ಉಡುಪಿ(ನ,8): ಆಗಸ್ಟ್ 15ರಂದು ದೇಶಾಭಿಮಾನ, ನವೆಂಬರ್ 1ರಂದು ಭಾಷಾಭಿಮಾನಗಳು ಜಾಗೃತವಾಗುತ್ತವೆ. ದಿನನಿತ್ಯ ಕನ್ನಡವನ್ನು ಆಡಿದ ಅಥವಾ ಓದಿದ ಮಾತ್ರಕ್ಕೆ ಕನ್ನಡ ಬೆಳೆಯುವುದಿಲ್ಲ. ಭಾಷೆಯನ್ನು ಪ್ರೀತಿಸದೆ, ಗೌರವಿಸದೆ, ಮಮಕಾರವಿಲ್ಲದೆ ಭಾಷೆಯನ್ನು ಬೆಳೆಸುವುದಕ್ಕೆ ಅಥವಾ ಉಳಿಸುವುದಕ್ಕೆ ಸಾಧ್ಯವಿಲ್ಲ. ತಮಿಳರಿಗೆ, ಮಲಯಾಳಿಗಳಿಗೆ ಹೋಲಿಸಿದರೆ ನಮ್ಮಲ್ಲಿ ಭಾಷಾಭಿಮಾನದ ಕೊರತೆ ಎದ್ದುಕಾಣುತ್ತದೆ.
ನಾವು ಅವರಿಂದ ಭಾಷಾಭಿಮಾನ, ಭಾಷಿಕ ಪ್ರೀತಿ, ಗೌರವಗಳನ್ನು ಕಲಿಯಬೇಕಾಗಿದೆ. ಭಾಷೆ ಎಂಬುದು ಕೇವಲ ಸಂವಹನ ಸಾಧನ ಮಾತ್ರವಲ್ಲ, ಅದೊಂದು ಸಂಸ್ಕೃತಿಯೂ ಹೌದು, ಅದೊಂದು ಪರಂಪರೆಯೂ ಹೌದು. ಭಾಷೆಯನ್ನು ಪ್ರೀತಿಸದೆ, ಗೌರವಿಸದೆ, ಆಡದೆ ಹೋದರೆ ಒಂದು ಭಾಷೆ ಅಳಿದು ಹೋಗಬಹುದು. ಅದರೊಂದಿಗೆ ಸಂಸ್ಕೃತಿಯೂ ಪರಂಪರೆಯೂ ಅಳಿದುಹೋಗುತ್ತದೆ. ನಮ್ಮ ಹಿರಿಯರಿಂದ ಕನ್ನಡ ನಮಗೆ ದೊರೆತಿದೆ. ನಾವು ಅದನ್ನು ಇನ್ನೂ ಬೆಳೆಸಿ ಮುಂದಿನ ಪೀಳಿಗೆಗೆ ನೀಡಬೇಕಾಗಿದೆ. ನಮ್ಮ ತನುಮನಗಳು ಇದಕ್ಕೆ ಸ್ಪಂದಿಸಬೇಕು. ಆಗಲೇ ಕನ್ನಡ ರಾಜ್ಯೋತ್ಸವಕ್ಕೆ ಒಂದು ನೆಲೆ, ಬೆಲೆ, ಅರ್ಥಗಳು ಒದಗುತ್ತವೆ. ಅದೇ ನಿಜವಾದ ರಾಜ್ಯೋತ್ಸವ ಎಂದು ಸಾಹಿತ್ಯ ವಿಮರ್ಶಕ ಡಾ. ವಸಂತ ಕುಮಾರ್ ಕಾರ್ಕಳ ಹೇಳಿದರು.
ಅವರು ಕನ್ನಡ ರಾಜೋತ್ಸವದ ಅಂಗವಾಗಿ ಉಡುಪಿ ಮಹಾತ್ಮ ಗಾಂಧಿ ಮೆಮೊರಿಯಲ್ ಕಾಲೇಜಿನಲ್ಲಿ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಯೋಜಕ ಪ್ರೊ. ಅರುಣ್ ಕುಮಾರ್ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪುತ್ತಿ ವಸಂತ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪ್ರವೀಣ್ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಕೃಪಾ ಸ್ವಾಗತಿಸಿ ನವ್ಯ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ನಡೆಯಿತು.