ಕೆಲಸ ಮುಗಿಸಿ ಬಂದು ಸುಸ್ತಾಗಿದ್ದ ಅಜ್ಜಯ್ಯ, ಕಾಲು ತೊಳೆದು ಚಾವಡಿ ಗೆ ಬಂದಿದ್ದರಷ್ಟೇ, ಆಗಲೇ ಬೊಬ್ಬೆ ಬಿದ್ದಿತ್ತು!!!. ಅವರೇನು ಬರಿಗೈಯಲ್ಲಿ ಮನೆಯನ್ನ ಹೊಕ್ಕಿರಲಿಲ್ಲ. ನಾಲ್ಕೈದು ಬೊಟಿ ಪ್ಯಾಕೆಟ್ಟು, ನಾಲ್ಕಾಣೆಯ ನಾಲ್ಕು ಚಾಕ್ಲೆಟ್ಟುಗಳು, ಬಲಗೈಯಲ್ಲಿ ಹಿಡಿದಿದ್ದ ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಕಣ್ಣ್ ಕಣ್ಣ್ ಬಿಡುತ್ತ, ಎಡಗೈಯಲ್ಲಿ ಹಿಡಿದಿದ್ದ ಮೀನಿನ ಚೀಲದೊಂದಿಗೆ ಅಡುಗೆ ಮನೆ ಸೇರಿದ್ದವು…
ನನಗೂ ಮೊದ ಮೊದಲು ಅರ್ಥ ಆಗಿರ್ಲಿಲ್ಲ. ನನ್ನನ್ನ ಯಾಕಿವನು ಇಷ್ಟು ಇಷ್ಟ ಪಡ್ತಿದ್ದಾನೆ ಅಂತ. ಈಗ್ಲೂ ಮಹಾ ಅರ್ಥ ಏನು ಆಗಿಲ್ಲ ಬಿಡಿ!. ಆದ್ರು ನಾನಂತು ಅವನ ಪ್ರೀತಿಯನ್ನು ತೀರಾ ಹತ್ತಿರದಿಂದ ಸವಿದವಳು. ಪ್ರತಿ ಭಾರಿ ಅವ್ನು ನನ್ನ ಹೆಸ್ರನ್ನ ಕೂಗಿದಾಗ ನನ್ನಲ್ಲೇನೋ ಪುಳಕ! ಪಾಪ, ಎಷ್ಟು ಪ್ರೀತಿಸ್ತಾನೆ ನನ್ನ!!!. ಅದೆಷ್ಟೋ ಬಾರಿ ಕಿಲೋ ಮೀಟರ್ಗಟ್ಟಲೆ ನಡೆದೆ ನನ್ನನ್ನ ನೋಡೋಕ್ ಬಂದಿದ್ದ. ನನ್ನ್ ಜೋತೆ ಎಂತೆಂತ ಸುರ ಸುಂದರಿಯರಿದ್ರೂ ಅವ್ರನ್ನ ಕಣ್ಣೆತ್ತಿಯೂ ನೋಡಿಲ್ಲ ನನ್ನ್ ಹುಡ್ಗ!!! ನಮ್ಮಿಬ್ರದ್ದು ಇವತ್ತು ನಿನ್ನೆಯ ಪ್ರೀತಿ ಅನ್ಕೊಂಡ್ರಾ???… ನೋ ವೇ ಚಾನ್ಸೆ ಇಲ್ಲ.
ಹುಟ್ಟಿದ ಎರಡು ತಿಂಗಳಲ್ಲೆ ಆಸ್ಪತ್ರೆಗೆ ದಂಡ ಯಾತ್ರೆ ಹೂಡಿದ್ದ ಭೂಪ..!!! ಮೂರು ವರ್ಷದಲ್ಲೆ 4 ಆಪರೇಷನ್…!!! ಎಳವೆಯಲ್ಲೆ ಮಣಿಪಾಲ ದ ಆಸ್ಪತ್ರೆಯಲ್ಲಿ ತನ್ನ ಚಾಕಚಕ್ಯತೆ ಮೆರೆದ ವೀರ…!!! ಇವನ ಆರ್ಭಟಕ್ಕೆ ಅಜ್ಜ ಅಜ್ಜಿ ನಡುಗಿದ್ದಷ್ಟೇ ಅಲ್ಲ, ಮಣಿಪಾಲದ ಸಿಬ್ಬಂದಿಗಳಾದಿಯಾಗಿ, ಸರ್ಜನ್ಗಳು, ಡಾಕ್ಟರ್ಗಳೂ ನಡುಗಿದ್ದರು. ಅಷ್ಟಕ್ಕೂ ಇವ್ನ ಹಟ ಬೇರಾವುದಕ್ಕೂ ಅಲ್ಲ… ನನಗಾಗಿ!!! ಅಟ್ಟದಲ್ಲಿ ಬೆಂದು, ಪೇಪರ್ ಪೊಟ್ಟಣದೊಳಗೆ ಅರ್ಧ ಕತ್ತರಿಸಿದ ಬಾಳೆ ಎಲೆಯ ತುಂಡಿನ ಮೇಲೆ ಪ್ರೀತಿಯ ಹೊಗೆ ಬಿಡುತ್ತ, ಕೂತ್ತುಂಬರಿ ಸೊಪ್ಪಿನ ಚಟ್ನಿ ಗೆ ಅಂಟಿಕೊಂಡಿರುತ್ತಿದ್ದ ಕೇವಲ ನನಗಾಗಿ!!!
ಹೌದು!!! ಇದು ನಾನೆ. ಇಡ್ಲಿ!! ಅದ್ಯಾವಾಗ ಅಜ್ಜಯ್ಯ ನನ್ನ ಹೃದಯವನ್ನು ಮುರಿದು, ಚಟ್ಟ್ನಿಗೆ ಒತ್ತಿ ಅವನ ಬಾಯಿಗೆ ಇಟ್ಟರೊ… ಅಂದೇ, ನನ್ನ ಮೇಲೆ ನಿಷ್ಕಲ್ಮಶ ಪ್ರೀತಿ ಬೆಳದು ಬಿಟ್ಟಿತು. ಎಂತಹ ಹೋಟೆಲ್ಲ್ ಹೊಕ್ಕರು ಅವನು, ಮೊದಲು ವಿಚಾರಿಸೋದು ನನ್ನನ್ನೆ. ಮೇಲೆ ಹೇಳಿದ್ದೆನಲ್ಲ, ಬೊಬ್ಬೆ ಬಿದ್ದಿತ್ತೆಂದು… ಅದೂ ಕೂಡ ನನಗಾಗಿಯೆ!. ಬೆಳಿಗ್ಗೆ ಆರು ಗಂಟೆಗೊ, ರಾತ್ರಿ ಹತ್ತು ಗಂಟೆಗೊ… ನೆನಪಾದಾಗಲೆಲ್ಲ ಅವನಿಗೆ ನಾನೇ ಬೇಕು. ಬಿಸಿ ಬಿಸಿಯಾಗಿ ಅವನ ಹೊಟ್ಟೆ ಸೇರಲೇ ಬೇಕು!
ಅಜ್ಜ ಬದುಕಿದ್ದಾಗ, ಪ್ರತಿದಿನ ಪೇಟೆಯ ಕಿಟ್ಟಯ್ಯನ ಹೊಟೆಲ್ಲಿನಿಂದ ನನ್ನನ್ನು ತಂದು ತಾವೇ ಇವನಿಗೆ ತಿನ್ನಿಸಿ ಬಾಯಿ ಒರೆಸುತ್ತಿದ್ದರು. ಮಾವ ಚಿಕ್ಕಮ್ಮರೂ ಈ ಅಭ್ಯಾಸವನ್ನು ಯಥಾವತ್ತಾಗಿ ಮುಂದುವರೆಸಿದ್ದರು. ಬಾಲ್ಯದಲ್ಲಿ ಪೇಟೆಗೆ ಹೊದಾಗಲೆಲ್ಲಾ ಸಾಂಬಾರಿನ ಜೊತೆ ನನ್ನನ್ನು ಸವಿದೆ ಬರುತ್ತಿದ್ದ. ಚಮಚದಲ್ಲಿ ನನ್ನನ್ನು ಮುರಿದು, ಸಾಂಬಾರಿಗೆ ಸೋಕಿಸಿ, ಬಾಯಿಗೆ ಸೇರಿಸುವ ಹೆಣಗಾಟದಲ್ಲಿ ಅದೆಷ್ಟು ಬಾರಿ ನಾನು ಅವನ ಅಂಗಿಯ ಮೇಲೆ ಬಿದ್ದು ಸಾಂಬಾರಿನ ಕಲೆ ಮೂಡಿಸಿದ್ದೆನೊ, ಲೆಕ್ಕವೇ ಇಲ್ಲ. ಚಮಚದಿಂದ ತಿನ್ನಲು ಸಾಧ್ಯವಾಗದೆ, ಪುಟ್ಟ ಕೈಗಳಿಂದ ನನ್ನನ್ನು ತಿನ್ನುವ ಇವನ ಸಾಹಸಕ್ಕೆ ನಾನೆಷ್ಟು ಸಾರಿ ಮನಸೊತ್ತಿದ್ದೇನೋ!!
ತಲೆಗೂದಲು ನೆರೆದು, ಕಣ್ಣೆದುರು ಬರುವಾಗಲೆಲ್ಲ, ಮಾವ, ಹತ್ತು ರುಪಾಯೊಂದಿಗೆ, ಇನ್ನೆರಡೋ ಮೂರೋ ರೂಪಾಯಿ ಜಾಸ್ತಿಯೇ ಕೊಟ್ಟು ಕಟ್ಟಿಂಗ್ ಗೆ ಕಳುಹಿಸುತ್ತಿದ್ದರು. ಕಟ್ಟಿಂಗ್ ಶಾಪ್ ಭಂಡಾರರಿಗೂ ಇವನು ಅಚ್ಚುಮೆಚ್ಚು. ಪೋಲೀಸ್ ಕಟ್ಟಿಂಗ್, ರಮೇಶ್ ಸ್ಟೈಲ್ ಎಂದೆಲ್ಲಾ ಕತ್ತರಿಯಾಡಿಸಿ, ಮುಖಕ್ಕೆ, ಕುತ್ತಿಗೆಗೆ ಪೌಡರಿನ ಬೂದಿ ಬಳಿದು, ಬುರುಡೆಗೆ ಎರಡು ಬಡಿದು ಕಳುಹಿಸುತ್ತಿದ್ದರು.
ಕಟ್ಟಿಂಗ್ ಅಂಗಡಿಯಿಂದ ಹೊರಗಡಿ ಇಟ್ಟವನೇ, ಸೀದಾ ತೆರಳುತ್ತಿದ್ದದ್ದು, ಎದುರುಗೇ ಇದ್ದ ನಾಗು ಶೆಟ್ಟರ ಹೋಟೆಲ್ಗೆ.
ಪ್ರತೀ ಬಾರಿಯೂ ಕಟ್ಟಿಂಗ್ ಮುಗಿದೊಡನೆ, ಅಂಗಿ ಕೊಡಹಿಕೊಳ್ಳುತ್ತ ನಾಗು ಶೆಟ್ಟರ ಹೋಟೆಲ್ ಗೆ ಹೋಗುತ್ತಿದ್ದದ್ದನ್ನು ಗಮನಿಸಿದ ಭಂಡಾರರು, ತಾವು ಮೊದಲು ಪಡೆಯುತ್ತಿದ್ದ ಹತ್ತು ರುಪಾಯ್ ಕಟ್ಟಿಂಗ್ ಚಾರ್ಚಿನ ಬದಲು, ಡ್ರಾಯರನ್ನು ಎಳೆದು, ಕೈಯ್ಗೆ ಸಿಗುತ್ತಿದ್ದ ಎರಡು ರೂಪಾಯಿಯನ್ನು ಇವನ ಕೈಗಿಟ್ಟು ‘ಇಡ್ಲಿ ತಿನ್ಕ ಹೋಗ್’ ಎಂದು ಕಳಿಸುತ್ತಿದ್ದರು. ಮಾವ ಕೊಟ್ಟ 2 ರೂಪಾಯ್ ಜೊತೆಗೆ ಭಂಡಾರರ ‘ಪ್ರೊತ್ಸಾಹ ಧನ’ ವೂ ಸೇರಿಸಿ ನಾಗು ಶೆಟ್ಟರ ಹೊಟೆಲಿನ ಬಿಸಿ ಇಡ್ಲಿಯನ್ನು ಚಪ್ಪರಿಸಿಯೇ ಮನೆಗೆ ತೆರಳುವುದು ಪ್ರತಿ ತಿಂಗಳ ಕಾರ್ಯಕ್ರಮವಾಗಿತ್ತು.
ಇನ್ನು ಚಿಕ್ಕಮ್ಮ ಡೈರಿಯಲ್ಲಿರುವಾಗಲೂ ಅಷ್ಟೇ. ಪಕ್ಕದಲ್ಲೆ ಇದ್ದ ಮಂಜಣ್ಣ ನ ಹೋಟೆಲ್ಗೆ ಕಾಯಂ ಗಿರಾಕಿ. ಶಾಲೆ ರಜೆ ಎಂದು ಡೈರಿಗೆ ಹೋಗಿ ಕೂರುತ್ತಿದ್ದವನನ್ನು, ಮಂಜಣ್ಣ ಮತ್ತೆ ಅವರಪ್ಪ ತುಂಬಾನೇ ಹಚ್ಚಿ ಕೊಂಡಿದ್ದ್ರು. ಸಂಜೆ ಆರಾಗುತ್ತಲೆ ತಟ್ಟೆಯ ತುಂಬಾ ಸಾಂಬಾರನ್ನು ಹಾಕಿ ಇಡ್ಲಿಯನ್ನು ಅದರಲ್ಲಿ ತೇಲಿ ಬಿಡುತ್ತಿದ್ದರು. ಪಕ್ಕದಲ್ಲೆ ಇರುತ್ತಿದ್ದ ತುಂತುರು ಪುಸ್ತಕವನ್ನು ಕೇಳಿ ಪಡೆದು ನನ್ನನ್ನು ಸವಿದು ಮನೆ ಹಾದಿ ಹಿಡಿಯುತ್ತಿದ್ದ ಇವನ ನನ್ನ ಪ್ರೀತಿಗೆ ಸಾಂಬಾರು, ಚಟ್ನಿಗಳೇ ಸಾಕ್ಷಿ.
ಈಗಂತು ಇವನು ಎತ್ತರಕ್ಕೆ ಬೆಳೆದಿದ್ದಾನೆ. ಪಟ್ಟಣವನ್ನೂ ಹೊಕ್ಕಿದ್ದಾನೆ. ಉದ್ಯೋಗಕ್ಕೆಂದು ಮಹಾನಗರವನ್ನು ಸೇರಿದ ಮೇಲೆ ನನಗಂತೂ ತುಂಬಾನೇ ಆತಂಕವಾಗಿತ್ತು. ನನ್ನನ್ನ್ಯಾಕೊ ಕೊಂಚವೆ ದೂರ ಸರಿಸುತ್ತಿರುವ ಭಾವ ಮೆಲ್ಲನೆ ಕಾವೇರಿಸಿತ್ತು. ಪಕ್ಕದಲ್ಲೆ ಇದ್ದ ನನ್ನನ್ನು ಮರೆತು, ಡಾಮಿನೋಸ್, ಮೆಕ್ ಡೊನಾಲ್ಡ್ ಬಾಗಿಲು ಸರಿಸಿ ಒಳ ಹೋಗುವಾಗಲೆಲ್ಲ ಈ ಪಿಜ್ಜಾ, ಬರ್ಗರ್ ಗಳನ್ನು ಕೊಂದೆವಬಿಡುವಷ್ಟು ಕೋಪ ನನ್ನಲ್ಲಿ ಉಕ್ಕುತಿತ್ತು. ಕಾವಲಿಯ ಮೇಲೆ ಬೆಚ್ಚನೆ ಬೆಂದು, ಕೆಂಪು ಖಾರದಿಂದ ಶೃಂಗರಿಸಿಕೊಂಡ, ಆಲೂ ಬಾಜಿಯನ್ನು ಒಡಲಲ್ಲೆ ಅಪ್ಪಿ, ತಲೆಯ ಮೇಲೆ ಬೆಣ್ಣೆಯ ತಿಲಕವನ್ನಿಟ್ಟು ಘಮ್ಮ್ ಎಂದು ನನ್ನವನನ್ನು ಮರಳು ಮಾಡುತ್ತಿದ್ದ ಬಿನ್ನಾಣ ಗಿತ್ತಿ ಮಸಾಲೆ ದೋಸೆ, ನಮ್ಮಿಬ್ಬರ ಪ್ರೀತಿಯನ್ನು ಮುರಿಯಲು ಬಂದ ಮಹಾ ಮಾರಿಯೇ ಆಗಿದ್ದಳು. ಅದೆಷ್ಟು ಬಾರಿ ನನ್ನವನನ್ನು ಕಂಡು ಕಣ್ಣು ಹೊಡೆದು ನನ್ನನ್ನೇ ತಿನ್ನುವಂತೆ ಸನ್ನೆ ಮಾಡಿದರೂ ಆ ಮಾಯಗಾತಿ ಮಸಾಲೆ ದೋಸೆಯ ಬಿಂಕದ ಚಮತ್ಕಾರ, ನನ್ನ ಹುಡುಗನನ್ನು ಕುರುಡನನ್ನಾಗಿಸಿತ್ತು. ಎಲ್ಲಾ ಮನುಷ್ಯರಂತೆ ನನ್ನವನು ಕೂಡ ಸೌಂದರ್ಯ, ರುಚಿಗೆ ಮರುಳಾಗಿ ನನ್ನನ್ನೇ ಮರೆತನೆ ಎಂಬ ಬೇಸರಕ್ಕೆ, ನಮ್ಮಿಬ್ಬರನ್ನು ದೂರ ಮಾಡಲು ಹೊಂಚು ಹಾಕುತ್ತಿರುವ ಪಟ್ಟಣದ ತಿಂಡಿಗಳಿಗೆ ಧಿಕ್ಕಾರವನ್ನೂ ಕೂಗಿದ್ದೆ.
ಅದಕ್ಕೆ ನೋಡಿ, ನಿಜ ಪ್ರೀತಿಗೆ ಎಂದೂ ಕೊನೆಯಿಲ್ಲ ಎನ್ನುವುದು!! ಕೈ ತಪ್ಪಿ ಹೋಗುತ್ತಿದ್ದ ನನ್ನವನನ್ನು ಮತ್ತೆ ಕೈಸೇರಿಸಿದ್ದು ಆ ದೇವರೆ. ಅದೂ ಸಂಗೀತದ ರೂಪದಲ್ಲಿ. ಬಸವನಗುಡಿ ಯಲ್ಲಿ ಸಂಗೀತ ಕ್ಲಾಸಿಗೆ ಹೊಗುವಾಗ ಬೆಳಗ್ಗೆ ಬೇಗನೆ ಹೊರಡಬೇಕು. ಹಾಗಾಗಿ ಮನೆಯಲ್ಲಿ ತಿಂಡಿ ತಯಾರಿಸೋಕಾಗದೆ, ಬಸ್ಸು ಇಳಿದವನೆ ಸೌತ್ ಕಿಚನ್ ಕಡೆ ತಿಂಡಿಗೆಂದು ಮುಖ ಮಾಡ್ತಿದ್ದ. ಅಲ್ಲಂತು, ನನಗೆ ಕಾಂಪಿಟೇಶನ್ ಗೆ ಅಂತಾನೆ ಬಗೆ ಬಗೆಯ ತಿಂಡಿಗಳಿದ್ದವು. ಆದರೆ ಅದರಲ್ಲಿ ಬಹುಪಾಲು ಸಿಹಿ ತಿಂಡಿಯೆ. ನನ್ನ್ ಹುಡ್ಗ ಸಿಹಿಯಿಂದ ಸ್ವಲ್ಪ ದೂರವೆ. ಹಾಗಾಗಿ ಒಂದು ನಂಬಿಕೆ… ನನ್ನನ್ನೆ ಕೇಳ್ತಾನೆ ಎಂದು. ಹೋಟೆಲ್ ಗೆ ಬಂದವನೇ ಬೋರ್ಡನ್ನು ಓದಲಾರಂಭಿಸಿದ. ಆಗಷ್ಟೇ ಅಟ್ಟದಲ್ಲಿ ಬೇಯುತ್ತಿದ್ದ ನನಗೆ ಒಂದು ರೀತಿಯ ಆತಂಕ, ನನ್ನನ್ನು ಬಿಟ್ಟು ಬೇರೆಯೋರನ್ನಾದರು ಕೇಳಿದರೆ!!! ಅಟ್ಟದಿಂದ ಇಳಿಯುವಷ್ಟರಲ್ಲಿ ನಂಬಿಕೆಯ ಕನ್ನಡಿ ಚೂರಾಗಿ ಕಣ್ಣೀರು ಅಟ್ಟದಿಂದ ಜಾರುತ್ತಿತ್ತು. ನನ್ನನ್ನು ಕೇಳುವ ಬದಲು, ಒಗ್ಗರಣೆಯ ಅವಲಕ್ಕಿ ಅವನ ತಟ್ಟೆಯನ್ನು ಸೇರಿತ್ತು. ನಾನೋ, ನನ್ನನ್ನು ಸಂಗ್ರಹಿಸಿಟ್ಟ ಪಾತ್ರೆಯಲ್ಲೇ ಕುಳಿತು ಇವನನ್ನೇ ನೋಡುತ್ತಿದೆ. ಅವಲಕ್ಕಿ ತಿಂದವನೇ ಕೈ ತೊಳೆದು ಮೆಟ್ಟಿಲಿಂದ ಕಾಲು ಕೆಳಗಿಟ್ಟಿದ್ದ. ನಾನು ಇನ್ನೊಬ್ಬರ ಪಾಲಾಗೊದರಲ್ಲಿದ್ದೆ.
ಇನ್ನೇನು, ಎಲ್ಲವೂ ಮುಗಿಯಿತು ಎನ್ನುವಷ್ಟರಲ್ಲಿ, ಆಸಾಮಿ ಬಿಲ್ ಕೌಂಟರ್ ಎದುರಿಗೆ ಮತ್ತೆ ಹಾಜರ್! ಏನನ್ನೋ ವಿಚಾರಿಸಿ, ಚೀಟಿ ಪಡೆದು ಮತ್ತೆ ತಿಂಡಿ ಕೊಡುವವನ ಕೈಗಿತ್ತ. ಆಗಲೇ ನೋಡಿ ಖುಷಿಯ ನಿಜ ಅರ್ಥ ತಿಳಿದಿದ್ದು. ಬೇರೆಯವರಿಗಿಗಾಗಿ ತಟ್ಟೆಯಲ್ಲಿ ಸಿದ್ಧವಿದ್ದ ನನ್ನ ಮೇಲೆ ಚಟ್ಟ್ನಿಯನ್ನು ಸುರಿದು ಇವನ ಕೈಗೆ ಸೇರಿಸಿಯೇ ಬಿಟ್ಟರು. ನಾನೋ ಒಮ್ಮೆಲೇ ಪ್ರೀತಿಯ ಹೊಗೆ ಸೂಸಿ, ಅವನ ಬಾಯಲ್ಲೆ ಕರಗುತ್ತಾ, ಹೊಟ್ಟೆಯಲ್ಲಿ ಲೀನವಾದೆ.
ಅಲ್ಲಿಗೆ ಮತ್ತೊಮ್ಮೆ ನಮ್ಮಿಬ್ಬರ ಪ್ರೀತಿ ಮರಳಿ ಆರಂಭವಾಯಿತು. ಭಾನುವಾರ ಬಂತೆಂದರೆ ಏನೋ ಒಂದು ತರಹ ಖುಷಿ, ಅವನು ಬರುತ್ತಾನೆ, ನನನ್ನು ಕೇಳುತ್ತಾನೆ ವ್ಹಾ!! ಅವನಿಗೂ ಅಷ್ಟೇ ವಾರವಿಡೀ ಮನೆಯ ಚಿತ್ರಾನ್ನವನ್ನೆ ತಿಂದು ಬೇಜಾರಾಗಿದ್ದು, ಭಾನುವಾರಕ್ಕಾಗಿಯೇ ಕಾಯುತ್ತಿರುತ್ತಿದ್ದ. ಬಸ್ಸು ಇಳಿದವನೆ ನನಗಾಗಿ ಓಡಿ ಬಂದು ಹೋಟೆಲ್ಲಿನ ಮೆಟ್ಟಿಲೇರುತ್ತಿದ್ದ. ದಿನ ಕಳೆದಂತೆ ಅವನಂತು ಸಂಗೀತಕ್ಕಿಂತ ಹೆಚ್ಚಾಗಿ ನನಗಾಗಿಯೇ ಬಸವನಗುಡಿ ಗೆ ಬರುತ್ತಿದ್ದನೆಂದು, ಸ್ವತಃ ಅವನೇ ಅವನ ಗಳೆಯರಲ್ಲಿ ಹೇಳಿಕೊಂಡಿದ್ದು ನಾನೇ ಆಲಿಸಿದ್ದೆ. ಒಮ್ಮೋಮ್ಮೆ ನಾನು ಸಿಗದೆ ಇದ್ದಾಗ ಅವನೆಷ್ಟು ಬೇಸರಗೊಂಡಿದ್ದಾನೆ ಗೊತ್ತ. ಪಾಪ ಅವನು!
ದೂರದಲ್ಲಿದ್ದ ಕಾರಣ ಮನೆಯಲ್ಲಿ ತಯಾರಿಸುತ್ತಿದ್ದ ಇಡ್ಲಿಯನ್ನು ತುಂಬಾನೆ ಮಿಸ್ ಮಾಡಿಕೊಂಡಿದ್ದ ನಮ್ಮವನು, ಗೆಳೆಯರೊಂದಿಗೆ ಸೇರಿ ತಾನೇ ಸ್ವತಃ ನನ್ನನ್ನು ತಯಾರಿಸುವ ಪ್ರಯತ್ನಕ್ಕೂ ಕೈ ಹಾಕಿದ್ದ. ಅದಕ್ಕಾಗಿ ಅಂಗಡಿಯಿಂದ ಉದ್ದಿನ ಬೇಳೆ, ಅಕ್ಕಿಯನ್ನು ತಂದು, ನೆನೆಹಾಕಿ, ಮಿಕ್ಸಿಯಲ್ಲಿ ರುಬ್ಬಿ, ಅಟ್ಟದಲ್ಲಿ ಬೇಯಿಸಿಯೇ ಬಿಟ್ಟಿದ್ದ. ನನ್ನನ್ನು ತಯಾರಿಸುವಾಗ ಅವನಿಗೆ ನನ್ನ ಮೇಲಿದ್ದ ಕಾಳಜಿ, ಸಹನೆಗೆ ಇನ್ನೆಷ್ಟು ಧನ್ಯವಾದ ಹೇಳಲಿ. ತಾನು ತಯಾರಿಸಿದ ಇಡ್ಲಿಗೆ ತಾನೇ ಚಟ್ನಿಯನ್ನು ಮಾಡಿ ಓನರ್ ಆಂಟಿಗೂ ನೀಡಿ ಅವರಿಂದಲೂ ಭೇಷ್ ಎನಿಸಿಕೊಂಡಾಗ, ನನಗೆ ಅವನ ಮೇಲಿದ್ದ ಪ್ರೀತಿ ಇಮ್ಮಡಿಯಾಗಿ, ತೊಳಲ್ಲಿ ಅಭಿಮಾನದ ರೆಕ್ಕೆಗಳೂ ಮೂಡಿದ್ದವು.
ದುಡ್ಡು ಕೊಟ್ಟರೆ ನಾಲಿಗೆಗೆ ರುಚಿ ನೀಡುವ ಸಾವಿರ ಬಗೆಯ ತಿಂಡಿಗಳು ದೊರೆಯುತ್ತವೆ. ನಮ್ಮವನು ಅವನ್ನೆಲ್ಲ ತಿಂದಿದ್ದಾನೆ, ತಿನ್ನುತ್ತಲೂ ಇದ್ದಾನೆ. ಆದರೆ ನನ್ನ ಮೇಲಿನ ಪ್ರೀತಿ ಅವಗಳೆದುರು ಮುಗಿಲೆತ್ತರವೆ ಸರಿ. ಅವನ ಬಾಲ್ಯದಿಂದಲೂ ಇಂದಿನ ಒರೆಗು ಅವನೆಂದು ನನ್ನನ್ನು ದೂರಿಲ್ಲ, ದೂರ ಸರಿಸಲೂ ಇಲ್ಲ. ಮನೆಯ ಮಕ್ಕಳಿಗೂ ನನ್ನ ರುಚ್ಚಿಯನ್ನು ಹಚ್ಚಿಸಿದ್ದಲ್ಲದೆ, ಆಫೀಸಿನ ಮಂದಿಗೂ ನನ್ನನ್ನೇ ಆರ್ಡರ್ ಮಾಡುತ್ತಾನೆ. ಅವನ ಪಾಲಿನ ಆರೋಗ್ಯಕ್ಕೂ, ನಾಲೆಗೆಗೂ ಹಿತವೆನಿಸಿರುವ ನನಗೆ ಇದಕ್ಕಿಂತ ಪದ್ಮಶ್ರೀ ಬೇರಾವುದಿದೆ??? ಅವನಷ್ಟು ನನ್ನನ್ನು ಮೆಚ್ಚಿಕೊಂಡವರು ಬೇರಾರು ಇಲ್ಲ… ಅವನೆಂದಿಗು ನನ್ನನ್ನೇ ಬಯಸಲಿ ಎನ್ನುವ ಸ್ವಾರ್ಥ ನನ್ನದು…
ನಮ್ಮಿಬ್ಬರ ಬಂಧ ನಿತ್ಯ ನಿರಂತರವಾಗಿರಲೆಂದು ನೀವೂ ಹಾರೈಸುವಿರಲ್ಲವೇ???…
ಲೇಖನ : ಶಿವಪ್ರಸಾದ್ ವಕ್ವಾಡಿ
Nice bro, awesome ❤️
Nice one..
ಅತೀ ಸರಳ ಮತ್ತು ನೈಜ್ಯತೆಯಿ೦ದ ಕೂಡಿದ ಲೇಖನವೆನಿಸಿತು…ಓದಿನ ಆದಿಯಿ೦ದ ಅ೦ತ್ಯದೊರೆಗೂ ಓದುಗರನ್ನ ಹಿಡಿದಿಟ್ಟುಕೊ೦ಡು ಓದಿಸಿಕೊಳ್ಳುತ್ತಾ ಹೋಗುತ್ತದೆ..ತು೦ಬಾ ಹತ್ತಿರವೆನಿಸಿದ ಲೇಖನ..☺