ಶಿರ್ವ(ನ,24): ಇಲ್ಲಿನ ಶಿರ್ವ ಸಂತಮೇರಿ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗ ಹಾಗೂ ಐಟಿ ಕ್ಲಬ್ ಜಂಟಿಯಾಗಿ ಜ್ಞಾನ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕೇಂಜಾರು ಶ್ರೀದೇವಿ ಸಮೂಹ ಸಂಸ್ಥೆಯಲ್ಲಿ ಏರ್ಪಡಿಸಿದ ಐಓಟಿ ಯೋಜನೆಯ ಅಭಿವೃದ್ಧಿಯ ಕಾರ್ಯಗಾರವನ್ನು ಅಧ್ಯಾಯನ ಮಾಡಲು ಇತ್ತೀಚೆಗೆ ಭೇಟಿ ನೀಡಿದರು.
ಮುಖ್ಯ ಅತಿಥಿ ಮಂಗಳೂರಿನ ಐಕ್ಯೂ ಮ್ಯಾಟ್ರಿಕ್ಸ್ ನಿರ್ದೇಶಕ ಅಜಯ್ ಪ್ರಿನ್ಸ್ಟನ್ ಪಿಂಟೋ ರವರು ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡುತ್ತಾ , ಐಓಟಿ ಅಭಿವೃದ್ಧಿ ಎಂದರೆ ಹಾರ್ಡ್ವೇರ್ ಭಾಗಗಳು ಮತ್ತು ಸಾಫ್ಟ್ವೇರ್ ಪ್ರೋಗ್ರಾಂಗಳನ್ನು ಸಂಯೋಜಿಸುವುದು.ಅಂತಿಮ ಉತ್ಪನ್ನವು ನಿರ್ದಿಷ್ಟ ಮೌಲ್ಯಗಳನ್ನು ಮೇಲ್ವಿಚಾರಣೆ ಮಾಡಲು, ಡೇಟಾವನ್ನು ಸಂಗ್ರಹಿಸಲು ಮತ್ತು ವರ್ಗಾಯಿಸಲು, ನೀಡಿರುವ ಡೇಟಾವನ್ನು ವಿಶ್ಲೇಷಿಸಲು ಮತ್ತು ಭೌತಿಕ ಸಾಧನವು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಕಾರಣವಾಗುತ್ತದೆ. ಅಂತಹ ವ್ಯವಸ್ಥೆಗಳನ್ನು ರಚಿಸುವುದು ನಿಜವಾದ ಸವಾಲು.ಇದಲ್ಲದೆ, ಇಂಟರ್ನೆಟ್ ಆಫ್ ಥಿಂಗ್ಸ್ ಈಗಾಗಲೇ ತನ್ನದೇ ಆದ ಉದ್ಯಮವಾಗಿ ರೂಪಾಂತರಗೊಂಡಿದೆ, ಆದ್ದರಿಂದ ವಿಶ್ವಾಸಾರ್ಹ ಮತ್ತು ಸಮಗ್ರ ಡೆವಲಪರ್ ಟೂಲ್ಕಿಟ್ಗಳ ಅಗತ್ಯವೂ ಹೆಚ್ಚಾಗಿದೆ. ಸಂಕೀರ್ಣ ಅಪ್ಲಿಕೇಶನ್ಗಳನ್ನು ರಚಿಸಲು ಅಗತ್ಯವಿರುವ ಐಓಟಿ ಅಭಿವೃದ್ಧಿ ಸಾಧನಗಳನ್ನುಐಓಟಿ ಹಾರ್ಡ್ವೇರ್ ಸಾಧನಗಳು ಪ್ರತಿನಿಧಿಸುತ್ತವೆ ಎಂದು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಮಂಗಳೂರಿನ ಐಕ್ಯೂ ಮ್ಯಾಟ್ರಿಕ್ಸ್ ಸಿಬ್ಬಂದಿ ಪದ್ಮ ಪ್ರಸಾದ್ ರವರು ಆಧುನಿಕತೆಯ ಕಾಣ್ಕೆಯಾದ ತಾಂತ್ರಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಸ ಆವಿಷ್ಕಾರಗಳಿಗೆ ಪೂರಕವೆಂಬಂತೆ ಹಲವಾರು ಶೈಕ್ಷಣಿಕ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಪ್ರಾತ್ಯಕ್ಷಿಕೆಯ ಪ್ರದರ್ಶನದೊಂದಿಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾಗ೯ದಶ೯ದಲ್ಲಿ ನಡೆಯಿತು. ಶ್ರೀದೇವಿ ಸಮೂಹ ಸಂಸ್ಥೆಯ ಪ್ರಾಂಶುಪಾಲ ಡಾ ಕೆ ಇ ಪ್ರಕಾಶ್, ಎಂಸಿಎ ವಿಭಾಗದ ಮುಖ್ಯಸ್ಥರಾದ ಆನಂದ್ ಎಸ್ ಉಪ್ಪಾರ್, ಪ್ರೊ. ಸರಸ್ವತಿ, ಪ್ರೊ. ಪ್ರಕೃತಿ ಎಸ್ ಬಂಡಾರಿ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಐಟಿ ಕ್ಲಬ್ ಡೈರೆಕ್ಟರ್ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್, ಉಪನ್ಯಾಸಕ ಪ್ರಕಾಶ್,ಬಿಸಿಎ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜು ವಿದ್ಯಾರ್ಥಿಗಳಾದ ದೀಪಕ್ ಎಂ, ಭವಾನಿ ಶೇಷ, ಸುಕೇಶ್ , ಅನುಪ್ ನಾಯಕ್ ಮತ್ತು ಅಲಿಸ್ಟರ್ ಕಾರ್ಯಾಗಾರದಲ್ಲಿ ಸಹಕರಿಸಿದರು. ರೋಲ್ಯಾಂಡ್ ಮೆಂಡೋನ್ಕಾ ವಂದಿಸಿದರು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.