ಗಂಗೊಳ್ಳಿ(ನ,2): ಕನ್ನಡ ಮಾಧ್ಯಮದ ಓದಿನ ಬಗ್ಗೆ ಯಾವತ್ತೂ ಕೀಳರಿಮೆಯನ್ನು ಬೆಳೆಸಿಕೊಳ್ಳದಿರಿ. ಸಾಧನೆ ಮಾಡುವ ಛಲ ಮತ್ತು ಪರಿಶ್ರಮ ಇದ್ದಾಗ ಯಶಸ್ಸು ಗಳಿಸಲು ಭಾಷಾ ಮಾಧ್ಯಮ ಯಾವತ್ತೂ ಅಡ್ಡಿಯಾಗಲಾರದು ಎಂದು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅಭಿಪ್ರಾಯಪಟ್ಟರು.
ಅವರು ಬೆಂಗಳೂರು ಹೋಟೆಲ್ ನ್ಯೂಸ್ ಮಾಸಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಗಂಗೊಳ್ಳಿಯಲ್ಲಿ ನಡೆದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು. ಈ ಸ್ಪರ್ಧಾತ್ಮಕ ಯುಗದಲ್ಲಿ ಇತರ ಭಾಷೆಗಳನ್ನು ಕಲಿಯುವ ಅವಶ್ಯಕತೆ ಇದೆ. ಆದರೆ ನಮ್ಮ ಆದ್ಯತೆ ಯಾವತ್ತೂ ಕನ್ನಡಕ್ಕೆ ಮೊದಲಾಗಿರಲಿ ಎಂದು ಅವರು ಹೇಳಿದರು.
ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ಮಹಾಬಲ ಆಚಾರ್ಯ ಧ್ವಜಾರೋಹಣವನ್ನು ನೆರವೇರಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಗಂಗಾಧರ ಪೈ ಶಂಕರ ಜಿ.ಭಾಸ್ಕರ, ಲಕ್ಷ್ಮಣ, ಗುರು ಪಟೇಲ್, ಗಣೇಶ, ಭಾಸ್ಕರ ಪೂಜಾರಿ, ಆನಂದ ಪೂಜಾರಿ ನಾಗರಾಜ ಶೇರುಗಾರ್, ಯಶವಂತ ಖಾರ್ವಿ, ಶ್ರೀಧರ ಶೇರುಗಾರ್, ಗೋವಿಂದ ನಾಯಕ್ , ಸಂತೋಷ ಖಾರ್ವಿ ಅಂತೋನಿ ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕ ಕರಾವಳಿ ನಾಗರಿಕ ಹಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಕೊಡೇರಿ ಮನೆ ಸ್ವಾಗತಿಸಿದರು. ಸುರೇಶ್ ಜಿ ಎಫ್ ಸಿ ಎಸ್ ಕಾರ್ಯಕ್ರಮ ನಿರ್ವಹಿಸಿದರು. ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಗೋಪಾಲ ಪೂಜಾರಿ ವಂದಿಸಿದರು. ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕನ್ನಡ ಗೀತೆಗಳನ್ನು ಹಾಡಿದರು.