ಕುಂದಾಪುರ (ನ,15): ಇವತ್ತಿನ ನಮ್ಮ ದೈನಂದಿನ ಜೀವನದಲ್ಲಿ ದೇಹದಂಡನೆ ಕಡಿಮೆಯಾಗಿರುವುದರಿಂದ ವ್ಯವಸ್ಥಿತವಾದ ತರಬೇತಿ ಆಧರಿತ ಕ್ರೀಡೆಯ ಅಗತ್ಯವಿದೆ. ದಿನ ನಿತ್ಯವೂ ಅಲ್ಪ ಸಮಯವನ್ನಾದರೂ ನಾವು ದೇಹಬಲವನ್ನು ಹೆಚ್ಚಿಸುವಂಥ ಕಾರ್ಯಗಳಿಗೆ ನೀಡಬೇಕು” ಎಂದು ಕುಂದಾಪುರ ತಾಲೂಕು ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯವರಾದ ಶ್ರೀ ಕುಸುಮಾಕರ ಶೆಟ್ಟಿಯವರು ಹೇಳಿದರು . ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕರೂ, ಬೈಂದೂರಿನ ಶಾಸಕರೂ ಆದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿಯವರು ಮಾತನಾಡಿ ಶಾರೀರಿಕ ಧೃಢತೆಯ ಮೂಲಕ ಬೌದ್ಧಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬಹುದು ಎಂದು ತಿಳಿಸಿದರು.
ಕುಂದಾಪುರ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀ ಸೀತಾರಾಮ್ ನಕ್ಕತ್ತಾಯರವರು ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಜತೆ-ಕಾರ್ಯದರ್ಶಿ ಶ್ರೀ ಸುಧಾಕರ ಶೆಟ್ಟಿ ಭಾಂಡ್ಯ, ಸದಸ್ಯರಾದ ಶ್ರೀ ವೈ. ಎಸ್. ಹೆಗ್ಡೆ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಸುಮತಿ ಶೆಣೈಯವರು ಕ್ರೀಡಾಜ್ಯೋತಿ ಕಾರ್ಯಕ್ರಮವನ್ನು ನಿರ್ವಹಿಸಿದರು. ದ್ವಿತೀಯ ಪಿ.ಯು.ಸಿ ಯ ಸುದೀಪ್ ಶೆಟ್ಟಿ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಧನ್ಯವಾದ ಸಲ್ಲಿಸಿದರು. ರಸಾಯನ ಶಾಸ್ತ್ರ ಪ್ರಾಧ್ಯಾಪಕಿ ಜಾನೀಸ್ ನತಾಶಾ ಡಿಸೋಜಾರವರು ಕಾರ್ಯಕ್ರಮ ನಿರೂಪಿಸಿದರು.
ಪ್ರಥಮ ಪಿ.ಯು.ಸಿ ವಾಣಿಜ್ಯ ವಿಭಾಗದ ಪ್ರೇಕ್ಷಣ್ ಹಾಗೂ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದ ಸಮೀಪಾ ಶೆಟ್ಟಿ ಇವರು ಅನುಕ್ರಮವಾಗಿ ಕ್ರೀಡಾಗ್ರೇಸರ ಮತ್ತು ಕ್ರೀಡಾಗ್ರೇಸರೆಯಾಗಿ ಮೂಡಿಬಂದರು.