ಸಿನಿಮಾಗಳಲ್ಲಿ ಕುಂದಗನ್ನಡ ಭಾಷೆ ಕಾಣಸಿಗುವುದೇ ಅಪರೂಪ, ಸಿಕ್ಕರೂ ಅಲ್ಲಿಲ್ಲೊಂದು ಸಿಗಬಹುದೋ ಏನೋ. ಒಂದೆರಡು ಕುಂದಗನ್ನಡ ಸಿನಿಮಾಗಳು ಬಂದುಹೋದವು ಕೂಡ. ಇದೀಗ ಮತ್ತೆ ಕುಂದಗನ್ನಡವನ್ನು ಥಿಯೇಟರ್ಗಳಲ್ಲಿ ಸವಿಯುವ ಅವಕಾಶ ಬಂದಿದೆ. ಹೌದು ಅನೇಕ ಸಿನಿಮಾಗಳಲ್ಲಿ ನಟಿಸಿ, ಕುಂದಾಪುರದ ವಜ್ರಮುನಿ ಎಂದು ಬಿರುದನ್ನ ಪಡೆದಂತಹ ಓಂ ಗುರು ಬಸ್ರೂರು ಅವರ ನೇತೃತ್ವದಲ್ಲಿ ಕುಂದಗನ್ನಡ ಚಿತ್ರವೊಂದು ಮೂಡಿಬಂದಿದೆ. ಈ ಚಿತ್ರಕ್ಕೆ ಕುಂದಾಪುರ ಎಂದು ಹೆಸರನ್ನಿಟ್ಟಿದ್ದಾರೆ. ಜಿ.ಸಿ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಸ್ವತಃ ಓಂ ಗುರು ಬಸ್ರೂರು ಅವರೇ ರಚಿಸಿ ನಿರ್ದೇಶಿಸಿದ್ದಾರೆ. ನಿರ್ಮಾಣದ ಜವಾಬ್ದಾರಿಯನ್ನೂ ಸಹ ನಿರ್ದೇಶಕ ಓಂ ಗುರು ಮತ್ತು ಚಂದ್ರಶೇಖರ್ ಅವರು ಹೊತ್ತುಕೊಂಡಿದ್ದಾರೆ.
ಈ ಸಿನೆಮಾ ಬರೀ ಹಾಡು ಮತ್ತು ಫೈಟ್ ದೃಶ್ಯಗಳಿಗೆ ಸೀಮಿತವಾಗಿರದೆ ಪ್ರೇಕ್ಷಕರಲ್ಲಿ ಕೊನೆಯವರೆಗೂ ಕುತೂಹಲವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಬಹು ಮುಖ್ಯಪಾತ್ರವನ್ನು ವಹಿಸುತ್ತದೆ ಎಂಬುವುದು ಚಿತ್ರತಂಡದ ನಂಬಿಕೆ. ತನಿಖೆಯ ಸುತ್ತ ಸುತ್ತುವ ಈ ಕಥೆ ಸಸ್ಪೆನ್ಸ್ ಮತ್ತು ತಿರುವುಗಳಿಂದ ಪ್ರೇಕ್ಷಕರ ಮನವನ್ನು ಗೆಲ್ಲುತ್ತದೆ.
ಚಿತ್ರದಲ್ಲಿ ದೊಡ್ಡ ತಾರಾಬಳಗವಿದ್ದು, ಓಂ ಗುರು ಬಸ್ರೂರ್, ಚಂದ್ರಶೇಖರ್ ಬಸ್ರೂರ್, ರಘು ಪಾಂಡೇಶ್ವರ, ನಾಗರಾಜ್ ತೆಕ್ಕಟ್ಟೆ, ಕರುಣಾಕರ್ ಕುಂದರ್, ಕವನ ಜಾಗ್ವಾರ್ ಪ್ರಮುಖ ತಾರಾಬಳಗದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಭೈರವಗೀತಾ, ಕಟಕ, ಮಪ್ತಿ, ಭರ್ಜರಿ ಚಿತ್ರದಲ್ಲಿ ಕಳನಾಯಕನಾಗಿ ಮಿಂಚಿದಂತಹ ಬಾಲರಾಜ್ ವಾಡಿಯವರನ್ನೂ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನೋಡಬಹುದಾಗಿದೆ. ಈ ಚಿತ್ರಕ್ಕೆ ಉತ್ತಮ್ ಸಾರಂಗ್ ಅವರ ಸಂಗೀತವಿದ್ದು, ಸಾಹಸದಲ್ಲಿ ನಟರಾಜ್ ಅವರು ಕೈ ಜೋಡಿಸಿದ್ದಾರೆ. ಈ ಚಿತ್ರಕ್ಕೆ ಕುಂದಾಪುರದ ಪ್ರತಿಭೆಯಾದ ಪ್ರವೀಣ್ ನಾಡ ಅವರ ಛಾಯಾಗ್ರಹಣವಿದೆ.
ಸಿನಿಮಾದ ಟ್ರೈಲರ್ ಈಗಾಗಲೆ ಬಿಡುಗಡೆಯಾಗಿದ್ದು ಭರ್ಜರಿ ವೀಕ್ಷಣೆಯತ್ತ ಮುನ್ನುಗ್ಗುತ್ತಿದೆ. ಚಿತ್ರ ಇದೇ ಬರುವ ಮುಂದಿನ ಫೆಬ್ರವರಿ 26 ರಂದು ವಿನಾಯಕ ಹಾಗೂ ಭಾರತ್ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ಕುಂದಗನ್ನಡ ಪ್ರೇಕ್ಷಕ ಅಭಿಮಾನಿಗಳ ನಿರೀಕ್ಷೆಯಲ್ಲಿದ್ದು, ಕುಂದಾಪುರದ ಮಂದಿ, ಕುಂದಗನ್ನಡದ ಅಭಿಮಾನಿಗಳು ಚಿತ್ರವನ್ನ ಯಶಸ್ವಿಗೊಳಿಸುತ್ತಾರೆ ಎಂಬುದು ಚಿತ್ರತಂಡದ ಭರವಸೆ.
ಲೇಖನ : ರಸಿಕ್ ಶೆಟ್ಟಿ
ಉಪನ್ಯಾಸಕರು