕ್ಕೆ ಬೇಕಾದ ಸರಿಯಾದ ಮೂಲ ಸೌಕರ್ಯ ಇರಲಿಲ್ಲ. ಆದ್ದರಿಂದ ನಾವು ಈ ಗ್ರಾಮೀಣ ಭಾಗದ ಕುಂದಾಪುರದಲ್ಲಿ ಸಿಎ ಮತ್ತು ಸಿಎಸ್ ತರಗತಿಗಳನ್ನು ಆರಂಭ ಮಾಡಿದ್ದೇವೆ ಎಂದರು. ಸುಜ್ಞಾನ್ ಎಜುಕೇಶನಲ್ ಟ್ರಸ್ಟಿನ ಕೋಶಾಧಿಕಾರಿ, ಶಿಕ್ಷಪ್ರಭಾ ಸಂಸ್ಥೆಯ ಸ್ಥಾಪಕರಾದ ಭರತ್ ಶೆಟ್ಟಿ ಮಾತನಾಡಿ ಸಿಎ ಮತ್ತು ಸಿಎಸ್ ಕೊರ್ಸುಗಳಿಗೆ ಉತ್ತಮ ತರಬೇತುದಾರರಿಂದ ಬೋಧನೆ ನೀಡಿ ವಿದ್ಯಾರ್ಥಿಗಳನ್ನು ಸಿದ್ದಗೊಳಿಸುತ್ತೇವೆ ಎಂದರು.
ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ. ರಮೇಶ್ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಎಕ್ಸ್ಲೆಂಟ್ ಕಾಲೇಜಿನಲ್ಲಿ ಸಿಎ/ಸಿಎಸ್ ತರಬೇತಿ ನೀಡಿ ಪಿಯುಸಿ ಮುಗಿಸುವ ಹೊತ್ತಿಗೆ ಒಂದಿಷ್ಟು ವಿದ್ಯಾರ್ಥಿಗಳು ಸಿಎ ಮತ್ತು ಸಿಎಸ್ ಫೌಂಡೇಶನ್ ಪರೀಕ್ಷೆ ಪೂರ್ಣಗೊಳಿಸಿರಬೇಕು ಎನ್ನುವ ಹಂಬಲದೊoದಿಗೆ ಈ ಕಾರ್ಯಕ್ಕೆ ಕೈ ಹಾಕಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳ ಪೋಷಕರು, ಎಕ್ಸ್ಲೆಂಟ್ನ ಸಮೂಹ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.